ಇತ್ತೀಚಿನ ಸುದ್ದಿ
ತಹಶೀಲ್ದಾರ್ ಕಚೇರಿಯಲ್ಲಿ ಬ್ರೋಕರ್ ಗಳ ಕಾಟ: ಜಾತಿ ಸರ್ಟಿಫಿಕೇಟಿಗೂ ನಿಲ್ಲಬೇಕಿಲ್ಲ 3 ದಿನ ಕ್ಯೂನಲ್ಲಿ !!
18/07/2021, 10:19
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮಸ್ಕಿ ಪಟ್ಟಣದ ಸೌಹಾರ್ದ ಸೌಧದಲ್ಲಿರುವ ತಹಶೀಲ್ದಾರ್ (ತಃಸಿಲ್) ಕಾರ್ಯಾಲಯದಲ್ಲಿ ಮಧ್ಯವರ್ತಿಗಳ ಕಾಟ ವಿಪರೀತವಾಗಿದೆ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಸಕಾಲದಲ್ಲಿ ನಡೆಯದ ಕಾರಣ ಜನರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಬ್ರೋಕರ್ ಗಳು ಜನರಿಂದ ವಿಪರೀತ ಹಣ ದೋಚುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.
ಬ್ರೋಕರ್ ಗಳು ಪ್ರತಿಯೊಂದು ಕೆಲಸಕ್ಕೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಜನರಿಗೆ ತಮ್ಮ ದಿನದ ದುಡಿಮೆ ಬಿಟ್ಟು ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅರ್ಜಿಗಳು ಹಾಕುವುದು ಕಷ್ಟವಾದಾಗ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಆಗ ಬ್ರೋಕರ್ ಗಳು ದುಪ್ಪಟ್ಟು ಹಣ ವಸೂಲಿ ಮಾಡಿ ರಾತ್ರಿ ಹೊತ್ತಿನಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತದೆ.
ಜಾತಿ ಆದಾಯ ಸರ್ಟಿಫಿಕೇಟ್ ಗಾಗಿ ಮೂರು ದಿನಗಳ ಕಾಲ ಕೆಲಸ ಬಿಟ್ಟು ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಯಾಕೆಂದರೆ ಸರ್ವರ್ ಸರಿ ಇಲ್ಲ ಎಂಬ ಉತ್ತರ ಕಂಪ್ಯೂಟರ್ ಆಪರೇಟರ್ ಗಳಿಂದ ಬರುತ್ತದೆ. ಇಲ್ಲಿನ ಹೊಸ ತಹಶೀಲ್ದಾರ್ ವಿಜಯಲಕ್ಷ್ಮೀ ಅವರಿಗೆ ಇಲ್ಲಿನ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ.
ಒಟ್ಟಿನಲ್ಲಿ ಸಾರ್ವಜನಿಕರ ಪರಿಸ್ಥಿತಿ ಹೇಳತೀರದು.ಇಷ್ಟೇ ಅಲ್ಲದೆ ತಹಶೀಲ್ದಾರ್ ಕಚೇರಿಯ ಕೆಲಸಕ್ಕಾಗಿ ಸಾರ್ವಜನಿಕರು ಕೋವಿಡ್ ಮರೆತು ಒಬ್ಬರಿನ್ನೊಬ್ಬರು ಅಂಟಿಕೊಂಡು ನಿಲ್ಲುತ್ತಾರೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಸಾಲುಗಳನ್ನು ಮಾಡಿ ಅವಕಾಶ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.