ಇತ್ತೀಚಿನ ಸುದ್ದಿ
SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ: ಮಹಿಳಾ ಆಯೋಗದ ಒತ್ತಾಯಕ್ಕೆ ಮಣಿದ ಸರಕಾರ
20/07/2025, 14:20

ಮಂಗಳೂರು(reporterkarnataka.com): ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಹಾಗೂ ಇಲ್ಲಿಯ ಅಸ್ವಾಭಾವಿಕ ಸಾವು, ಕೊಲೆ ಪ್ರಕರಣಗಳ ಕುರಿತಾಗಿ ತನಿಖೆ ನಡೆಸಲು ಸರಕಾರ ವಿಶೇಷ ತನಿಖಾ ತಂಡ(Special Investigation Team)ವನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂತಿಟ್ಟ ಬಗ್ಗೆ ವ್ಯಕ್ತಿಯೋರ್ವರು ನ್ಯಾಯಾಲಯಕ್ಕೆ ಹೇಳಿಕೆಯನ್ನು ನೀಡಿದ್ದು ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ ಬಗ್ಗೆ ಕುಟುಂಬದವರು ನೀಡಿದ ಮಾಹಿತಿಗಳನ್ನು ಆಧರಿಸಿ ಮಹಿಳಾ ಆಯೋಗ ಸರಕಾರಕ್ಕೆ ವಿಶೇಷ ತನಿಖಾ ತಂಡ ರಚನೆಗೆ ಆಗ್ರವಹನ್ನು ಮಾಡಿತ್ತು. ಇದೀಗ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ ೨೦ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕ ಸಾವು, ಕೊಲೆ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ.ಪ್ರಣವ ಮೋಹಂತಿ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಕಗೊಳಿಸಲಾಗಿದ್ದು, ಉಪ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ಎನ್.ಅನುಚೇತ್, ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತ, ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ತಂಡದಲ್ಲಿದ್ದಾರೆ.