ಇತ್ತೀಚಿನ ಸುದ್ದಿ
ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿ ಅಗತ್ಯ: ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಹರೀಶ್ ಆಚಾರ್ಯ
30/05/2024, 20:26
ಮಂಗಳೂರು(reporterkarnataka.com): ಶಿಕ್ಷಣ ಕ್ಷೇತ್ರ ಇಂದು ಹಲವಾರು ಸಮಸ್ಯೆಗಳ ಆಗರವಾಗಿದೆ. ಸಮಸ್ಯೆ ಪರಿಹಾರಕ್ಕೆ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿಗೊಳ್ಳುವ ಅಗತ್ಯ ಇದೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಎಸ್.ಆರ್ ಹರೀಶ್ ಆಚಾರ್ಯ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿಕ್ಷಕ ಸಮುದಾಯದ ಸಮಸ್ಯೆಗಳು ಮುಗಿಯದ ಗೋಳಾಗಿದೆ. ಈ ಸಮಸ್ಯೆಗಳು ಮುಗಿಯುವ ಬದಲಾಗಿ ದಿನೇದಿನೆ ಜಟಿಲಗೊಳ್ಳುತ್ತಿದೆ. ಇದಕ್ಕೆ ಪರಿಹಾರ ಒದಗಿಸುವುದು ನನ್ನ ಸ್ಪರ್ಧೆಯ ಉದ್ದೇಶ ಎಂದರು.
ರಾಜ್ಯದ ಪ್ರಸ್ತುತ ಕರ್ನಾಟಕ ನಾಗರಿಕ ಸೇವಾ ಅಧಿ ನಿಯಮ ಇದು ಶಿಕ್ಷಕರ ಸಮಸ್ಯೆಗಳನ್ನು ಎದುರಿಸುವಲ್ಲಿ ಅತ್ಯಂತ ದುರ್ಬಲವಾಗಿದೆ. ಆದುದರಿಂದ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿಗೊಳ್ಳುವ ಅಗತ್ಯ ಇದೆ ಎಂದು ಅವರು ನುಡಿದರು.
ಖಾಸಗಿ ಶಾಲಾ -ಕಾಲೇಜು/ ಸರಕಾರಿ ಶಾಲಾ-ಕಾಲೇಜು/ ಅನುದಾನಿತ ಶಾಲಾ -ಕಾಲೇಜು ಶಿಕ್ಷಕರ ಸಮಸ್ಯೆಗಳು, ದೈಹಿಕ ಶಿಕ್ಷಣ ಹಾಗೂ ಕಲಾ ಮತ್ತು ಕಸೂತಿ ಶಿಕ್ಷಕರ ಸಮಸ್ಯೆಗಳು, ವಸತಿ ಶಾಲಾ ಶಿಕ್ಷಕರ ಸಮಸ್ಯೆಗಳು, ಭಡ್ತಿ ಹೊಂದಿದ ಶಿಕ್ಷಕರ ಸಮಸ್ಯೆಗಳು, ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರ ಸಮಸ್ಯೆಗಳು, ಪಿಂಚಣಿಯ ಸಮಸ್ಯೆ, ಭರ್ತಿಯಾಗದೆ ಖಾಲಿ ಇರುವ ಶಿಕ್ಷಕ ಹುದ್ದೆಗಳ ಸಮಸ್ಯೆಗಳು, ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯ ನಿರ್ವಹಣಾ ಸಮಸ್ಯೆಗಳು ಇವೇ ಇತ್ಯಾದಿ ವಿಷಯಗಳು ಯಾವುದೇ ಪರಿಹಾರವನ್ನು ಕಾಣದೆ, ಪರಿಹಾರಗೊಳ್ಳುವ ನಿರೀಕ್ಷೆಯೂ ಇಲ್ಲದೆ ಹಾಗೆಯೇ ಮುಂದುವರಿಯುತ್ತಿದೆ ಎಂದವರು ಹೇಳಿದರು.