ಇತ್ತೀಚಿನ ಸುದ್ದಿ
ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಭೇಟಿಯಾದ ರಾಜ್ಯಾಧ್ಯಕ್ಷ ವಿಜಯೇಂದ್ರ: ಅಭಿನಂದನೆ ಸಲ್ಲಿಕೆ
18/12/2025, 11:34
ದೆಹಲಿ(reporterterkarnataka com): ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ನಿತಿನ್ ನಬೀನ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
‘ಯುವ ಸಮೂಹ’ ಸಂಘಟನೆಯ ಬಹುದೊಡ್ಡ ಶಕ್ತಿ, ಈ ನಿಟ್ಟಿನಲ್ಲಿ ಯುವ ಉತ್ಸಾಹಿಗಳನ್ನು ಗುರುತಿಸುವುದು ಭಾರತೀಯ ಜನತಾ ಪಾರ್ಟಿಯ ಆದ್ಯತೆ ಹಾಗೂ ಬದ್ಧತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರೂ ಆದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ಇತರ ವರಿಷ್ಠರು ಯುವ ನಾಯಕ ನಿತಿನ್ ನಬೀನ್ ಅವರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ದೇಶದ ಯುವ ಜನರಿಗೆ ಸ್ಫೂರ್ತಿಯ ಸಂದೇಶ ರವಾನಿಸಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬಿಜೆಪಿ, ಇತಿಹಾಸದಲ್ಲಿ ಅತ್ಯುನ್ನತ ಜವಾಬ್ದಾರಿ ವಹಿಸಿಕೊಂಡ ಯುವ ನಾಯಕ ಎಂಬ ಹೆಗ್ಗಳಿಕೆಗೆ ನಿತಿನ್ ನಬೀನ್ ಪಾತ್ರರಾಗಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಪಕ್ಷ ನಿಷ್ಠೆ, ಕ್ರಿಯಾಶೀಲತೆ, ರಾಷ್ಟ್ರಬದ್ಧತೆ ಹಾಗೂ ಸಂಘಟನಾ ಸಾಮಥ್ರ್ಯವನ್ನು ಸಮರ್ಥವಾಗಿ ನಿರೂಪಿಸಿದ್ದಾರೆ. ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಹಾರದಲ್ಲಿ ಅಪಾರ ಜನಮನ್ನಣೆ ಗಳಿಸಿದ ಜನನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದ್ದಾರೆ.
ನಿತಿನ್ ನಬೀನ್‍ರವರು ಪ್ರಸ್ತುತ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನದ ಮೂಲಕ ನಮ್ಮಂತವರಿಗೆ ಪ್ರೇರಣೆಯ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಅವರಿಂದ ಬಿಜೆಪಿ ಸಂಘಟನೆ ಇನ್ನಷ್ಟು ಬಲವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ.












