ಇತ್ತೀಚಿನ ಸುದ್ದಿ
ಟಿಕೆಟ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ: ಚೈತ್ರಾ ಟೀಂ ಮುಂದೆ ಬಿಟ್ಟು ಡೀಲ್ ಮಾಡಿದವರು ಯಾರು?
14/09/2023, 20:06

ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.ಕಂ
ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ವಂಚಿಸಿದ ಪ್ರಕರಣದಲ್ಲಿ ಹಿಂದುತ್ವ ಬಗ್ಗೆ ತಾಸುಗಟ್ಟಲೆ ಭಾಷಣ ಬಿಗಿಯುತ್ತಿದ್ದ ಚೈತ್ರಾ ಕುಂದಾಪುರ ಜತೆ ಇನ್ನಷ್ಟು ನಾಯಕರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹರಿದಾಡಲಾರಂಭಿಸಿದೆ.
ಪ್ರಖರ ಭಾಷಣಗಾರ್ತಿಯಾದ ಚೈತ್ರಾ ಕುಂದಾಪುರ ಅವರನ್ನು ಮುಂದಿಟ್ಟುಕೊಂಡು ಹಲವು ಮಂದಿ ನಾಯಕರು ಈ ವಂಚನೆಯ ಯೋಜನೆ ರೂಪಿಸಿದ್ದಾರೆ. ಬಾಯಿಯನ್ನೇ ಬಂಡವಾಳ ಮಾಡಿಕೊಂಡಿದ್ದ ಹದಿಹರೆಯದ ಹೆಣ್ಣು ಮಗಳು ಚೈತ್ರಾ ಕುಂದಾಪುರಳಿಗೆ ಖ್ಯಾತಿ ಹಾಗೂ ಹಣದ ಆಸೆ ತೋರಿಸಿ ಈ ವಂಚನೆಯ ಯೋಜನೆಯನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲೇ ಪ್ರಕರಣ ಬೆಳಕಿಗೆ ಬಂದು ಕೆಲವು ತಿಂಗಳು ಕಳೆದರೂ ಚೈತ್ರಾ ಕುಂದಾಪುರ ಬಂಧನವಾಗುವವರೆಗೆ ಬಿಜೆಪಿಯ ಯಾವುದೇ ನಾಯಕರು ತುಟಿ ಪಿಟಿಕ್ ಅನ್ನಲಿಲ್ಲ ಎನ್ನಲಾಗಿದೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಹಾಗೂ ಟೀಮನ್ನು ಉಡುಪಿಯಲ್ಲಿ ಬಂಧಿಸುತ್ತಿದ್ದಂತೆ ಬಿಜೆಪಿ ನಾಯಕರು ಚೈತ್ರಾಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ಹಾಗಾದರೆ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚೈತ್ರಾ ಕುಂದಾಪುರ ಬಾಡಿಗೆ ಭಾಷಣಕಾರಳಾಗಿ ಬಂದಿರುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರಲಾರಂಭಿಸಿದೆ. ಇದಲ್ಲದೆ ಬಂಧನಕ್ಕೊಳಗಾದ ಬಳಿಕ ಸ್ವತಃ ಚೈತ್ರಾಳೇ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಹೊಸಪೇಟೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀಸ್ವಾಮೀಜಿ ಅವರ ಬಂಧನವಾದರೆ ಇದರಲ್ಲಿ ದೊಡ್ಡ ದೊಡ್ಡ ಹೆಸರು ಹೊರಬೀಳಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಚೈತ್ರಾಳ ಬಂಧನವಾಗುತ್ತಿದ್ದಂತೆ ಹಾಲುಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಇಳಿಯುತ್ತಿದ್ದಂತೆಯೇ ಮಾಧ್ಯಮಗಳ ಜೊತೆಗೆ ಮಾತನಾಡಿದ ಚೈತ್ರಾ ಕುಂದಾಪುರ, ಸ್ವಾಮೀಜಿಯ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗ ಆಗುತ್ತದೆ ಎಂದಿದ್ದಾರೆ.
ಆರಂಭದಲ್ಲಿ ಇದು ಬಾಯಿಬಡುಕಿ ಚೈತ್ರಾ ಕುಂದಾಪುರಳದ್ದೇ ಕಾರುಭಾರು ಎನ್ನಲಾಗಿದ್ದರೂ ಒಟ್ಟು 7 ಮಂದಿ ಪ್ರಮುಖ ಆರೋಪಿಗಳನ್ನು ಹೆಸರಿಸಲಾಗಿದೆ. ಬಂಧನಕ್ಕೊಳಗಾದವರೆಲ್ಲ ಪುರುಷ ಆರೋಪಿಗಳಾಗಿದ್ದಾರೆ. 5 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಸ್ವಾಮೀಜಿ ಸೇರಿದಂತೆ ಇನ್ನಿಬ್ಬರು ಆರೋಪಿಗಳ ಬಂಧನವಾಗಬೇಕಾಗಿದೆ. ಸ್ವಾಮೀಜಿಯ ಬಂಧನವಾದರೆ ಇನ್ನಷ್ಟು ಹೆಸರುಗಳು ಬಹಿರಂಗವಾಗಲಿದೆ ಎಂದು ಚೈತ್ರಾಳ ವಾದ. ಹಾಗಾದರೆ ಚೈತ್ರಾಳನ್ನು ಮುಂದೆ ಬಿಟ್ಟು ಡೀಲ್ ಮಾಡಿದವರು ಯಾರು? ತನಿಖೆಯಿಂದ ಸದ್ಯದಲ್ಲೇ ಸಿಗಲಿದೆ ಉತ್ತರ.