ಇತ್ತೀಚಿನ ಸುದ್ದಿ
ಕಲಬುರಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ, ಭದ್ರತೆಗೆ ಪ್ರವಾಸಿ ಮಿತ್ರ: ತರಬೇತಿ ಪಡೆದ ಗೃಹರಕ್ಷಕ ತಂಡ
04/07/2025, 12:55

ಕಲಬುರಗಿ(reporterkarnataka.com): ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ, ಭದ್ರತೆ ಹಾಗೂ ಪ್ರವಾಸಿ ತಾಣಗಳ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 2015ನೇ ಸಾಲಿನಲ್ಲಿ ತರಬೇತಿ ಪಡೆದ ಗೃಹರಕ್ಷಕ ಸಿಬ್ಬಂದಿಗಳನ್ನು ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿ ಮಿತ್ರ ( ಟೂರಿಸ್ಟ್ ಪೊಲೀಸ) ಹೆಸರಿನಡಿ ಯೋಜನೆಯನ್ನು ಕಲಬುರಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.
ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳಾದ ಶ್ರೀಶರಣಬಸವೇಶ್ವರ ದೇವಸ್ಥಾನ, ಬುದ್ದ ವಿಹಾರ, ಕಲಬುರಗಿ ಕೋಟೆ, ಪ್ರಾಣಿ ಸಂಗ್ರಹಾಲಯ, ಪ್ರಾಚ್ಯ ವಸ್ತು ಸಂಗ್ರಹಾಲಯ, ಘತ್ತರಗಿ ಭಾಗ್ಯವಂತಿ ದೇವಸ್ಥಾನ, ಗಾಣಗಾಪೂರ ದತ್ತ ದೇವಸ್ಥಾನ, ಲಾಡ್ಲೆ ಮಶಾಕ ದರ್ಗಾ, ಮಳಖೇಡ ಕೋಟೆ, ಚಂದ್ರಂಪಳ್ಳಿ ಜಲಾಶಯ ಹೀಗೆ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲಾದ ಕಲಬುರಗಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರ ಯೋಜನೆಯಡಿ ತರಬೇತಿ ಪಡೆದ ಜಿಲ್ಲೆಯ ಒಟ್ಟು 48 ಪ್ರವಾಸಿ ಮಿತ್ರ ಸಿಬ್ಬಂದಿಗಳನ್ನು ಹಂತ ಹಂತವಾಗಿ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರ ಸೂಕ್ತ ಭದ್ರತೆ ಹಾಗೂ ಅಗತ್ಯ ಮಾಹಿತಿಗಳ ಪೂರೈಕೆಗಾಗಿ ನಿಯೋಜಿಸಲಾಗಿದೆ.
2015ರಲ್ಲಿ ಪ್ರಾರಂಭವಾದ ಈ ಯೋಜನೆಯುಡಿ ಗೃಹ ರಕ್ಷಕದಳದ ಅರ್ಹ ಸಿಬ್ಬಂದಿಯನ್ನು ಈ ಯೋಜನೆಯಡಿ ಆಯ್ಕೆ ಮಾಡಿ ಒಂದು ತಿಂಗಳುಗಳ ಕಾಲ ಪ್ರವಾಸಿತಾಣಗಳ ಕುರಿತು, ಪ್ರವಾಸಿಗರೊಂದಿಗಿನ ಸೌಜನ್ಯ ದಿಂದ ವರ್ತಿಸುವದರಿಂದ ಹಿಡಿದು, ಪೊಲೀಸ ನಿಯಮಾವಳಿಗಳಾದಿಯಾಗಿ ವಿಶೇಷ ತರಬೇತಿ ನೀಡಲಾಗಿರುತ್ತದೆ.
ಪ್ರವಾಸಿ ಮಿತ್ರರಿಗೆ ವಿಶೇಷವಾದ ಸಮವಸ್ತ್ರವನ್ನು ಪ್ರವಾಸೋದ್ಯಮ ಇಲಾಖೆಯು ನಿಗದಿ ಪಡಿಸಿರುವದರಿಂದ ಇವರನ್ನು ಪ್ರವಾಸಿತಾಣಗಳಲ್ಲಿ ಗುರುತಿಸಲು ಸಹಕಾರಿಯಾಗಿದೆ,
ಇಂದು 40 ಪ್ರವಾಸಿ ಮಿತ್ರರಿಗೆ ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ನೂತನ ಸಮವಸ್ತ್ರಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಇಂದು ಕಲಬುರಗಿ ಯಲ್ಲಿ ವಿತರಿಸಿದರು.