ಇತ್ತೀಚಿನ ಸುದ್ದಿ
ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ ಪ್ರಚಾರ ಅಬ್ಬರ
30/03/2026, 22:38
ಬೆಂಗಳೂರು(reporterkarnataka.com): ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಅಖಾಡ ರಂಗೇರಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಿರುಸಿನ ಮತ ಬೇಟೆ ಶುರು ಮಾಡಿಕೊಂಡಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಸಿಎಂ ಸಿದ್ದರಾಮಯ್ಯ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಬಾಗಲಕೋಟೆ ಉಪ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಹೂ ಮಳೆಯ ಸ್ವಾಗತ ಕೋರಿದರು.

ಸೋಮವಾರ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಅಂಗವಾಗಿ ಸುತಾರ ಗುಂಡ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರ ಮತ ಯಾಚಿಸಿದರು. ಈ ವೇಳೆ ಸಚಿವರಾದ ಆರ್.ಬಿ. ತಿಮ್ಮಾಪುರ, ಬೈರತಿ ಸುರೇಶ್, ಶಿವಾನಂದ ಪಾಟೀಲ್ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಭಾಗವಹಿಸಿದ್ದರು.
ಎರಡು ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದ್ದು, ಅದರಲ್ಲೂ ಬಾಗಲಕೋಟೆ ಗೆಲುವು ಸಿಎಂ ಸಿದ್ದರಾಮಯ್ಯ ಅವರ ಪಾಲಿಗೂ ಪ್ರತಿಷ್ಠೆಯಾಗಿದೆ. ಎಚ್ ವೈ ಮೇಟಿ ಕುಟುಂಬ ಸಿದ್ದರಾಮಯ್ಯ ಅವರ ಜೊತೆಗೆ ಉತ್ತಮ ನಂಟು ಹೊಂದಿದೆ. ಟಿಕೆಟ್ ಗೊಂದಲ ಸೃಷ್ಟಿಯಾದಾಗ ಸಿದ್ದರಾಮಯ್ಯ ಅವರೇ ಎಂಟ್ರಿಯಾಗಿ ಸಮಸ್ಯೆ ಬಗೆಹರಿಸಿದ್ದರು.
ಎಚ್.ವೈ.ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಲೇಬೇಕು. ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಬರುತ್ತಿರುವುದು ಮೇಟಿಯವರ ಶ್ರಮದ ಫಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಬಾಗಲಕೋಟೆ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಸುತಗುಂಡಾರ, ನಾಯನೇಗಲಿ ಸೇರಿ ಸುತ್ತ ಮುತ್ತಲ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.
ಮೇಟಿ ಅವರ ನಾಲ್ವರೂ ಮಕ್ಕಳು ಟಿಕೆಟ್ ಕೇಳಿದ್ದರು. ಆದರೆ, ಯಾರಿಗೇ ಕೊಟ್ಟರೂ ಒಟ್ಟಿಗೇ ಕೆಲಸ ಮಾಡುವ ಭರವಸೆ ನೀಡಿದರು. ಕಾಂಗ್ರೆಸ್ ಪದ್ಧತಿಯಂತೆ ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದ್ದರಿಂದ ಇವರನ್ನು ಬೆಂಬಲಿಸಿ, ಗೆಲ್ಲಿಸಿ ಕಳುಹಿಸಿ ಎಂದರು.
ಪಾದಯಾತ್ರೆ ಮೂಲಕ ವಿಜಯೇಂದ್ರ ಪ್ರಚಾರ
ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಅಂಗವಾಗಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಪಾದಯಾತ್ರೆ ಮೂಲಕ ಚುನಾವಣಾ ಪ್ರಚಾರ ನಡೆಸಿದರು. ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತ ಯಾಚಿಸಿದರು.
ಮಾಜಿ ಉಪಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ, ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ, ಜಿಲ್ಲಾಧ್ಯಕ್ಷ ಶಾಂತಗೌಡ, ಶಾಸಕ ಬಸವರಾಜ ಮತ್ತಿಮೂಡ್, ಪಕ್ಷದ ಪ್ರಮುಖ ಪಿ.ಎಚ್.ಪೂಜಾರ್, ಹಲವಾರು ಮುಖಂಡರು, ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪ್ರಚಾರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.














