ಇತ್ತೀಚಿನ ಸುದ್ದಿ
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ ಇಲ್ಲ!; ಶಿಕ್ಷಣ ಸಚಿವರೇ ಏನಿದು?
03/07/2025, 12:30

ಶತಮಾನದ ಇತಿಹಾಸ ಹೊಂದಿದ ಶಾಲೆಯಲ್ಲಿ ಇದೆಂತಾ ಅವಸ್ಥೆ..!
ಸಿ ಆರ್ ಪಿ ಮತ್ತು ಬಿ ಆರ್ ಸಿ ಕಾಂಪೌಂಡ್ ಆವರಣದ ಒಳಗಿರುವ ಕುವೆಂಪು ಓದಿದ ಶಾಲೆ
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ರಾಷ್ಟ್ರಕವಿ, ಜ್ಞಾನಪೀಠ ಪುರಸ್ಕೃತ ಕುವೆಂಪು ಅವರು ಓದಿದ ಶಾಲೆ ಈಗ ನಿರ್ವಹಣೆ ಇಲ್ಲದೆ ಸೋರುತ್ತಿದೆ. ಶತಮಾನದ ಇತಿಹಾಸ ಇದ್ದಂತಹ ಶಾಲೆಯಲ್ಲಿ ಈಗ ಸಂಪೂರ್ಣ ನೀರಿನ ಹೊಳೆ ಹರಿಯುತ್ತಿದೆ. ಸರ್ಕಾರಿ ಶಾಲೆಗೆ ಇದೆಂತಾ ಅವಸ್ಥೆ ಎಂದು
ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಅಂಚೆ ಕಚೇರಿ ಪಕ್ಕದಲ್ಲಿ ಇರುವ ಶತಮಾನದ ಇತಿಹಾಸ ಹೊಂದಿದ, ಅದರಲ್ಲೂ ರಾಷ್ಟ್ರ ಕವಿ ಕುವೆಂಪು, ಹಾ. ಮಾ. ನಾಯಕ, ಡಾ. ಯು. ಆರ್. ಅನಂತಮೂರ್ತಿ, ಕಮಗೋಡು ನರಸಿಂಹ ಶಾಸ್ತ್ರೀ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಕರ್ ಸೇರಿದಂತೆ ಅನೇಕರು ಓದಿದ್ದ ಶಾಲೆಯಲ್ಲಿ ಈಗ ಸರಿಯಾದ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಮೇಲ್ಚಾವಣಿ ಸೋರುತ್ತಿದೆ. ಶಾಲೆಯಲ್ಲಿ ನೂರಾರು ಮಕ್ಕಳು ಓದುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಓದುವುದೇ ಹೆಚ್ಚು ಅಂತಹದರಲ್ಲಿ ಅದನ್ನು ಸರಿಯಾದ ರೀತಿ ನಿರ್ವಹಣೆ ಮಾಡದೇ ಬೇಜವಾಬ್ದಾರಿ ತೋರಿಸುವ ಅಧಿಕಾರಿಗಳು ಈಗ ಮೌನ ವಹಿಸಿದ್ದಾರೆ.
ಇತ್ತ ಹೊಸದಾಗಿ ಮಾಡಿರುವ ಶಾಲೆಯ ಅಡಿಗೆ ಕೊಣೆಯೇ ಸೋರುತ್ತಿದ್ದು. ಇನ್ನು ಹಳೆಯ ಕಟ್ಟಡವಾಗಿರುವ ಶಾಲೆಯ ಪರಿಸ್ಥಿತಿ ನೀವೇ ಊಹಿಸಿಕೊಳ್ಳಿ. ಅಡಿಗೆ ಕೊಠಡಿಯಲ್ಲಿದ್ದ ಅಕ್ಕಿ ಚೀಲಗಳು, ಸಾಮಗ್ರಿಗಳು ಮಳೆ ನೀರಿನಿಂದ ನೆಂದು ಹೋಗಿವೆ. ಈಗಾಗಲೇ ಶಾಲೆ ಅಡಿಗೆ ಮಾಡುವರು ಅಕ್ಕಿ ಮೂಟೆಗೆ ಟಾರ್ಪಲ್ ಹಾಕಿದ್ದಾರೆ. ಮಳೆಗಾಲದಲ್ಲಿ ನಮ್ಮಯ ಗೋಳು ಕೇಳುವವರು ಯಾರು ಎಂದು ಹೆಸರು ಹೇಳಲಿಚ್ಚಿಸದ ಮಹಿಳೆಯೊಬ್ಬರು ಹೇಳುತ್ತಿದ್ದಾರೆ..!
ಇತ್ತ ಶಾಲೆಯ ಆವರಣದಲ್ಲೆ ಒಳಗಡೆ ಇರುವ ಸಿ ಆರ್ ಪಿ ಮತ್ತು ಬಿ ಆರ್ ಸಿ ಕಟ್ಟಡ ಸಹ ಸೋರುತ್ತಿದೆ. ಅದನ್ನೇ ಸರಿಪಡಿಸಿಕೊಳ್ಳಲಾಗದ ಶಿಕ್ಷಣ ಇಲಾಖೆಗೆ ಶಾಲೆ ಸರಿಪಡಿಸುವುದು ಕನಸಿನ ಮಾತು ಎಂದು ಪೋಷಕರೊಬ್ಬರು ಹೇಳಿದ್ದಾರೆ.
ಕುವೆಂಪು ಓದಿದ ಶಾಲೆ ಎಂದು ಈಗಾಗಲೆ ನೂರಾರು ಜನ ದೇಣಿಗೆ ರೂಪದಲ್ಲಿ ಹಣ, ಪುಸ್ತಕಗಳನ್ನು ಕೂಡ ನೀಡಿದ್ದಾರೆ ಇತ್ತಿಚೆಗೆ ಚೇತನ್ ಗುಪ್ತ ಎಂಬುವರು ಸುಮಾರು ಎಂಬತ್ತೖದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಟ್ಟಿದ್ದಾರೆ. ಹಿಂದಿನ ವರ್ಷ 2024ರಲ್ಲಿ ಐವತ್ತೊಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಮೆಲ್ಚಾವಣಿ ದುರಸ್ತಿ, ಬಾಗಿಲು ಡೆಸ್ಕ್, ಬೆಂಚುಗಳು, ಕಂಪ್ಯೂಟರ್ ಪಿಠೋಪಕರಣ, ದ್ವಜಾರೋಹಣ ಸ್ತಂಭ ಇತ್ಯಾದಿಗಳನ್ನು ಮಾಡಿದರು ಕೂಡ ಎಲ್ಲಾ ಕಳಪೆ ಕಾಮಗಾರಿಯಾಗಿದೆ.
ಮಲೆನಾಡಿನಲ್ಲಿ ಮೂರು ತಿಂಗಳ ಕಾಲ ವಿಪರೀತ ಗಾಳಿ ಮಳೆ ಆಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಆ ಚಳಿ ಹಾಗೂ ಸೋರುವ ಕಟ್ಟಡದಲ್ಲಿ ಕೂರಿಸಿ ಪಾಠ ಮಾಡುವುದು ಸರಿಯಲ್ಲ. ಈ ಬಗ್ಗೆ ಕೂಡಲೇ ಶಿಕ್ಷಣ ಇಲಾಖೆ ಹಾಗೂ ತಹಸೀಲ್ದಾರ್ ಅಥವಾ ಕ್ಷೇತ್ರದ ಶಾಸಕರು ಕೂಡಲೇ ಶಾಲೆಗೆ ಭೇಟಿ ನೀಡಿ ಶತಮಾನದ ಅದರಲ್ಲೂ ರಾಷ್ಟ್ರ ಕವಿ ಕುವೆಂಪು ಓದಿದ ಶಾಲೆಯನ್ನು ಉಳಿಸಬೇಕಿದೆ.