ಇತ್ತೀಚಿನ ಸುದ್ದಿ
ಕಾರ್ಮಿಕ ಇಲಾಖೆಯಿಂದ ಪೋಟೊಗ್ರಾಫರ್ ಗಳಿಗೆ ವಿಶೇಷ ಯೋಜನೆ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಘೋಷಣೆ
23/03/2025, 21:04

ಹುಬ್ಬಳ್ಳಿ (reporterkarnataka.com):ಯಾವುದೇ ವೃತ್ತಿ ನಿರ್ವಹಿಸುವಾಗ ನಮಗೆ ಸೂಕ್ಷ್ಮತೆ, ಕರ್ತವ್ಯ ಪ್ರಜ್ಞೆ ಮೈಗೂಡಿದರೆ, ಅದು ಮಾನವೀಯತೆಗೂ ಮಿಗಿಲಾದ ಕೆಲಸ ಮಾಡುತ್ತದೆ. ಪ್ರತಿಯೊಂದು ಘಟನೆಗಳಿಗೆ ಮೊದಲಿಗರಾಗಿ ಬಂದು ಸಾಕ್ಷಿಕರಿಸಿ, ದಾಖಲಿಸುವ ಪೋಟೊಗ್ರಾಫರ್ ಸ್ನೇಹಿತರಿಗೆ ಸಾಮಾಜಿಕ ಭದ್ರತೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಕರ್ನಾಟಕ ಮಾಧ್ಯಮ ಆಕಾಡಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪೋಕಸ್ ಆನ್ ನ್ಯೂಜ್ ಛಾಯಾಚಿತ್ರ ಪ್ರದರ್ಶನ ಹಾಗೂ ಪತ್ರಿಕಾ ಛಾಯಾಗ್ರಹಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಗುಂಪಿಗೆ ಪತ್ರಿಕಾವಲಯದ ಪೋಟೊಗ್ರಾಫರ್ ಹಾಗೂ ಪತ್ರಿಕಾ ವಿತರಕರನ್ನು ಈಗಾಗಲೇ ಸೆರ್ಪಡೆ ಮಾಡಲಾಗಿದೆ. ಅವರಿಗೆ ಉಚಿತ ನೋಂದಣಿ ನೀಡಿ, ಸ್ಮಾರ್ಟ ಕಾರ್ಡ ವಿತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪೋಟೊಗ್ರಾಫರ್ ಗಳಿಗೆ ಸಾಮಾಜಿಕ ಭದ್ರತೆ, ಇನ್ನೂ ಹೆಚ್ಚಿನ ಸೌಲಭ್ಯ, ಆರ್ಥಿಕ ನೆರವು, ಕೌಶಲ್ಯ ತರಬೇತಿ ಹಾಗೂ ಆಧುನಿಕ ತಾಂತ್ರಿಕ ಉಪಕರಣಗಳನ್ನು ನೀಡುವ ಬಗ್ಗೆ ಕರ್ನಾಕ ಮಾಧ್ಯಮ ಅಕಾಡಮಿ ಅಧ್ಯಕ್ಷರು ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಮಿಕ ಇಲಾಖೆಯಿಂದ ಪೋಟೊಗ್ರಫರ್, ವಿಡೀಯೋಗ್ರಾಫರ್ ಮತ್ತು ಗುತ್ತಿಗೆ ಆದಾರದಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ವಲಯದ ಕಾರ್ಮಿಕರಿಗೆ ಯಾವ ನೆರವು ನೀಡಬಹುದು, ಯಾವೆಲ್ಲ ಸಮಸ್ಯೆಗಳಿವೆ ಎಂಬದನ್ನು ಗುರುತಿಸಿ, ಈ ಕ್ಷೇತ್ರದ ತಜ್ಞರ, ಅನುಭವಿಕರ ಸಭೆ ಆಯೋಜಿಸಿ, ನಮ್ಮ ಇಲಾಖೆಯೊಂದಿಗೆ ಚರ್ಚಿಸಿದರೆ, ಪೋಟೊಗ್ರಾಫರ್, ವಿಡಿಯೋಗ್ರಾಫರ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಗುತ್ತಿಗೆ ಆದಾರದಲ್ಲಿ ದುಡಿಯುವ ಜನರಿಗೆ ವಿಶೇಷವಾದ ಯೋಜನೆ ರೂಪಿಸಬಹುದು.
ಈ ನಿಟ್ಟಿನಲ್ಲಿ ಮಾಧ್ಯಮ ಆಕಾಡಮಿ ಕೀಡ್ ತೆಗೆದುಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಈಗಾಗಲೇ ಅಸಂಘಟಿತ ವಲಯದ 20 ವರ್ಗಗಳನ್ನು ಗುರುತಿಸಿ, ಸುಮಾರು 30 ಲಕ್ಷ ಜನರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಉಚಿತವಾಗಿ ನೋಂದಾಯಿಸಿಕೊಂಡು, ಅವರಿಗೆ ಸ್ಮಾರ್ಟ್ ಕೋಡುವ ಕೆಲಸ ನಡೆದಿದೆ.
ಕಾರ್ಮಿಕ ಇಲಾಖೆಯಿಂದ ಎಲ್ಲ ತಾಲೂಕು, ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಜನಜಾಗೃತಿ, ತಿಳುವಳಿಕೆ ಕಾರ್ಯಕ್ರಮಗಳನ್ನು ಮಾಡಿ, ಫಲಾನುಭವಿಗಳನ್ನು ಗುರುತಿಸಿ, ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ ನೀಡಲಾಗುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಶಾಸಕರಾದ ಅಬ್ಬಯ್ಯ ಪ್ರಸಾದ, ಎನ್.ಎಚ್.ಕೋನ ರಡ್ಡಿ, ಅಕಾಡಮಿ ಸದಸ್ಯ ಕೆ.ವೆಂಕಟೇಶ ಸಮಾರಂಭದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಹಾಗೂ ಇತರರು ಇದ್ದರು.
ರಾಷ್ಟ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕಿ ಶಿಪ್ರಾ ದಾಸ್ ಅವರು ಸಮಾರಂಭದ ಪ್ರಧಾನ ಭಾಷಣ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಮತ್ತು ತಪ್ಪು ಅಭಿಪ್ರಾಯ ರೂಪಿಸುವ ಸುದ್ದಿ, ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಅಗತ್ಯವಿರುವ ಹೆಚ್ಚಿನ ತರಬೇತಿ, ಕೌಶಲ್ಯ ಹಾಗೂ ವೃತ್ತಿಪರತೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಬಜೆಟದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹೆಚ್ಚು ಅನುದಾನ ಸಹ ಘೋಷಿಸಿದ್ದಾರೆ ಎಂದರು.
ಅಕಾಡಮಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪೋಟೊಗ್ರಾಫರ್ ಗಳಿಗೆ ತರಬೇತಿ ಆಯೋಜಿಸಲಾಗಿದೆ. ಇಲ್ಲಿ ಇಂದು ರಾಜ್ಯದ ಅನೇಕ ಅನುಭವಿಕ ಹಿರಿಯ ಮತ್ತು ಯುವ ಪೋಟೊಗ್ರಾಫರ ಅವರ ಸಮಾಗಮವಾಗಿದೆ. ಈ ಕಾರ್ಯಾಗಾರದಲ್ಲಿ ಪೋಟೊಗ್ರಾಫರ್ ಅವರ ಸಾಮಾಜಿಕ ಭದ್ರತೆ, ವೃತ್ತಿ ಕೌಶಲ್ಯದ ಬಗ್ಗೆ ಉತ್ತಮ ಚಿಂತನೆ ಆಗಲಿದೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಅವರು ಸ್ವಾಗತಿಸಿದರು. ಅಕಾಡಮಿ ಸದಸ್ಯ ಅಬ್ಬಾಸ ಮುಲ್ಲಾ ವಂದಿಸಿದರು.
ಸಮಾರಂಭದಲ್ಲಿ ವಿವಿಧ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಸ್ಥಾನಿಕ ಮುಖ್ಯಸ್ಥರು, ರಾಜ್ಯದ ವಿವಿಧ ಜಿಲ್ಲೆಗಳ ಪತ್ರಿಕಾ ಪೋಟೊಗ್ರಾಫರ್ ಗಳು, ವಿವಿಧ ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿಗಳು, ಪತ್ರಕರ್ತರು, ಹವ್ಯಾಸಿ ಛಾಯಾಚಿತ್ರಗಾಹಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಇದೇ ಮೊದಲ ಬಾರಿಗೆ ಆಯೋಜಿಸಿದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಮಂಗಳೂರು ವಿಭಾಗದ ಹಿರಿಯ ಛಾಯಾಗ್ರಾಹಕ ಸತೀಶ್ ಇರಾ ಅವರು ಪ್ರಥಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಪ್ರಶಸ್ತಿ ಪ್ರದಾನಿಸಿದರು.
*ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ:* ಇದೇ ಸಂದರ್ಭದಲ್ಲಿ ಸಚಿವ ಸಂತೋಷ ಲಾಡ್ ಅವರು, ರಾಜ್ಯದ ವಿವಿಧ ಪತ್ರಿಕಾ ಛಾಯಾಗ್ರಾಹಕರ ಆಯ್ದ ಛಾಯಾಚಿತ್ರಗಳನ್ನು ಬಿತ್ತರಿಸಿರುವ “ಪೋಕಸ್ ಆನ್ ನ್ಯೂಜ್” ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನವನ್ನು ಸ್ವತಃ ಪೋಟೊ ಕ್ಲೀಕಿಸುವ ಮೂಲಕ ಉದ್ಘಾಟಿಸಿದರು ಮತ್ತು ವೀಕ್ಷಿಸಿದರು.