ಇತ್ತೀಚಿನ ಸುದ್ದಿ
ಶಾಸಕರ ಮೇಲೆ ಎಫ್ ಐಆರ್: ಬಿಜೆಪಿಯಿಂದ ಮಂಗಳೂರು ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ
20/02/2024, 01:06
ಮಂಗಳೂರು(reporterk arnataka.com): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧೈರ್ಯವಿದ್ದರೆ ದ.ಕ.ದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರ ಎದುರು ಸ್ಪರ್ಧಿಸಿ ಗೆಲ್ಲಲಿ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಸವಾಲು ಹಾಕಿದರು.
ಭಾರತೀಯ ಜನತಾ ಪಾರ್ಟಿಯ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ
ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ವೈ. ಇಬ್ಬರು ಕಾರ್ಪೋರೇಟರ್‌ಗಳು, ವಿಶ್ವ ಹಿಂದೂ ಪರಿಷತ್‌ನ ಮುಖಂಡರ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆರೋಪಿಸಿ ನಗರದ ಮಿನಿ ವಿಧಾನಸೌಧದ ಮುಂಬಾಗ ಇರುವ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇದು ಜಾತಿಯ, ಧರ್ಮದ ದಂಗಲ್ ಅಲ್ಲ. ಇದು ಕಾಂಗ್ರೆಸ್ ದಂಗಲ್. ದ.ಕ. ಜಿಲ್ಲೆಯಲ್ಲಿ ಅನೇಕ ಕಡೆ ಮತಾಂತರ ನಡೆಯುತ್ತಿದ್ದು, ಶಾಲೆಗಳಲ್ಲಿ ಮತ್ತು ಮನೆಗಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಮತಾಂತರಕ್ಕೆ ಯತ್ನ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ತುಘಲಕ್ ಸರ್ಕಾರದ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಯ ಬದಲು ಕೊಜಂಟ್ ನೀಡಿದ್ದು, ಅದರಲ್ಲಿ ಎಷ್ಟು ಹಿಂಡಿದರೂ ಏನೂ ಬರುವುದಿಲ್ಲ. ಇದರೊಂದಿಗೆ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಪ್ರಧಾನ ನರೇಂದ್ರ ಮೋದಿ ಅವರಿಗೆ ಏಕ ವಚನದಲ್ಲಿ ಮಾತನಾಡಿ ಅವಮಾನಿಸುತ್ತಿದ್ದು, ಪ್ರಧಾನಿ ಅವರಿಗೆ ಮರ್ಯಾದೆ ನೀಡಬೇಕು ಎಂಬ ಸೌಜನ್ಯ ಇಲ್ಲದಾಗಿದೆ. ಖರ್ಗೆ ಅವರಿಗೆ 80 ವರ್ಷ ಆಗಿದ್ದು, ಅವರಿಗೆ ಅರಳು ಮರಳು ಪ್ರಾರಂಭವಾಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ 20 ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದು, ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದು ರಾಜ್ಯದಲ್ಲಿ ಅಲ್ಲ ದೇಶದಲ್ಲಿ 20 ಸ್ಥಾನ ಗೆಲ್ಲಲಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡ ರವಿಶಂಕರ್ ಮಿಜಾರ್ ಮಾತನಾಡಿದರು. ಪ್ರಮುಖರಾದ ಪೂಜಾ ಪೈ, ರಮೇಶ್, ರಾಜಗೋಪಾಲ್ ರೈ, ಮಹೇಶ್ ಜೋಗಿ, ಪ್ರೇಮಾನಂದ ಶೆಟ್ಟಿ, ಅರುಣ್ ಶೆಟ್ಟಿ, ದಿವಾಕರ್, ವಿಜಯ್ ಕುಮಾರ್ ಶೆಟ್ಟಿ, ಕಾರ್ಪೊರೇಟರ್‌ಗಳು ಮತ್ತಿತರರು ಉಪಸ್ಥಿತರಿದ್ದರು.