ಇತ್ತೀಚಿನ ಸುದ್ದಿ
ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ರಾಘವೇಂದ್ರ ಎಸ್. ಭಟ್
16/07/2025, 20:11

ಮಂಗಳೂರು(reporterkarnataka.com): ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಗಳೊಂದಾದ ಕರ್ಣಾಟಕ ಬ್ಯಾಂಕ್ ಇತರೆ ಖಾಸಗಿ ಬ್ಯಾಂಕ್‌ಗಳ ಜೊತೆ ವಿಲೀನ ಇಲ್ಲವೆಂದು ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದರು.
ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ಇತರೆ ಖಾಸಗಿ ಬ್ಯಾಂಕ್‌ಗಳ ಜೊತೆ ವಿಲೀನಗೊಳ್ಳುತ್ತದೆ ಎಂಬ ಸುದ್ದಿಗಳೂ ನಿಜವಲ್ಲ. ಈ ಬ್ಯಾಂಕಿಗೆ ಶೇ. 61ರಷ್ಟು ಸಾರ್ವಜನಿಕರ ಪ್ರಾತಿನಿಧ್ಯ ಇದೆ. ಹಾಗಾಗಿ ಇದನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಅಥವಾ ಪ್ರಯತ್ನಗಳು ಇಲ್ಲ ಎಂದರು.
ಬ್ಯಾಂಕಿನ ಮೂಲ ಬಂಡವಾಳ ಸದೃಢವಾಗಿರುವುದರಿಂದ ವಹಿವಾಟು, ಲಾಭಾಂಶಗಳಿಗೇನೂ ತೊಂದರೆ ಆಗಿಲ್ಲ. ಗ್ರಾಹಕರು ಗಾಬರಿಪಡುವ ಅಗತ್ಯ ಇಲ್ಲ. ಕರ್ಣಾಟಕ ಬ್ಯಾಂಕ್ 102ನೇ ವರ್ಷಕ್ಕೆ ಕಾಲಿಡುತ್ತಿದೆ. ಪ್ರಸಕ್ತ ದೇಶಾದ್ಯಂತ 950 ಶಾಖೆಗಳನ್ನು ಹೊಂದಿದ್ದು, 1.82 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇದನ್ನು 2 ಲಕ್ಷ ಕೋಟಿ ರೂ. ವರೆಗೆ ವಹಿವಾಟು ತಲುಪಿಸುವ ಗುರಿ ಹೊಂದಲಾಗಿದೆ. ಇದಲ್ಲದೆ ಕೃಷಿ, ಗೃಹ ಮತ್ತಿತರ ವಲಯಗಳಿಗೂ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ಬ್ಯಾಂಕ್ ವಿಲೀನ ಕುರಿತ ಸುದ್ದಿಗಳೂ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.
ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ನಾನು ಬುಧವಾರ ಅಧಿಕಾರ ವಹಿಸಿಕೊಂಡಿದ್ದೇನೆ. 1981ರಲ್ಲಿ ಕ್ಲರ್ಕ್ ಆಗಿ ಈ ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದು, 2019ರಲ್ಲಿ ಬ್ಯಾಂಕಿನ ಸೇವೆಯಿಂದ ನಿವೃತ್ತನಾಗಿದ್ದೇನೆ. ಮಂಗಳೂರು, ಮುಂಬೈ ಮತ್ತು ದೆಹಲಿಗಳಲ್ಲಿ ಬ್ಯಾಂಕಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಕೆಲವು ಕಾಲ ಬಿಡುವಿನ ಬಳಿಕ ಈಗ ಬ್ಯಾಂಕಿನ ಆಡಳಿತದ ಜವಾಬ್ದಾರಿ ನನ್ನ ಮೇಲೆ ಇದೆ. ಇದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಹೊಣೆಗಾರಿಕೆ, ವಿಶ್ವಾಸ ಹೊಂದಿದ್ದೇನೆ. 1924ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬ್ಯಾಂಕಿನ ಅಸ್ಮಿತೆಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಾಗುವುದು ಎಂದರು.
*ಪ್ರಧಾನ ಶಾಖೆ ಸ್ಥಳಾಂತರ ಪ್ರಸ್ತಾವನೆ ಇಲ್ಲ:* ಖಾಸಗಿ ರಂಗದ ಮುಂಚೂಣಿಯ ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಲಿಮಿಟೆಡ್‌ನ ಪ್ರಧಾನ ಶಾಖೆಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಯಾವುದೇ ಪ್ರಸ್ತಾವನೆ ಇಲ್ಲ, ಇದೆಲ್ಲ ಊಹಾಪೋಹಗಳಷ್ಟೇ. ಕರ್ಣಾಟಕ ಬ್ಯಾಂಕ್ ಯಾವುದೇ ಕಾರಣಕ್ಕೂ ಸ್ಥಳಾಂತರ ಆಗುವುದಿಲ್ಲ. ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರವೂ ನಡೆದಿಲ್ಲ, ಬ್ಯಾಂಕ್ ಸುದೃಢವಾಗಿದೆ. ಹಿಂದಿನ ಸಿಇಒ ಮತ್ತು ಎಂಡಿ ಅವರ ಅಧಿಕಾರದ ಅವಧಿಯಲ್ಲಿ ಅವರ ಅನುಕೂಲ ಕಾರಣಕ್ಕೆ ಬೆಂಗಳೂರು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದ್ದಿರಬಹುದು. ಆದರೆ ಬ್ಯಾಂಕಿನ ಪ್ರಧಾನ ಕಚೇರಿ ಇಲ್ಲಿಯೇ ಇದೆ, ಇಲ್ಲಿಯೇ ಇರುತ್ತದೆ. ಕರಾವಳಿಯಲ್ಲಿ ಸ್ಥಾಪನೆಯಾದ ಬ್ಯಾಂಕ್‌ನ ಪ್ರಧಾನ ಕಚೇರಿ ಇಲ್ಲಿಯೇ ಇರಲಿದೆ ಎಂದು ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದರು.
ಆಡಳಿತಾತ್ಮಕ ಬದಲಾವಣೆಗಳು ಸಾಮಾನ್ಯ ಕರ್ಣಾಟಕ ಬ್ಯಾಂಕ್‌ನಲ್ಲಿ ಎಂಡಿ, ಸಿಇಒ ಮುಂತಾದ ಆಡಳಿತಾತ್ಮಕ ಬದಲಾವಣೆಗಳು ಸಾಮಾನ್ಯ. ಅದರಂತೆ ಎಂಡಿ, ಸಿಇಒ ನೇಮಕ ನಡೆದಿದೆ. ಸೂಕ್ತ ಕಾಲಕ್ಕೆ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಹೊರಗಿನವರು ಅಥವಾ ಒಳಗಿನವರ ನೇಮಕ ಎಂಬ ತಾರತಮ್ಯ ಇಲ್ಲ, 1991ರಲ್ಲಿ ಯು.ಎನ್.ಭಟ್ ಎಂಬವರು ಕೇಂದ್ರ ಆಡಿಟ್ ವಿಭಾಗದಲ್ಲಿದ್ದವರು ಬ್ಯಾಂಕಿನ ಎಂಡಿ ಆಗಿದ್ದರು. ಬಳಿಕ ಹೆಚ್ಚಿನ ಸಂದರ್ಭ ಬ್ಯಾಂಕಿನಲ್ಲಿ ಇದ್ದವರನ್ನೇ ಎಂಡಿ ಆಗಿ ನೇಮಕ ಮಾಡಲಾಗಿತ್ತು. ಇದೆಲ್ಲವೂ ಆಡಳಿತ ಮಂಡಳಿ ತೀರ್ಮಾನ ಎಂದು ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದರು.