ಇತ್ತೀಚಿನ ಸುದ್ದಿ
ಶಿವಕುಮಾರ ಸ್ವಾಮೀಜಿ ಜಯಂತಿ: ಸಿದ್ಧಗಂಗೆಲಿ ಅನ್ನ, ಕರುಣೆ, ಶಿಕ್ಷಣ ಗಂಗೆ ಹರಿಯುತ್ತಿದೆ: ರಾಷ್ಟ್ರಪತಿ ಮುರ್ಮು ಸಂತಸ
02/04/2026, 19:48
ತುಮಕೂರು(reporterkarnataka.com): ಸಿದ್ಧಗಂಗಾ ಮಠದಲ್ಲಿ ‘ಅನ್ನ ಗಂಗಾ, ಕರುಣಾ ಗಂಗಾ, ಶಿಕ್ಷಣ ಗಂಗಾ’ ಹರಿಯುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಂಸಿದರು.
ನಗರದ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿವಕುಮಾರ ಸ್ವಾಮೀಜಿ ಸಹಸ್ರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಜೀವನದ ಮಾರ್ಗ ತೋರಿಸಿದ್ದಾರೆ. ಬಡವರು, ದೀನದಲಿತರ ಸೇವೆ ಮಾಡಿದ್ದಾರೆ. ಆಧ್ಯಾತ್ಮಿಕ ಸೇವೆಗೈದಿದ್ದಾರೆ ಎಂದರು.
‘ಸ್ವಾಮೀಜಿ ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಅವರ ಸಾಧನೆ ಜನಮಾನಸದಲ್ಲಿ ಉಳಿದಿದೆ. ಸೇವೆ, ಆಧ್ಯಾತ್ಮಿಕ ಪರಂಪರೆಗೆ ಶಿವಕುಮಾರ ಸ್ವಾಮೀಜಿ ಮತ್ತು ತುಮಕೂರಿನ ಮಠ ಹೆಗ್ಗುರುತಾಗಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಠ ಮುಂಚೂಣಿಯಲ್ಲಿ ಇದೆ’ ಎಂದು ಶ್ಲಾಘಿಸಿದರು.
ಸೇವೆ, ಅಧ್ಯಾತ್ಮ, ಪ್ರಗತಿ ಒಟ್ಟಾಗಿ ಸಾಗಿದರೆ ಪ್ರಭಾವಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ. ಕರ್ನಾಟಕದಲ್ಲಿ ಅಂತಹ ಪ್ರಯತ್ನಗಳು ಮುಂದುವರಿದಿವೆ. ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಹಾಗೂ ಇಲ್ಲಿನ ಜನರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ರಾಜ್ಯದ ಪ್ರಗತಿಯನ್ನು ಕೊಂಡಾಡಿದರು.
ಎಲ್ಲರೂ ರಾಷ್ಟ್ರ ನಿರ್ಮಾಣ, ಪರೋಪಕಾರ, ಕರ್ತವ್ಯ ನಿಷ್ಠೆಯ ಹಾದಿಯಲ್ಲಿ ಸಾಗುವ ಮೂಲಕ ಶಿವಕುಮಾರ ಸ್ವಾಮೀಜಿಗೆ ಗೌರವ ಸಲ್ಲಿಸಬೇಕು ಎಂದು ದ್ರೌಪದಿ ಮುರ್ಮು ಸಲಹೆ ಮಾಡಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಿದ್ಧಲಿಂಗ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಸಚಿವರಾದ ಜಿ.ಪರಮೇಶ್ವರ, ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳಕರ ಉಪಸ್ಥಿತರಿದ್ದರು.

ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಿದ್ಧಲಿಂಗ ಸ್ವಾಮೀಜಿ ಸ್ಮರಣಿಕೆ ನೀಡಿದರು. ಎಂ.ಬಿ.ಪಾಟೀಲ ವಿ.ಸೋಮಣ್ಣ ಥಾವರಚಂದ್ ಗೆಹಲೋತ್ ಪ್ರಲ್ಹಾದ ಜೋಶಿ ಉಪಸ್ಥಿತರಿದ್ದರು ತುಮಕೂರು ಸಿದ್ಧಗಂಗಾ ಮಠದಲ್ಲಿ ಬುಧವಾರ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪೂಜೆ ಸಲ್ಲಿಸಿದರು. ಸಿದ್ಧಲಿಂಗ ಸ್ವಾಮೀಜಿ ಭಾಗವಹಿಸಿದ್ದರು
ಕುವೆಂಪು ಸ್ಮರಿಸಿದ ರಾಷ್ಟ್ರಪತಿ ಕರ್ನಾಟಕ ಕನ್ನಡ ಸಾಹಿತ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು. ಕುವೆಂಪು ಅವರನ್ನು ನೆನಪು ಮಾಡಿಕೊಂಡರು. ಅವರು ರಚಿಸಿರುವ ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’… ಸಾಲುಗಳನ್ನು ಉಲ್ಲೇಖಿಸಿದರು. ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ರಚಿಸಿದ ಗೀತೆ ಕರ್ನಾಟಕವನ್ನು ಭಾರತ ಮಾತೆಯ ಮಗಳಾಗಿ ಚಿತ್ರಿಸಿದೆ. ಜಯ ಭಾರತ… ಗೀತೆ ದೇಶವಾಸಿಗಳ ಹೃದಯಗಳಲ್ಲಿ ರಾಷ್ಟ್ರೀಯ ಏಕತೆಯ ಭಾವನೆ ಜಾಗೃತಗೊಳಿಸಿದೆ. ಕರ್ನಾಟಕದ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸಿದೆ ಎಂದು ಹೇಳಿದರು. ಶಿವಕುಮಾರ ಸ್ವಾಮೀಜಿ ಸ್ಮರಿಸುವ ಸಮಯದಲ್ಲಿ ‘ಕರ್ನಾಟಕ ಮಾತೆ’ ಹಾಗೂ ‘ಭಾರತ ಮಾತೆ’ಯ ವೈಭವ ಹೆಚ್ಚಿಸುವ ಸಂಕಲ್ಪ ಮಾಡಬೇಕು ಎಂದೂ ಸಲಹೆ ಮಾಡಿದರು.
*ಶಿಷ್ಟಾಚಾರ ಪಾಲನೆ: ಗೊಂದಲ*
ಕಾರ್ಯಕ್ರಮದ ವೇದಿಕೆಯಲ್ಲಿ ಶಿಷ್ಟಾಚಾರ ಪಾಲನೆಗೆ ಸಂಬಂಧಿಸಿದಂತೆ ಕೆಲ ಸಮಯ ಗೊಂದಲ ನಿರ್ಮಾಣವಾಗಿತ್ತು. ರಾಷ್ಟ್ರಪತಿ ಕುಳಿತುಕೊಳ್ಳುವ ಆಸನದ ಬಲ ಭಾಗಕ್ಕೆ ರಾಜ್ಯಪಾಲ ಎಡ ಭಾಗಕ್ಕೆ ಸಿದ್ಧಲಿಂಗ ಸ್ವಾಮೀಜಿಗೆ ಜಾಗ ಮೀಸಲಿಡಲಾಗಿತ್ತು. ರಾಷ್ಟ್ರಪತಿ ಕಚೇರಿ ಸಿಬ್ಬಂದಿ ವೇದಿಕೆ ಕಾರ್ಯಕ್ರಮ ಆರಂಭವಾಗುವ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದರು. ಸಿದ್ಧಲಿಂಗ ಸ್ವಾಮೀಜಿಗೆ ಮೀಸಲಿಟ್ಟ ಜಾಗವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಕಾಯ್ದಿರಿಸಲಾಯಿತು. ಸ್ವಾಮೀಜಿಗೆ ವೇದಿಕೆ ಬಲ ಭಾಗದಲ್ಲಿ ಅವಕಾಶ ಮಾಡಿಕೊಡಲಾಯಿತು. ಇದರಿಂದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೇದಿಕೆಗೆ ಬರುವುದು 15 ನಿಮಿಷ ತಡವಾಯಿತು. ಅವರನ್ನು ಕರೆತಂದ ನಂತರ ಕಾರ್ಯಕ್ರಮ ಆರಂಭಿಸಲಾಯಿತು.












