10:41 AM Saturday22 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿ ಯೋಜನೆ: ಹಳೆ ಬಂದರು, ಬೀಚ್ ಪಾರ್ಕ್, ಪಾರಂಪರಿಕ ಕಟ್ಟಡ ಕೇಳೋರಿಲ್ಲ!; ರಸ್ತೆ ನುಂಗಿತು ಕಾಂಚಾಣವೆಲ್ಲ!!

08/04/2022, 11:31

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದಿದೆ. ಮಂಗಳೂರು ಎಷ್ಟನೇ ಶ್ರೇಯಾಂಕ ಪಡೆದಿದೆ ಎಂದು ಕೇಳಿದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಬಿಡಿ, ಸ್ವತಃ ಸ್ಮಾರ್ಟ್ ಸಿಟಿಯಲ್ಲಿ ಕೆಲಸ ಮಾಡುವ ಎಂಜಿನಿಯರ್ ಗಳಿಗೂ ಗೊತ್ತಿರಲಿಕ್ಕಿಲ್ಲ. ದಿನದ 24 ತಾಸಿನಲ್ಲಿ ನೆಟ್ಟಗೆ 6 ತಾಸು ಕುಡಿಯುವ ನೀರು ಕೊಡಲು ಸಾಧ್ಯವಾಗದವರಿಗೆ ಸ್ಮಾರ್ಟ್ ಸಿಟಿ ಯೋಜನೆ ಕೊಟ್ಟರೆ ಮತ್ತೇನು ಮಾಡ್ಯಾರು? ಎನ್ನುವಂತಾಗಿದೆ.

ಕೊರೊನಾ ಲಾಕ್ ಡೌನ್ ಮುಗಿದ ಬಳಿಕ ನಗರದ ಹಂಪನಕಟ್ಟೆ ಸುತ್ತಮುತ್ತಲಿನ ಯಾವುದೇ ರಸ್ತೆಗೆ ಕಾಲಿಡದ ಪರಿಸ್ಥಿತಿ ಬಂದೊದಗಿದೆ. ಎಲ್ಲಿ ನೋಡಿದರೂ ರಸ್ತೆ ಕೆಲಸ. ಗಟ್ಟಿಮುಟ್ಟಾಗಿರುವ ರಸ್ತೆಯನ್ನು ಅಗೆದು, ಫುಟ್ ಪಾತ್ ಗಳನ್ನು ಕಿತ್ತೆಸೆದು ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಯಾವ ಕೆಲಸವೂ ಪೂರ್ತಿಗೊಂಡಿಲ್ಲ. ಎಲ್ಲವೂ ಅರ್ಧಂಬರ್ಧ. ಕೆಲವು ಕಾಮಗಾರಿಗಳ ವಿಳಂಬಕ್ಕೆ ಕಮಿಷನ್ ಹಂಚಿಕೆಯ ವಿಳಂಬವೂ ಕಾರಣವಾಗಿದೆ ಎಂಬ ದೂರು ಕೇಳಿ ಬರುತ್ತಿದೆ.ಇದಕ್ಕೆಲ್ಲ ಹಣ ಸ್ಮಾರ್ಟ್ ಸಿಟಿ ಯೋಜನೆಯದ್ದಾಗಿದೆ. ತೆರಿಗೆದಾರರ ಹಣವನ್ನು ಹೇಗೆ ಪೋಲು ಮಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಹಂಚಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ರಸ್ತೆ ಮರು ನಿರ್ಮಾಣ, ಚರಂಡಿ ನಿರ್ಮಾಣ, ಕ್ಲಾಕ್ ಟವರ್, ಸ್ಮಾರ್ಟ್ ಬಸ್ ಶೆಲ್ಟರ್ ಸಾಕ್ಷಿಯಾಗಿದೆ. ಪಚ್ಚನಾಡಿ ಸಮೀಪ ಅಕ್ಕಪಕ್ಕದಲ್ಲಿ ಎರಡು ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಬಸ್ ಶೆಲ್ಟರ್ ನ ಎದುರುಗಡೆ ಹಾಗೂ ಸುತ್ತಮುತ್ತಲು ಹುಲ್ಲು ಸಖತ್ ಬೆಳೆದು ನಿಂತಿದೆ. 

ಮಂಗಳೂರಿನ ಆರ್ಥಿಕ ಬೆನ್ನೆಲುಬಾಗಿರುವ ಹಳೆ ಬಂದರು ಅಭಿವೃದ್ಧಿಯ ಅಂಶವನ್ನು ಇಟ್ಟುಕೊಂಡು ಕೇಂದ್ರದಿಂದ ಪಡೆದ ಸ್ಮಾರ್ಟ್ ಸಿಟಿ ಯೋಜನೆ ಇಂದು ಅರ್ಥವನ್ನೇ ಕಳೆದುಕೊಂಡಿದೆ. ಹಳೆ ಬಂದರು ಇದ್ದ ಹಾಗೆ ಇದೆ. ಹಳೆ ಬಂದರು ಪ್ರದೇಶದ 10 ಎಕರೆ ಜಾಗವನ್ನು ಅಭಿವೃದ್ಧಿಪಡಿಸುವ ಕಾರ್ಯ ಇನ್ನೂ ನಡೆದಿಲ್ಲ.ಮುಗ್ಧ ಮೀನುಗಾರರು ಇದನ್ನೆಲ್ಲ ಪ್ರಶ್ನಿಸಲಾರರು ಎನ್ನುವುದು ಇಲ್ಲಿನ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. 

ಇಲ್ಲಿನ ಸಂಸದರು  ಹಾಗೂ ಶಾಸಕರು ಹೇಳಿದನ್ನು ಮಾತ್ರ ಅನುಷ್ಠಾನಗೊಳಿಸಲಾಗುತ್ತಿದೆ ಎಂಬ ದೂರು ಕೂಡ ಆಗಾಗ ಕೇಳಿ ಬರುತ್ತಿದೆ. ಇದೀಗ ಮಂಗಳೂರಿನಲ್ಲಿ ಬರೇ ರಸ್ತೆ, ಫುಟ್ ಪಾತ್, ಅಂಡರ್ ಪಾಸ್ ತರಹದ ಕೆಲಸ ಮಾತ್ರ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯ ಮೂಲ ಮಂತ್ರವಾದ ಪ್ರದೇಶಾಭಿವೃದ್ಧಿ ಯೋಜನೆ ಯಾವುದೂ ಕಾರ್ಯಗತವಾಗುತ್ತಿಲ್ಲ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬೀಚ್ ಪಾರ್ಕ್ ಗಳು ಹೇಳ ಹೆಸರಿಲ್ಲದಂತಾಗಿದೆ. ಸರಕಾರದ ಒಳ್ಳೆಯ ಯೋಜನೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಹೇಗೆ ಹಾಳುಗೆಡಹುತ್ತಾರೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ.

ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಹಂತದ ಆಯ್ಕೆಯಲ್ಲಿ ಮಂಗಳೂರನ್ನು ಹೊರಗಿಡಲಾಗಿತ್ತು. ನಂತರ ಮಂಗಳೂರು ಹಳೆ ಬಂದರು ಅಭಿವೃದ್ಧಿ ಪ್ರಸ್ತಾವನೆ ಇಟ್ಟು ಸಲ್ಲಿಸಲಾದ ಪ್ರಸ್ತಾಪಕ್ಕೆ ಕೇಂದ್ರ ಒಪ್ಪಿಗೆ ನೀಡಿತ್ತು. ಆಗ ಜೆ.ಅರ್. ಲೋಬೊ ಶಾಸಕರಾಗಿದ್ದರು. ಅವರ ನೇತೃತ್ವದಲ್ಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಹಳೆ ಬಂದರು ಅಭಿವೃದ್ಧಿ, ಪಾರಂಪರಿಕ ಕಟ್ಟಡ ರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ,  ಬೀಚ್ ಪಾರ್ಕ್ ಗಳ ನಿರ್ಮಾಣ, ನದಿ ಅಭಿಮುಖ ಯೋಜನೆ ಮುಂತಾದ ಅಂಶಗಳನ್ನು ಸೇರಿಸಿ ಕೇಂದ್ರ ಸರಕಾರದ ಗ್ರೀನ್ ಸಿಗ್ನಲ್ ಪಡೆಯಲಾಯಿತು. ಆದರೆ ಮುಂದೆ ನಡೆದದ್ದೆಲ್ಲ ಜನಪ್ರತಿನಿಧಿಗಳ ಮೂಗಿನ ನೇರಕ್ಕೆ ಆಗುವ ಕಾಮಗಾರಿಗಳು ಮಾತ್ರ.

ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಅನಾವಶ್ಯಕವಾಗಿ ಕ್ಲಾಕ್ ಟವರ್ ನಿರ್ಮಾಣ ಪ್ರಸ್ತಾವನೆಯನ್ನು ಸೇರಿಸಲಾಯಿತು. ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ ಎಂದು ಮೂರು ದಶಕಗಳ ಹಿಂದೆಯೇ ಹಳೆ ಕ್ಲಾಕ್ ಟವರನ್ನು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನ ತೆರವುಗೊಳಿಸಿದ್ದರು. ಆದರೆ ಮತ್ತೆ ಅದೇ ಜಾಗದಲ್ಲಿ ಹೊಸ ಕ್ಲಾಕ್ ಟವರ್ ನಿರ್ಮಿಸಿ ತೆರಿಗೆದಾರರ ಹಣ ಹೆಚ್ಚು ಕಡಿಮೆ ಸುಮಾರು 1 ಕೋಟಿ ರೂ. ವನ್ನು ಅನಾವಶ್ಯಕವಾಗಿ ಪೋಲು ಮಾಡಲಾಯಿತು. ನಂತರ ಇಡೀ ಮಂಗಳೂರಿನಲ್ಲೇ ನಂಬರ್ 1 ರಸ್ತೆ ಆಗಿದ್ದ ಕ್ಲಾಕ್ ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ರಸ್ತೆಯನ್ನು ಸ್ಮಾರ್ಟ್ ರಸ್ತೆ ಮಾಡುವ ನೆಪದಲ್ಲಿ ಅಗೆದು ಹಾಕಲಾಯಿತು. ಇಲ್ಲಿ ಟಾಯ್ಲೆಟ್ ಇರುವ ಸ್ಮಾರ್ಟ್ ಬಸ್ ನಿಲ್ದಾಣ, ಕೇಬಲ್ ಗೆ ಪ್ರತ್ಯೇಕ ಡೆಕ್, ಸಾರ್ವಜನಿಕರಿಗೆ ವಾಯುಸೇವನೆಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಉಚಿತ ವೈಫೈ ಸೇವೆಯನ್ನು ಸೇರಿಸಿ
ಸ್ಮಾರ್ಟ್ ರಸ್ತೆ ಯೋಜನೆ ರೂಪಿಸಲಾಯಿತು. ಇದರಲ್ಲಿ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಬಾಕಿ ಇವೆ. ಇವೆಲ್ಲ ತೆರಿಗೆದಾರರ ಹಣವನ್ನು ಯೋಜನೆಯ ರೂಪದಲ್ಲಿ ಲೂಟಿ ಹೊಡೆಯಲು ಮಾಡಿದ ಕೆಲಸವಾಗಿದೆ ಎನ್ನುವುದು ಗೋಡೆ ಬರಹಷ್ಟೇ ಸ್ಪಷ್ಟವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

(ಬನ್ನಿ ಭ್ರಷ್ಟಾಚಾರ ವಿರುದ್ಧ ಹೋರಾಡೋಣ. ಸಾರ್ವಜನಿಕರಲ್ಲಿ ಇನ್ನಷ್ಟು ಮಾಹಿತಿಗಳಿದ್ದರೆ  7090946914 ವಾಟ್ಸಾಪ್ ಮಾಡಿ)

ಇತ್ತೀಚಿನ ಸುದ್ದಿ

ಜಾಹೀರಾತು