ಇತ್ತೀಚಿನ ಸುದ್ದಿ
ಸುರತ್ಕಲ್ ಕೊಲೆ ಪ್ರಕರಣ: 4 ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ; ಖಾಕಿ ಕಣ್ಗಾವಲು
29/07/2022, 07:39
ಸುರತ್ಕಲ್(reporterkarnataka.com): ಸುರತ್ಕಲ್ ಪೇಟೆಯಲ್ಲಿ ಗುರುವಾರ ರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್ ಸೇರಿದಂತೆ 4 ಠಾಣೆಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗುರುವಾರ ರಾತ್ರಿ ಸುಮಾರು 8.30ರ ವೇಳೆಗೆ ಸುರತ್ಕಲ್ ಪೇಟೆಯಲ್ಲಿ ಸಮೀಪದ ಮಂಗಳಪೇಟೆ ನಿವಾಸಿಯಾದ ಮಹಮ್ಮದ್ ಫಾಝಿಲ್ ಎಂಬ ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ದಾಳಿ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಫಾಝಿಲ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸುರತ್ಕಲ್ ನಲ್ಲಿ ಸ್ವಲ್ಪ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಬಜಪೆ, ಕಾವೂರು ಹಾಗೂ ಮುಲ್ಕಿ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಹೇರಲಾಗಿದೆ.














