ಇತ್ತೀಚಿನ ಸುದ್ದಿ
ಸುಲಿಗೆ ಪ್ರಕರಣ: ಆಕಾಶಭವನ ಶರಣ್ ಸೇರಿದಂತೆ 4 ಮಂದಿ ಬಂಧನ; ಸಿಸಿಬಿ ಪೊಲೀಸರ ಕಾರ್ಯಾಚರಣೆ
14/01/2022, 19:19

ಮಂಗಳೂರು(reporterkarnataka.com) : ಇತ್ತೀಚೆಗಷ್ಟೇ ಜಾಮೀನು ಮೇಲೆ ಬಿಡುಗಡೆಗೊಂಡಿರುವ ಆಕಾಶಭವನ ಶರಣ್ ಹಾಗೂ ಇತರ ನಾಲ್ವರನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಲೆ, ಕೊಲೆ ಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶರಣ್ ನನ್ನು ಬಂಧಿಸಲಾಗಿತ್ತು. 2 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸುರತ್ಕಲ್ ಸಮೀಪದ ಚೇಳಾರು ನಂದಿನಿ ಬ್ರೀಡ್ಜ್ ಬಳಿಯಲ್ಲಿ ಡಿಸೆಂಬರ್ 8ರಂದು ರಾತ್ರಿ ವೇಳೆ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಮೊಬೈಲ್ ಫೋನ್, 3000 ರೂ. ನಗದು ಹಾಗೂ ಕೆಎ-19-ಹೆಚ್ ಎ-3016 ನೇ ಟಿವಿಎಸ್ ದ್ವಿಚಕ್ರವನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣಗಳಲ್ಲಿ ಭಾಗಿಯಾದ ಶರಣ್ ಆಕಾಶಭವನ(38), ಕಂಕನಾಡಿಯ ಅನಿಲ್ ಕುಮಾರ್ ಸಾಲ್ಯಾನ್ (40), ಬಜ್ಪೆಯ ಸೈನಾಲ್ ಡಿ ಸೋಜಾ (22), ಬಂಟ್ವಾಳ ಫರಂಗಿಪೇಟೆಯ ಪ್ರಸಾದ್(39), ಜೆಪ್ಪಿನಮೊಗರಿನ ಚೇತನ್ ಕೊಟ್ಟಾರಿ (35) ಎನ್ನುವವರನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.