ಇತ್ತೀಚಿನ ಸುದ್ದಿ
ಶೆಟ್ಟರ್ ಕಚೇರಿಯಲ್ಲಿ ಈಗಲೂ ಇದೆ ಮೋದಿ, ಶಾ ಫೋಟೋ!: ಮುಂದಕ್ಕೂ ತೆಗಿಯೋಲ್ಲವಂತೆ!
04/05/2023, 11:16
ಮೈಥಿಲಿ ಎ. ಪಾಟೀಲ್ ಹುಬ್ಬಳ್ಳಿ
info.reporterkarnataka@gmail.com
ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಬಿಜೆಪಿಯೊಂದಿಗಿನ 40 ವರ್ಷಗಳ ಕರುಳುಬಳ್ಳಿ ಸಂಬಂಧವನ್ನು ಕಡಿದು ಕಾಂಗ್ರೆಸ್ ಪಕ್ಷ ಸೇರಿರುವುದು ಈಗ ಹಳೆಯ ವಿಚಾರ. ಹೊಸ ವಿಚಾರವೇನೆಂದರೆ ಶೆಟ್ಟರ್ ಕಚೇರಿಯಲ್ಲಿ ಈಗಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಫೋಟೋ ರಾರಾಜಿಸುತ್ತಿದೆ.
ತಾನು ಕಾಂಗ್ರೆಸ್ ಸೇರಿದರೂ ಮೋದಿ ಹಾಗೂ ಶಾ ಅವರ ಫೋಟೋ ಮುಂದಕ್ಕೂ ಇರುತ್ತೆ. ನಾನು ಅದನ್ನು ಬದಲಾಯಿಸೊಲ್ಲ ಎಂದು ಶೆಟ್ಟರ್ ಅವರು ರಿಪೋರ್ಟರ್ ಕರ್ನಾಟಕಕ್ಕೆ ಖಡಾಖಂಡಿತವಾಗಿ ತಿಳಿಸಿದ್ದಾರೆ.
ಶೆಟ್ಟರ್ ಅವರಿಗೆ ಪ್ರಧಾನಿ ಮೋದಿ ಹಾಗೂ ಶಾ ಅವರ ಮೇಲೆ ಈಗಲೂ ಅಪಾರ ಗೌರವವಿದೆಯಂತೆ. ಪಕ್ಷ ಬದಲಾಯಿಸಿದ ಮಾತ್ರಕ್ಕೆ ಮೋದಿ ಮತ್ತು ಶಾ ಅವರ ಫೋಟೋ ಬದಲಾಯಿಸಬೇಕಿಲ್ಲ. ನಾನು ಅಧಿಕಾರದ ಆಸೆಯಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿಲ್ಲ. ಸ್ವಾಭಿಮಾನದ ಪ್ರಶ್ನೆ ಎದುರಾದಾಗ ಆತ್ಮಾಭಿಮಾನ ಉಳಿಸಿಕೊಳ್ಳಲು ನಾನು ಪಕ್ಷ ಬದಲಾಯಿಸುವ ಅನಿವಾರ್ಯತೆ ಉಂಟಾಯಿತು ಎಂದು ಅವರು ಹೇಳಿದ್ದಾರೆ.