ಇತ್ತೀಚಿನ ಸುದ್ದಿ
ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್‌ಗೆ ರಾಜ್ಯ ಸರಕಾರದಿಂದ ಅತಿದೊಡ್ಡ ಅನುದಾನ ಬಿಡುಗಡೆ
20/01/2026, 20:14
•ಭಾರತದ ಉದಯೋನ್ಮುಖ ಟೆಕ್ ಮತ್ತು ಇನ್ನೋವೇಶನ್ ಹಬ್ ಆಗಿ ಹೊರಹೊಮ್ಮುತ್ತಿರುವ ಮಂಗಳೂರು
•ಐಟಿ ಪಾಲಿಸಿಯಡಿ ಕೋ ವರ್ಕಿಂಗ್ ಸ್ಪೇಸ್ ಗೆ 1.93 ಕೋಟಿ ರೂ. ಅನುದಾನ
•'ಬಿಯಾಂಡ್ ಬೆಂಗಳೂರು' ಮೂಲಕ ಹೊಸ ತಂತ್ರಜ್ಞಾನ ಕ್ಲಸ್ಟರ್‌ಗಳಿಗೆ ಬೆಂಬಲ
ಮಂಗಳೂರು(reporterkarnataka.com): ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್‌ಗೆ ಅತಿದೊಡ್ಡ ಅನುದಾನವನ್ನು ಬಿಡುಗಡೆ ಮಾಡುತ್ತಿರುವುದಾಗಿ ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ಮಂಗಳವಾರ ಪ್ರಕಟಿಸಿದೆ.
ಬೆಂಗಳೂರಿನಾಚೆಗೆ ಉತ್ಕೃಷ್ಟ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರಿಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ.
ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಮಾನ್ಯ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಅಧಿಕಾರಿಗಳು ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರರಾದ ಗುರುದತ್ತ ಶೆಣೈ ಅವರ ಸಮ್ಮುಖದಲ್ಲಿ ಈ ಘೋಷಣೆಯನ್ನು ಮಾಡಲಾಯಿತು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಸಮನ್ವಯದ ಮೂಲಕ ಈ ಅನುದಾನದ ಬಿಡುಗಡೆಯು ಸುಗಮವಾಗಿ ಜರುಗಿದೆ. ಮಂಗಳೂರು ಸೇರಿದಂತೆ ಕರ್ನಾಟಕದ ಹೊಸ ತಂತ್ರಜ್ಞಾನ ಹಬ್‌ಗಳಲ್ಲಿ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆ ಅಡಿಯಲ್ಲಿ ಅಭಿವೃದ್ಧಿ ಮತ್ತು ಅನುಷ್ಠಾನ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತರುವಲ್ಲಿ ಕೆಡಿಇಎಂ ಪ್ರಮುಖ ಪಾತ್ರ ವಹಿಸುತ್ತಿದೆ.
*ಬಿಯಾಂಡ್ ಬೆಂಗಳೂರು:* ಒಂದು ವಿಶಿಷ್ಟ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆ
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಸಚಿವರ ಪ್ರಿಯಾಂಕ್ ಖರ್ಗೆ ಅವರು, “ಬಿಯಾಂಡ್ ಬೆಂಗಳೂರು ಎಂಬುದು ಕೇವಲ ಒಂದು ಯೋಜನೆಯಲ್ಲ, ಬದಲಿಗೆ ಅದೊಂದು ವಿಶಿಷ್ಟ ಅಭಿವೃದ್ಧಿ ಮತ್ತು ಅನುಷ್ಠಾನ ಕಾರ್ಯತಂತ್ರವಾಗಿದೆ. ಈ ಅನುದಾನ ಬಿಡುಗಡೆಯು ‘ಬಿಯಾಂಡ್ ಬೆಂಗಳೂರು ಮಿಷನ್’ ಅಡಿಯಲ್ಲಿ ಬೆಂಗಳೂರಿನ ಹೊರಗಿನ ವರ್ಕ್‌ಸ್ಪೇಸ್ ಆಪರೇಟರ್‌ಗೆ ನೀಡಲಾದ ಮೊದಲ ಮತ್ತು ಅತಿದೊಡ್ಡ ಅನುದಾನಗಳಲ್ಲಿ ಒಂದಾಗಿದೆ. ಅಭಿವೃದ್ಧಿಶೀಲ ನಗರಗಳಲ್ಲಿ ಎಂಟರ್‌ಪ್ರೈಸ್ ದರ್ಜೆಯ ವರ್ಕ್‌ಸ್ಪೇಸ್ ವೇದಿಕೆಗಳನ್ನು ಬೆಂಬಲಿಸುವ ಮೂಲಕ, ನಾವು ಉದ್ಯೋಗಾವಕಾಶ ಮತ್ತು ಹೊಸ ಆವಿಷ್ಕಾರದಲ್ಲಿನ ಹೊಸ ಎಂಜಿನ್‌ಗಳನ್ನು ಸೃಷ್ಟಿಸುತ್ತಿದ್ದೇವೆ,” ಎಂದರು.
ಮಾತು ಮುಂದುವರಿಸಿದ ಅವರು, “ಮಂಗಳೂರಿನಲ್ಲಿ ವರ್ಟೆಕ್ಸ್ ಸಂಸ್ಥೆಯ ವ್ಯಾಪ್ತಿ ಮತ್ತು ದೀರ್ಘಕಾಲದ ಬದ್ಧತೆಯು ಕರ್ನಾಟಕವು ನಿರೀಕ್ಷಿಸುತ್ತಿರುವ ಬೆಳವಣಿಗೆಗೆ ಪೂರಕವಾಗಿದೆ. ಪ್ರಸ್ತುತ ಈ ಕ್ಲಸ್ಟರ್‌ನಲ್ಲಿ 10ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಇವೆ ಮತ್ತು 1 ಮಿಲಿಯನ್ ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣದ ‘ಗ್ರೇಡ್-ಎ’ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಕಳೆದ 24 ತಿಂಗಳುಗಳಲ್ಲಿ ನಾವು ಈ ಭಾಗದಲ್ಲಿ 40ಕ್ಕೂ ಹೆಚ್ಚು ಕಂಪನಿಗಳಿಗೆ ನೆಲೆ ಒದಗಿಸಿದ್ದೇವೆ, ಈ ಮೂಲಕ 8000ಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಮಂಗಳೂರನ್ನು ನಾವು ರಾಷ್ಟ್ರೀಯ ಬೆಳವಣಿಗೆಯ ಕಥೆಯಲ್ಲಿ ಒಂದು ಮಹತ್ವದ ಕೊಡುಗೆದಾರನಾಗಿ ನೋಡುತ್ತಿದ್ದೇವೆ,” ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಐಎಎಸ್ ಮಾತನಾಡಿ, “ಮುಂದಿನ 5 ವರ್ಷಗಳಲ್ಲಿ ನಮ್ಮ ರಾಜ್ಯದ ಒಟ್ಟು ಜಿಡಿಪಿಗೆ ಡಿಜಿಟಲ್ ಆರ್ಥಿಕತೆಯ ಮೂಲಕ ಶೇಕಡ 10ರಷ್ಟು ಕೊಡುಗೆ ನೀಡುವಲ್ಲಿ ಈ ಕ್ಲಸ್ಟರ್‌ಗಳು ಪ್ರಮುಖ ಪಾತ್ರ ವಹಿಸಲಿವೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಎಲ್ಲಾ ಹಂತಗಳಲ್ಲಿ ಅಭಿವೃದ್ಧಿಯನ್ನು ಬೆಂಬಲಿಸುವುದು ಮತ್ತು ರಾಜ್ಯದ ನೀತಿಗಳ ಪ್ರಯೋಜನವನ್ನು ಪಡೆಯಲು ಉದ್ಯಮಗಳನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯವಾಗಿದೆ. ಮಂಗಳೂರಿನಲ್ಲಿ ವರ್ಟೆಕ್ಸ್ ಸಂಸ್ಥೆಯ ಬೆಳವಣಿಗೆಯನ್ನು ಕಂಡು ನಮಗೆ ಸಂತೋಷವಾಗಿದೆ. ನಮ್ಮ ಗುರಿಗಳನ್ನು ತಲುಪಲು ನಾವು ಅವರೊಂದಿಗೆ ಮತ್ತು ಇಡೀ ಉದ್ಯಮದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ,” ಎಂದು ತಿಳಿಸಿದರು.
ಕೆಡಿಇಎಂ: ನೀತಿಯನ್ನು ಪ್ರಾದೇಶಿಕ ಐಟಿ ಕ್ಷೇತ್ರದ ಬೆಳವಣಿಗೆಯಾಗಿ ಪರಿವರ್ತಿಸುತ್ತಿದೆ
ಐಟಿ ಮೂಲಸೌಕರ್ಯವನ್ನು ವಿಕೇಂದ್ರೀಕರಿಸುವ ಮೂಲಕ, ಉದ್ದಿಮೆಗಳ ವಿಸ್ತರಣೆಗೆ ಅವಕಾಶ ನೀಡುವ ಮೂಲಕ ಮತ್ತು ಕರ್ನಾಟಕದಾದ್ಯಂತ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಭೌಗೋಳಿಕವಾಗಿ ಸಮತೋಲಿತ ಮತ್ತು ಅಂತರ್ಗತ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುವ ತಮ್ಮ ಆಶಯವನ್ನು ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ, ಕೆಡಿಇಎಂ ಹಾಗೂ ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್ ಈ ಕಾರ್ಯಕ್ರಮದಲ್ಲಿ ಪುನರುಚ್ಛರಿಸಿದವು.
ಹೊಸ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಉದ್ದಿಮೆಗಳ ಸಂಪರ್ಕ ಮತ್ತು ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ‘ಬಿಯಾಂಡ್ ಬೆಂಗಳೂರು’ ಮಿಷನ್ ಅನ್ನು ನನಸಾಗಿಸುವಲ್ಲಿ ಕೆಡಿಇಎಂ ಪ್ರಮುಖ ಪಾತ್ರ ವಹಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಡಿಇಎಂ ಸಿಇಒ ಶ್ರೀ ಸಂಜೀವ್ ಕುಮಾರ್ ಗುಪ್ತಾ ಅವರು, “ಈ ಅನುದಾನ ಬಿಡುಗಡೆಯು ಇತರ ಉದಯೋನ್ಮುಖ ತಂತ್ರಜ್ಞಾನ ನಗರಗಳಿಗೆ ‘ಬಿಯಾಂಡ್ ಬೆಂಗಳೂರು’ ಚೌಕಟ್ಟಿನಡಿಯಲ್ಲಿ ಮುಂದಿನ ಪೀಳಿಗೆಯ ಟೆಕ್ ಕ್ಲಸ್ಟರ್‌ಗಳನ್ನು ಸೃಷ್ಟಿಸಲು ಸರ್ಕಾರದೊಂದಿಗೆ ಕೈಜೋಡಿಸಲು ಇದು ಪ್ರೇರಣೆಯಾಗಲಿದೆ. ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್ ಮಂಗಳೂರಿನಲ್ಲಿ ಅತ್ಯಂತ ಪ್ರಭಾವಶಾಲಿ ವರ್ಕ್‌ಸ್ಪೇಸ್ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕೇವಲ ಮೂಲಸೌಕರ್ಯ ಮಾತ್ರವಲ್ಲದೆ, ಜಾಗತಿಕ ಕಂಪನಿಗಳು, ಜಿಸಿಸಿಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳು ವಿಶ್ವಾಸದಿಂದ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಲು ಮತ್ತು ವಿಸ್ತರಿಸಲು ಪೂರಕವಾದ ಸಂಪೂರ್ಣ ಉದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವರ್ಟೆಕ್ಸ್ ಸಹಾಯ ಮಾಡಿದೆ,” ಎಂದರು.
ವರ್ಟೆಕ್ಸ್: ಮಂಗಳೂರಿನ ಉದ್ಯೋಗ ಮತ್ತು ಉದ್ದಿಮೆಗಳ ಬೆಂಬಲ ವ್ಯವಸ್ಥೆ
ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್ ಕರ್ನಾಟಕದ ವಿಕೇಂದ್ರೀಕೃತ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇದು ಸ್ಟಾರ್ಟ್‌ಅಪ್‌ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸಿದ್ಧ ಮಾದರಿಯ ವರ್ಕ್‌ಸ್ಪೇಸ್‌ಗಳನ್ನು ಒದಗಿಸುತ್ತಿದೆ. ಮಂಗಳೂರಿನಲ್ಲಿ ಇದರ ಕಾರ್ಯಾಚರಣೆಯು ಉದ್ಯೋಗ ಸೃಷ್ಟಿ, ಸ್ಥಳೀಯ ಪ್ರತಿಭೆಗಳನ್ನು ಉಳಿಸಿಕೊಳ್ಳುವುದು ಮತ್ತು ಪ್ರಾದೇಶಿಕ ಉದ್ಯಮಗಳ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಈ ಸಂದರ್ಭದಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಮಾತನಾಡಿದ ವರ್ಟೆಕ್ಸ್ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಶ್ರೀ ಗುರುದತ್ತ ಶೆಣೈ ಅವರು, “ನಮ್ಮ ಕ್ಲಸ್ಟರ್ ಮಟ್ಟದಲ್ಲಿ ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಕೈಗಾರಿಕಾ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ನಿರಂತರ ವಿಶ್ವಾಸ ಮತ್ತು ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ, ಐಟಿ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಕೆಐಟಿಎಸ್ ಎಂಡಿ ಶ್ರೀ ರಾಹುಲ್ ಶರಣಪ್ಪ ಸಂಕನೂರು ಮತ್ತು ಕೆಡಿಇಎಂಗೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇಂದು ವರ್ಟೆಕ್ಸ್ ಮಂಗಳೂರಿನಲ್ಲಿ 2,250ಕ್ಕೂ ಹೆಚ್ಚು ವೃತ್ತಿಪರರ ಉದ್ಯೋಗಕ್ಕೆ ನೆರವಾಗುತ್ತಿದ್ದು, ಬೆಂಗಳೂರಿನ ಹೊರಗಿನ ಅತಿದೊಡ್ಡ ಮ್ಯಾನೇಜ್‌ಡ್ ವರ್ಕ್‌ಸ್ಪೇಸ್ ವೇದಿಕೆಯಾಗಿ ಹೊರಹೊಮ್ಮಿದೆ. ನಾವು ಈಗ ವೇಗವಾಗಿ 6,000 ಸೀಟ್‌ಗಳ ಸಾಮರ್ಥ್ಯಕ್ಕೆ ವಿಸ್ತರಣೆ ಹೊಂದುತ್ತಿದ್ದೇವೆ, ಇದು ಮಂಗಳೂರನ್ನು ಸ್ಟಾರ್ಟ್‌ಅಪ್‌ಗಳು, ಜಿಸಿಸಿಗಳು, ಹೂಡಿಕೆದಾರರು ಮತ್ತು ಜಾಗತಿಕ ಉದ್ದಿಮೆಗಳಿಗೆ ನೆಚ್ಚಿನ ತಾಣವನ್ನಾಗಿ ಮಾಡಲಿದೆ,” ಎಂದು ಹೇಳಿದರು.











