ಇತ್ತೀಚಿನ ಸುದ್ದಿ
ಸೋಲು- ಗೆಲುವು ಏನೇ ಕಂಡ್ರೂ ಕಾರ್ಯಕರ್ತರ ಜತೆ ಸದಾ ಇರ್ತೇನೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ
22/05/2024, 23:05
ಸುಳ್ಯ(reporterkarnataka.com): ಚುನಾವಣೆಯ ಫಲಿತಾಂಶ ಏನೇ ಬಂದರೂ, ಗೆದ್ದರೂ, ಸೊತರೂ ಸದಾ ಕಾರ್ಯಕರ್ತರ ಜೊತೆ ಇರುತ್ತೇನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ತದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.
ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಭರವಸೆ ಇದೆ. ಚುನಾವಣೆಯಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿದೆ.
ಫಲಿತಾಂಶ ಏನೇ ಆದರೂ ಚುನಾವಣೆಯಲ್ಲಿ ಗೆದ್ದರೂ, ಸೋತರೂ ಕಾರ್ಯಕರ್ತರು ನೀಡಿದ ಪ್ರೀತಿ ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ಪಕ್ಷವನ್ನು ಗೆಲ್ಲಿಸಲು ಈ ಕ್ಷೇತ್ರದ ಕಾರ್ಯಕರ್ತರು ಸದಾ ಕಟಿಬದ್ಧರಾಗಿದ್ದರು. ಪಕ್ಷದ ಕಾರ್ಯಕರ್ತರ ಮೇಲೆ ವಿಶ್ವಾಸ ಇರಿಸಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.
ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. ಎಂಪಿ ಆದರೂ ಇಲ್ಲದಿದ್ದರೂ ತಿಂಗಳಲ್ಲಿ ಒಂದು ದಿನ ಸುಳ್ಯದಲ್ಲಿ ಇರುತ್ತೇನೆ. ಕಾರ್ಯಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ. ಸುಳ್ಯದಲ್ಲಿ ಬಿಜೆಪಿಯ ಲೀಡನ್ನು ಕಡಿಮೆ ಮಾಡಿ ಸರಿ ಸಮಾನಾದ ರೀತಿಯಲ್ಲಿ ಮತ ಪಡೆಯುವ ನಿಟ್ಟಿನಲ್ಲಿ ಕಾರ್ಯಕರ್ತರು ನಡೆಸಿದ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ತದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಪಕ್ಷ ಸಂಘನೆಯಲ್ಲಿ ಹೊಸ ಅಧ್ಯಾಯ ಆರಂಭ ಆಗಬೇಕಾಗಿದೆ. ಜನರಿಗೆ ಪಕ್ಷದ ವತಿಯಿಂದ ಸಹಾಯ ಮಾಡಬೇಕು ಎಂದು ಕರೆ ನೀಡಿದ ಅವರು, ಈ ದೇಶ, ಸಂವಿಧಾನ ಉಳಿಯಲು, ಜನರ ಅಭಿವೃದ್ಧಿಗೆ ಕಾಂಗ್ರೆಸ್ ಮಾತ್ರ ಆಶಾ ಭಾವನೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಮತಾ ಗಟ್ಟಿ ಮಾತನಾಡಿ, ಸುಳ್ಯದಲ್ಲಿ ಎಲ್ಲರೂ ಒಟ್ಟಾಗಿ ಚುನಾವಣಾ ಗೆಲುವಿಗಾಗಿ ದುಡಿದಿದ್ದಾರೆ. ಈ ಸಂಘಟಿತ ಪ್ರಯತ್ನ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಲಿದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲುಗಿನ ವಿಶ್ವಾಸ ಇದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ಈ ಬಾರಿ ಸುವ್ಯವಸ್ಥಿತವಾಗಿ ಚುನಾವಣೆ ನಡೆದಿದೆ. ಸುಳ್ಯದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಎಲ್ಲರೂ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದಾರೆ. ಪ್ರತಿ ಬೂತ್‌ನಲ್ಲಿ 50 ಮತಗಳು ಹೆಚ್ಚುವರಿ ಬಂದಿರುವ ಸಾಧ್ಯತೆ ಇದ್ದು ಬಿಜೆಪಿಗೆ ಸರಿ ಸಮಾನಾದ ಮತಗಳು ಬಂದಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್, ಎಂ.ಎಸ್.ಮಹಮ್ಮದ್, ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕೆಪಿಸಿಸಿ ಅಲ್ಪ ಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫಾ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಕಾರ್ಮಿಕ ಮುಖಂಡ ಚಂದ್ರಲಿಂಗಂ, ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯೆ ಪ್ರವೀಣ ಮರುವಂಜ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಎಸ್‌ಟಿ ಘಟಕದ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಪಂಚಾಯತ್ ರಾಜ್ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಎನ್‌ಎಸ್‌ಯುಐ ಅಧ್ಯಕ್ಷ ಧನುಷ್ ಕುಕ್ಕೆಟ್ಟಿ, ವಿಧಾನ ಪರಿಷತ್ ಚುನಾವಣೆಯ ಉಸ್ತುವಾರಿಗಳಾದ ಭಾಸ್ಕರ ಗೌಡ, ಪ್ರದೀಪ್ ಕುಮಾರ್ ರೈ ಪಾಂಬಾರು ಉಪಸ್ಥಿತರಿದ್ದರು.