ಇತ್ತೀಚಿನ ಸುದ್ದಿ
ಅಲೋಪತಿ ಮತ್ತು ಆಯುವೇ೯ದಿಕ್ ಚಿಕಿತ್ಸೆಯ ಏಕೀಕೃತ ಆರೋಗ್ಯ ವ್ಯವಸ್ಥೆ ಜಾರಿಗೆ ರಾಜ್ಯ ಸರಕಾರ ನಿರ್ಧಾರ
17/02/2025, 21:00

ಮಂಗಳೂರು(reporterkarnataka.com):;ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಲೋಪತಿ ಮತ್ತು ಆಯುವೇ೯ದಿಕ್ ಚಿಕಿತ್ಸೆಯನ್ನು ಒಂದೇ ಸೂರಿನಡಿ ಒದಗಿಸುವ ಏಕೀಕೃತ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರಕಾರ ನಿಧ೯ರಿಸಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಸೋಮವಾರ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಜೋಕಟ್ಟೆಯಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಇದುವರೆಗೆ ಪ್ರತ್ಯೇಕವಾಗಿ ಅಲೋಪತಿ ಮತ್ತು ಆಯುಷ್ ಆಸ್ಪತ್ರೆಗಳು ಕಾರ್ಯಾಚರಿಸುತ್ತಿದ್ದವು. ಸಾರ್ವಜನಿಕರಿಗೆ ಈ ಎರಡೂ ವೈದ್ಯಕೀಯ ಸೇವೆಗಳು ಒಂದೇ ಕಡೆ ಲಭ್ಯವಾಗಲು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕೆಲವು ಹಾಸಿಗೆಗಳನ್ನು ಆಯುಷ್ ಸೇವೆಗಳಿಗೆ ಕಾದಿರಿಸಲು ಚಿಂತಿಸಲಾಗಿದೆ ಎಂದು ಸಚಿವರು ಹೇಳಿದರು.
ಜೋಕಟ್ಟೆ ಆಯುರ್ವೇದಿಕ್ ಆಸ್ಪತ್ರೆಗೆ 2 ವೈದ್ಯರು ಮತ್ತು 6 ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಆಸ್ಪತ್ರೆಯ ಸೇವೆಯನ್ನು ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಪಡೆಯಬೇಕು ಎಂದು ಸಚಿವರು ತಿಳಿಸಿದರು.
ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಡಾ ಅಧ್ಯಕ್ಷ ಸದಾಶಿವ, ಜೋಕಟ್ಟೆ ಗ್ರಾಪಂ ಅಧ್ಯಕ್ಷ ಉಮರ್ ಫಾರೂಕ್, ಮಹಾನಗರಪಾಲಿಕೆ ಸದಸ್ಯರಾದ ಅನಿಲ್ ಕುಮಾರ್, ಎ. ಸಿ. ವಿನಯರಾಜ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಆಯಷ್ ಅಧಿಕಾರಿ ಡಾ. ಮುಹಮದ್ ಇಕ್ಬಾಲ್ ಸ್ವಾಗತಿಸಿದರು.