ಇತ್ತೀಚಿನ ಸುದ್ದಿ
ಶ್ರೀನಿವಾಸಪುರ: 300ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಕ ಧರ್ಮೇಶ್‌ರಿಂದ ಹೊಸಬಟ್ಟೆ ಕೊಡುಗೆ
17/11/2021, 11:31
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಮಕ್ಕಳೇ ದೇಶದ ಆಸ್ತಿ. ಈ ಮಕ್ಕಳ ಶಿಕ್ಷಣ, ಆರೋಗ್ಯ ನೀಡುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದ್ದು , ಅದನ್ನು ನೆನಪಿಸಲು ನೆಹರುರವರ ಜನ್ಮದಿನಾಚರಣೆಯ ಮಕ್ಕಳ ದಿನಾಚರಣೆ ಆಗಿದೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಧರ್ಮೇಶ್ ಎಂಬ ಶಿಕ್ಷಕರು ಇದೇ ಗ್ರಾಮದ ಐದು ಅಂಗನವಾಡಿ ಕೇಂದ್ರದ 300 ಮಕ್ಕಳಿಗೆ , ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದುಶಾಲೆಯ ಒಂದನೇ ತರಗತಿ ಮಕ್ಕಳಿಗೆ ಬಣ್ಣಬಣ್ಣದ ಸಮವಸ್ತ್ರಗಳನ್ನು ನೀಡಿದ್ದು ಅದನ್ನು ವಿತರಿಸಿ ಮಾತನಾಡುತ್ತಿದ್ದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಅತ್ಯಗತ್ಯವಾಗಿದ್ದು ಇವುಗಳನ್ನು ಈಗಾಗಲೇ ಇಲಾಖೆಯು ನೀಡುತ್ತಿದ್ದರೂ ಸಹ ಸಂಘ – ಸಂಸ್ಥೆಗಳು ಹಾಗೂ ಇಂತಹ ಆದರ್ಶ ಶಿಕ್ಷಕರು ಸಂಬಳದಲ್ಲಿ ಉಳಿಸಿ ನೆರವಾಗುವ ಕಾರ್ಯ ಶ್ಲಾಘನೀಯ ಎಂದರು . ಸಾಮಾನ್ಯವಾಗಿ ಅಂಗನವಾಡಿ ಕೇಂದ್ರಗಳು ಮಕ್ಕಳ ಶಿಕ್ಷಣಕ್ಕೆ ಬುನಾದಿ ಕೇಂದ್ರಗಳಾಗಿದ್ದು ಅಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಸಹ ನಿಗಾ ವಹಿಸಬೇಕು ಎಂದರು . ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ , ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳವಣಿಗೆಯಾಗಲು ಉತ್ತಮ ಪರಿಸರ ಅಗತ್ಯವಾಗಿದ್ದು , ಅದನ್ನು ಒದಗಿಸಲು ಪ್ರತಿಯೊಬ್ಬರ ಪ್ರಯತ್ನ ಅಗತ್ಯ ಎಂದರು .
ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಬಹುದೆಂದು ತಿಳಿಸಿದ ಅವರು , ಸರ್ಕಾರಿ ಶಾಲೆಗಳನ್ನು ಉಳಿಸುವ ಕಾರ್ಯದಲ್ಲಿ ಶಿಕ್ಷಕರ ಬದ್ಧತೆ ಅಗತ್ಯ ಎಂದರು . ಕೋವಿಡ್ ೧೯ ಮರೆಯಾಗುತ್ತಿದ್ದು ಪೋಷಕರು ನಂಬಿಕೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು ಮಕ್ಕಳು ಸಹ ಬಹಳ ಉಲ್ಲಾಸವಾಗಿ ಭಾಗವಹಿಸುತ್ತಿರುವುದು ಸಂತೋಷ ಎಂದರು . ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಬಣ್ಣದ ಬಟ್ಟೆಗಳು ವಿತರಿಸುವ ಜೊತೆಗೆ ನೂರಾರು ಗಿಡ ಗಳನ್ನು ನೆಡಲು ವಿತರಿಸಿರುವ ಕಾರ್ಯಕ್ರಮವೂ ಸಹ ನಡೆಯಿತು .
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟಲಕ್ಷ್ಮಮ್ಮ , ಮಾಜಿ ಅಧ್ಯಕ್ಷ ಮಂಜುನಾಥ್ , ಎಸ್ಟಿಎಂಸಿ ಅಧ್ಯಕ್ಷ ವೆಂಕಟೇಶಪ್ಪ , ಯುವ ಸಬಲೀಕರಣ ಕ್ರೀಡಾಧಿಕಾರಿ ಕೆ.ಎನ್ ಮಂಜುನಾಥ್ , ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ , ದಾನಿ ಶಿಕ್ಷಕ ಧರ್ಮೇಶ್ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿ ರಮೇಶ್ , ನಿವೃತ್ತ ಮುಖ್ಯ ಶಿಕ್ಷಕರು ಪಣಸಮಾಕನಹಳ್ಳಿ ಚೌಡರೆಡ್ಡಿ , ಮುಖ್ಯ ಶಿಕ್ಷಕ ನಂಜುಂಡೇಗೌಡ , ಬೈರೇಗೌಡ ಸಂಘರ್ಷ ಪದ್ಮಮ್ಮ ಗೀತಾ ಮಮತಾ , ಪದ್ಮಾವತಿ , ಕೆ.ಮಂಜುಳಾ ಉಪಸ್ಥಿತರಿದ್ದರು.