ಇತ್ತೀಚಿನ ಸುದ್ದಿ
ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪ
04/12/2025, 20:31
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ರೈತರಿಗೆ ಒಂದು ಕಡೆ ಕಿರುಕುಳ ಇನ್ನೊಂದು ಕಡೆ ಅಡಿಕೆಗೆ ಬಂದಿರುವ ಕೊಳೆ ರೋಗ. ಈ ಎಲ್ಲದರ ಮಧ್ಯೆ ಕೇಂದ್ರದ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಬೆಟ್ಟು ಮಾಡಿ ತೋರಿಸುತ್ತಿದೆ. ಬಗರ್ ಹುಕುಂ ಸಾಗುವಳಿ ಜಾಗದ ಹಕ್ಕುಪತ್ರ ನೀಡಲಾಗಿದೆ. ಆ ವಿಚಾರವಾಗಿ ಅರಣ್ಯ ಇಲಾಖೆ ಕೋರ್ಟ್ ಮೆಟ್ಟಿಲು ಏರಿದೆ. ಇದರಲ್ಲಿ ರೈತರ ಪಾತ್ರ ಏನಿದೆ? ಅದಕ್ಕೆ ಕಾರಣಕರ್ತರಾದ ಅಧಿಕಾರಿಗಳ ಮೇಲೆ ಕೇಸ್ ದಾಖಲು ಮಾಡಿ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರನ್ನು ಅಲೆದಾಡಿಸಬೇಡಿ ಎಂದು ಅರಣ್ಯ ಅಧಿಕಾರಿಗಳ ಬಳಿ ಹೇಳಿದ್ದೆ. ಆದರೆ ಈಗ ಜಾಗದ ವಿಚಾರವಾಗಿ ಅಧಿಕಾರಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ಜೊತೆಗೆ ರೈತರಿಗೆ ಹಿಂಸೆ ಕೊಡುತ್ತಿದ್ದಾರೆ.
ಹೀಗಾಗಿ ಡಿ. 6ರ ಶನಿವಾರ ತೀರ್ಥಹಳ್ಳಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಅಡಿಕೆ ಬೆಳೆಗೆ ಕೊಳೆ ರೋಗ ಬಂದು ರೈತ ಸಂಕಷ್ಟಕ್ಕಿಡಾಗಿದ್ದಾನೆ. ಕೇಂದ್ರ ಸರ್ಕಾರ ಈ ವಿಚಾರವಾಗಿ ಸಭೆ ನಡೆಸಿತ್ತು. ಅದರಲ್ಲಿ ನಾನು ಸಹ ಭಾಗಿಯಾಗಿದ್ದೆ. ರಾಜ್ಯ ಸರ್ಕಾರ ಮಾತ್ರ ಅಡಿಕೆ ಬೆಳೆಗಾರರಿಗೆ ಏನು ಮಾಡಿಲ್ಲ. ಬಜೆಟ್ ನಲ್ಲಿ 62 ಕೋಟಿ ಇಟ್ಟಿದ್ದೇನೆ ಎಂದು ತಿಳಿಸಿದ್ದರು ಆದರೆ ಇಲ್ಲಿಯವರೆಗೆ ಯಾವುದೇ ಹಣ ಬಿಡುಗಡೆ ಆಗಿಲ್ಲ.
ಹೊಣೆಗಾರಿಕೆ ಇಲ್ಲದೆ ಸರ್ಕಾರ ಕರ್ನಾಟಕ ರಾಜ್ಯಸರ್ಕಾರದ್ದಾಗಿದೆ ಎಂದರು.

ಬೆಳೆ ವಿಮೆ ನಾವು ಕಟ್ಟಿದ ಹಣ ವಾಪಾಸ್ ಬರಲಿಲ್ಲ. ಮಳೆ ಬಂದು ರೈತರಿಗೆ ತೊಂದರೆ ಆಗಿದೆ. ಮಳೆ ಮಾಪನಗಳು ಹಾಳಾಗಿವೆ. ಹವಾಮಾನ ಆಧಾರಿತ ಬೆಳೆ ವಿಮೆ ನೀಡಲು ಆಗುವುದಿಲ್ಲ ಎಂದು ತಿಳಿಸಿದ್ದೆ. ಆದರೆ ಕೋಣದ ಮುಂದೆ ಕಿನ್ನರಿ ಬಾರಿಸಿದ ಹಾಗೆ ಆಗಿದೆ.. ಹೆಕ್ಟರ್ ಗೆ 700 ರೂ ಬಂದಿದೆ. ರಾಜ್ಯದ ಅನ್ನದಾತ ಆಗಿರುವ ರೈತನ ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ. ಮೆಡಿಕಲ್ ಶಾಪ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ಜನೌಷಧಿ ಕೇಂದ್ರದಲ್ಲಿ ಸಿಗುತ್ತಿತ್ತು. ಅದನ್ನು ಎಲ್ಲಾ ಕಡೆ ಮುಚ್ಚಿಸಲಾಗಿದೆ. ಇಂತಹ ಕೆಲಸಗಳನ್ನೇ ಸರ್ಕಾರ ಮಾಡುತ್ತಾ ಬರುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನವೀನ್ ಹೆದ್ದೂರು, ಚಂದವಳ್ಳಿ ಸೋಮಶೇಖರ್, ನಾಬಳ ಮುರಳಿಧರ್, ನಂದನ್ ಹಸಿರು ಮನೆ, ರಕ್ಷಿತ್ ಮೇಗರವಳ್ಳಿ, ಸಂತೋಷ್ ದೇವಾಡಿಗ ಬದನೆ ಹಿತ್ತಲು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.












