ಇತ್ತೀಚಿನ ಸುದ್ದಿ
ರಾಜ್ಯ ವಿಜ್ಞಾನ ಪರಿಷತ್ತಿನ ಚುನಾವಣಾ ಬೈಲಾ ಉಲ್ಲಂಘನೆ ಆರೋಪ: ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹ
29/05/2025, 12:44

ಬೆಂಗಳೂರು(reporterkarnataka.com: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ ನಿಯಮ ಉಲ್ಲಂಘಿಸಿ ತ್ರೈವಾರ್ಷಿಕ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಲಾಗಿದ್ದು, ಕೂಡಲೇ ನಿಯಮಬಾಹಿರವಾದ ಈ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಪದಾಧಿಕಾರಿಗಳು ಸರ್ಕಾರ ಮತ್ತು ಚುನಾವಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಕೋಶಾಧ್ಯಕ್ಷ (ಖಜಾಂಚಿ) ಈ. ಬಸವರಾಜು ಅವರು, ರಾಜ್ಯ ವಿಜ್ಞಾನ ಪರಿಷತ್ತಿನ ತ್ರೈವಾರ್ಷಿಕ ಚುನಾವಣೆಗೆ ಸಂಬಂಧಿಸಿದ ಸಾಕಷ್ಟು ಆಕ್ಷೇಪಣೆಗಳಿವೆ. ಆದರೆ, ಅವುಗಳನ್ನು ಸರಿಪಡಿಸುವಲ್ಲಿ ಆಡಳಿತಾಧಿಕಾರಿ ಹಮೀದ್ ಉಲ್ಲಾಖಾನ್ ಅವರು ವಿಫಲರಾಗಿದ್ದಾರೆ ಅಸಲಿಗೆ ಇವರ ಅವಧಿ ಮುಗಿದಿದ್ದು ವಿಸ್ತರಣೆ ಆದೇಶವಾಗಿರುವುದಿಲ್ಲ ಹಾಗಿದ್ದರೂ ಚುನಾವಣೆ ಘೋಷಣೆಗೆ ಅವಕಾಶ ಕೊಟ್ಟಿದ್ದಾರೆ ತಕ್ಷಣವೇ ಅವರನ್ನು ಸರ್ಕಾರ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಿಜ್ಞಾನ ಪರಿಷತ್ತಿನ ಸದಸ್ಯರು, ಚುನಾವಣೆಗೆ ಸಂಬಂಧಿಸಿದಂತೆ ಸರಿಪರಿಪಡಿಸುವಂತೆ ಆಡಳಿತಾಧಿಕಾರಿ ಅವರಿಗೆ ಹಲವಾರು ಬಾರಿ ಮನವಿ ಮಾಡಿದ್ದರು. ಆದರೂ , ಯಾವುದೇ ಆಕ್ಷೇಪಣೆಗಳನ್ನು ಸರಿಪಡಿಸಿಲ್ಲ. ಸದಸ್ಯರ ದೂರಿಗೆ ಯಾವುದೇ ಸ್ಪಂದನೆ ನೀಡಿಲ್ಲ, ವಿಜ್ಞಾನ ಪರಿಷತ್ತಿನ ಅವ್ಯವಹಾರಗಳ ಬಗ್ಗೆ ನೀಡಿದ್ದ ದೂರಿನನ್ವಯ ತನಿಖಾಧಿಕಾರಿ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ, ಆ ಬಗ್ಗೆ ಕ್ರಮ ವಹಿಸದೇ ಏಕಾಏಕಿಯಾಗಿ ಚುನಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಆಕ್ಷೇಪಣೆಗಳಿಗೆ, ವಿಳಾಸ ಬದಲಾವಣೆಗೆ ಅವಕಾಶ ನೀಡದೇ ನೇರವಾಗಿ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ್ದಾರೆ ಇದನ್ನು ಸರ್ಕಾರ ತತ್ ತಕ್ಷಣವೇ ನಿಲ್ಲಿಸಬೇಕೆಂದು ಮನವಿ ಮಾಡಿದರು.
*ಪ್ರಕಟವಾಗದ ಕರಡು ಮತದಾರರ ಪಟ್ಟಿ
ಪ್ರಸ್ತುತ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಕೇರಾಫ್ ವಿಳಾಸಗಳಿವೆ; ಕರಡು ಮತದಾರರ ಪಟ್ಟಿಯನ್ನೂ ಪ್ರಕಟಿಸಿಲ್ಲ. ಅನೇಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮೊದಲು ಆಕ್ಷೇಪಣೆಗಳನ್ನು ಸರಿಪಡಿಸಲಿ, ಅನಂತರ ಚುನಾವಣೆಯನ್ನು ನಡೆಸುವುದು ಸೂಕ್ತ. ಈ ಹಿಂದೆ ಕೂಡ ಈ ಸಂಬಂಧವಾಗಿಯೇ ವಿಜ್ಙಾನ ಪರಿಷತ್ತಿಗೆ ಎರಡು ಬಾರಿ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ ಗುರ್ತಿಸಿದ್ದ ನ್ಯೂನತೆಗಳು ಹಾಗೆಯೇ ಉಳಿದಿವೆ ಆದ್ದರಿಂದ ಈ ಬಾರಿ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರೂ ಆಡಳಿತಾಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ದೂರಿದರು.
*ಸಹಕಾರ ಸಚಿವರ ಮಾತಿಗೂ ಅಗೌರವ
ಬೆಂಗಳೂರು ನಗರ ಜಿಲ್ಲಾ ಮಾಜಿ ಖಜಾಂಚಿ ವಾದಿರಾಜ ರಾವ್ ಮಾತನಾಡಿ, ಈ ಬಾರಿ ಸಹಕಾರಿ ಸಂಘದ ಅಧಿಕಾರಿಗಳು ರಾಜ್ಯ ವಿಜ್ಞಾನ ಪರಿಷತ್ತಿನ ಬೈಲಾವನ್ನು ಉಲ್ಲಂಘಿಸಿಗರುವುದಲ್ಲದೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣನವರು ವಿಧಾನಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ನೀಡುತ್ತಾ ವಿಜ್ಞಾನ ಪರಿಷತ್ತಿನ ಚುನಾವಣೆ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದ್ದು ನ್ಯಾಯಾಲಯದ ಆದೇಶ ಬಂದ ನಂತರ ಚುನಾವಣೆ ನಡೆಸುವುದಾಗಿ ಹೇಳಿದ್ದರು, ಪ್ರಸ್ತುತ ಸಚಿವರ ಹೇಳಿಕೆಯನ್ನೂ ಉಲ್ಲಂಘಿಸಿ, ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ ಎಂದು ಆರೋಪಿಸಿದರು.
ವಿಜ್ಞಾನ ಪರಿಷತ್ತಿನಲ್ಲಿ 25 ಲಕ್ಷ ಅನುದಾನಕ್ಕೆ ಕಾರ್ಯಕ್ರಮ ನಡೆಸದೇ ಸರ್ಕಾರಕ್ಕೆ ಆಡಿಟ್ ವರದಿ ಸಲ್ಲಿಸಿದ್ದು ದೊಡ್ಡ ಪ್ರಮಾಣದಲ್ಲಿ ಅವ್ಯವಹಾರವಾಗಿರುತ್ತದೆ; ಈ ಹಿಂದಿನ ಅಧ್ಯಕ್ಷರಾಗಿದ್ದ ಗಿರೀಶ್ ಬಿ ಕಡ್ಲೇವಾರ್ ಅವರು ಇದಕ್ಕೆ ಕಾರಣಕರ್ತರಾಗಿದ್ದಾರೆ. ಸುಮಾರು ಒಂದು ಕೋಟಿಗೂ ಹೆಚ್ಚು ಕಾರ್ಪಸ್ ಹಣ ದುರುಪಯೋಗಮಾಡಿ ವಿಜ್ಞಾನ ಪರಿಷತ್ ನ್ನು ಮುಳುಗಿಸಿದ್ದಾರೆ. ಇವರ ವಿರುದ್ಧ ಈಗಾಗಲೇ ಲೋಕಾಯುಕ್ತ ಮತ್ತು ಸರ್ಕಾರಕ್ಕೆ ದೂರು ಸಲ್ಲಿಸಲಾಗಿದ್ದು, ವಿಚಾರಣೆ ಕೂಡ ನಡೆಯುತ್ತಿದೆ ಎಂದು ಅವರು ಹೇಳಿದರು.
*ತಡೆಗೆ ನ್ಯಾಯಾಲಯದ ಮೊರೆ
ವಿಜ್ಞಾನ ಪರಿಷತ್ತಿನ ರಾಜ್ಯ ಕಾರ್ಯಕಾರಿ ಮಾಜಿ ಸದಸ್ಯ ನಾಗೇಶ ಅರಳಗುಪ್ಪೆ ಮಾತನಾಡಿ, ವಿಜ್ಞಾನ ಪರಿಷತ್ತಿನ ಚುನಾವಣಾ ಅಧಿಕಾರಿ ಪವನ್ ಕುಮಾರ್ ಅವರು ಸದಸ್ಯರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಸಹಕಾರ ಸಂಘದ ಅಧಿಕಾರಿಗಳು, ಸಹಕಾರ ಸಚಿವರು ವಿಧಾನಪರಿಷತ್ತಿನಲ್ಲಿ ನೀಡಿರುವ ಹೇಳಿಕೆ, ಮತ್ತೆ ಕಾನೂನುಬಾಹಿರ ನಿಯಮಗಳು, ಪರಿಷತ್ತಿನ ಬೈಲಾವನ್ನು ಉಲ್ಲಂಘಿಸಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಜ್ಞಾನ ಪರಿಷತ್ತಿನ ಚುನಾವಣೆಗೆ ತಡೆ ನೀಡಬೇಕೆಂದು ಸದ್ಯದಲ್ಲೇ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ, ಜಿಲ್ಲಾ ಮಾಜಿ ಉಪಾಧ್ಯಕ್ಷ ಕೆ.ಬಿ. ಮಹದೇವಪ್ಪ ಉಪಸ್ಥಿತರಿದ್ದರು.