ಇತ್ತೀಚಿನ ಸುದ್ದಿ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ಅವಹೇಳನ: ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
11/01/2026, 16:14
ಮಂಗಳೂರು(reporterkarnataka.com): ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರ ಭಾವಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ವಿರುದ್ಧ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ರವರು ಮಾತನಾಡಿ ಈ ಸರ್ಕಾರದಲ್ಲಿ ಶಾಸಕರಿಗೇ ಭದ್ರತೆ ಇಲ್ಲ. ಇನ್ನು ಜನಸಾಮಾನ್ಯರ ಗತಿ ಏನು? ಕೇವಲ ಬಿಜೆಪಿ ಶಾಸಕರ ಮೇಲೆ, ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗಿದೆ. ಕೂಡಲೇ ಪೋಸ್ಟ್ ಹಾಕಿದವನ ಮೇಲೆ ಕೇಸ್ ದಾಖಲಿಸಬೇಕು ಎಂದರು.
ಶಾಸಕ ವೇದವ್ಯಾಸ ಕಾಮತ್ ರವರು ಮಾತನಾಡಿ, ಇದು ಕೇವಲ ಒಬ್ಬ ದಲಿತ ಸಹೋದರಿಗಾದ ಅವಮಾನವಲ್ಲ, ಈ ದೇಶದ ಮಹಿಳೆಯೊಬ್ಬರ ಘನತೆ ಹಾಗೂ ಗೌರವದ ಮೇಲಿನ ನೇರ ದಾಳಿಯಾಗಿದೆ. ಆ ದುಷ್ಟನಿಗೆ ನನ್ನ ಸರ್ಕಾರ ಇರುವ ತನಕ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಪೊಲೀಸರು ಇಂತವರ ವಿರುದ್ಧ ಕಾನೂನಿನ ತಾಕತ್ತನ್ನು ಪ್ರದರ್ಶಿಸಬೇಕು. ಹುಬ್ಬಳ್ಳಿಯಲ್ಲಿ ನಮ್ಮ ಪಕ್ಷದ ಮಹಿಳಾ ದಲಿತ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ಎಸಗಲಾಗಿದೆ. ಮಹಿಳೆಯರಿಗೆ ಕೇವಲ 2 ಸಾವಿರ ಮಾತ್ರವಲ್ಲ, ಅದರ ಜೊತೆಗೆ ಗೌರವ, ಸುರಕ್ಷತೆಯೂ ಬೇಕು ಎಂಬುದನ್ನು ಸರ್ಕಾರ ನೆನಪಿಡಲಿ. ಈ ಅಧಿಕಾರ ಶಾಶ್ವತವಲ್ಲ. ನಿಮ್ಮೆಲ್ಲಾ ಪಾಪ ಕಾರ್ಯಕ್ಕೆ ಕೆಲವೇ ವರ್ಷಗಳಲ್ಲಿ ಪ್ರತಿಫಲ ಸಿಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ಅಂಬೇಡ್ಕರ್ ಕಾಲದಿಂದಲೂ ಕಾಂಗ್ರೆಸ್ ದಲಿತರಿಗೆ ಅವಮಾನ ಮಾಡುತ್ತಲೇ ಬಂದಿದೆ. ಈಗ ದಲಿತ ಸಮುದಾಯದ ಶಾಸಕಿಯೊಬ್ಬರಿಗೆ ಅವಮಾನ ಮಾಡುವ ಮೂಲಕ ಅದು ಮುಂದುವರಿದಿದೆ ಎಂದರು.
ಸುಲೋಚನಾ ಭಟ್ ಮಾತನಾಡಿ ಕಾಂಗ್ರೆಸ್ ಸರ್ಕಾರದ ಎರಡು ಸಾವಿರ ನಮಗೆ ಅಗತ್ಯವಿಲ್ಲ, ನ್ಯಾಯ ಬೇಕು ಎಂದರು. ಪ್ರತಿಭಟನೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು, ಪ್ರೇಮಾನಂದ ಶೆಟ್ಟಿ, ಮೋನಪ್ಪ ಭಂಡಾರಿ, ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಪೂರ್ಣಿಮಾ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ನಿಕಟ ಪೂರ್ವ ಪಾಲಿಕೆ ಸದಸ್ಯರುಗಳು, ಎಸ್ಸಿ ಎಸ್ಟಿ ಮೋರ್ಚಾ, ಮಹಿಳಾ ಮೋರ್ಚಾ, ಯುವ ಮೋರ್ಚಾ, ಸೇರಿದಂತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಉಪಸ್ಥಿತರಿದ್ದರು.













