ಇತ್ತೀಚಿನ ಸುದ್ದಿ
ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ ಸ್ವೀಕಾರ
08/10/2025, 22:17

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೋಮವಾರಪೇಟೆ ತಾಲೂಕು ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾ ಹಿರೇಶ್ ಇಂದು ಗುತ್ತಿಗೆದಾರನೊಬ್ಬನಿಂದ 25,000 ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 14.70 ಲಕ್ಷ ಮೊತ್ತದ ಕಾಮಗಾರಿ ಗುತ್ತಿಗೆಯನ್ನು ಪಡೆದಿದ್ದ ಗುತ್ತಿಗೆದಾರನಿಂದ 1 ಲಕ್ಷ ಲಂಚಕ್ಕೆ ಆಕೆ ಬೇಡಿಕೆ ಇಟ್ಟಿದ್ದಳು ಎಂದು ಹೇಳಲಾಗಿದೆ. ಲಂಚದ ಮೊದಲ ಕಂತು ಇಪ್ಪತ್ತೈದು ಸಾವಿರ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ಬೀಸಿದ ಬಲೆಗೆ ಆಕೆ ಸಿಲುಕಿದ್ದಾಳೆ.
ಕೊಡಗು ಜಿಲ್ಲೆಯ ಕೆಲವು ಕಡೆ ಇದೀಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಲಂಚದ ಹಾವಳಿ ಹೆಚ್ಚಾಗಿದೆ. ಹಿಂದೆ ಅಧಿಕಾರಿ ವರ್ಗದವರು ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಂದ ಕೆಲಸ ಕಾರ್ಯಗಳಿಗೆ ಹಣದ ಬೇಡಿಕೆಯನ್ನು ಇಡುತ್ತಿದ್ದರು, ಆದರೆ ಇದೀಗ ಜನಪ್ರತಿನಿಧಿಗಳೇ ಮುಂದೆ ನಿಂತು ಈ ಕಾಯಕವನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಎಲ್ಲಾ ಕಡೆ ಕೇಳಿ ಬರುತ್ತಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದರೂ ಯಾರು ಅದರ ಬಗ್ಗೆ ಪ್ರಶ್ನಿಸುತ್ತಿಲ್ಲ. ಹಿಂದೆ ತಾ.ಪಂ ಹಾಗೂ ಜಿ.ಪಂ ಸಭೆಗಳಲ್ಲಿ ಸ್ಥಳೀಯ ಪ್ರತಿನಿಧಿಗಳು ಚರ್ಚೆಯನ್ನು ಕೈಗೆತ್ತಿಕೊಂಡು ಕ್ರಮಕ್ಕಾಗಿ ಒತ್ತಾಯಿಸುತ್ತಿದ್ದರು, ಆದರೆ ಇದೀಗ ಆಡಳಿತ ಅಧಿಕಾರಿಗಳ ಅಧಿಕಾರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಹಲವರ ಆರೋಪವಾಗಿದೆ.
ಕೆಲವು ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಈ ಕಾಯಕ ಮಾಮೂಲಾಗಿದ್ದು, ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ಜನಪ್ರತಿನಿಧಿಗಳ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ.