7:29 AM Sunday24 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಶಾಸಕ ವೇದವ್ಯಾಸ ಕಾಮತ್: ಭೂಮಿ ಪೂಜೆಯದ್ದೇ ಕರಾವತ್ತು!: ತಿಂಗಳಿಗೆ ಡಜನಿಗೂ ಅಧಿಕ ಗುದ್ದಲಿ ಪೂಜೆ!!

23/04/2022, 10:02

ಮಂಗಳೂರು(reporterkarnataka.com): ಯಾರು, ಯಾವಾಗ ಕಾಲ್ ಮಾಡಿದ್ರೂ ಶಾಸಕರು ಕಾರ್ಯಕ್ರಮದಲ್ಲಿದ್ದಾರೆ, ಅದರಲ್ಲೂ ಭೂಮಿ ಪೂಜೆಯಲ್ಲಿದ್ದಾರೆ ಎಂಬ ಉತ್ತರ ಶಾಸಕರ ಆಪ್ತರಿಂದ ಥಟ್ ಅಂತ ಬರುತ್ತದೆ. ಒಂದು ಕಾರ್ಯಕ್ರಮ ಮುಗಿದರೆ ಇನ್ನೊಂದು ಸಮಾರಂಭ, ಮತ್ತೊಂದು ಗುದ್ದಲಿ ಪೂಜೆ. ಹೀಗೆ ಕಾರ್ಯಕ್ರಮಗಳ ಸರಮಾಲೆ.

ಇದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸ್ವಕ್ಷೇತ್ರದಲ್ಲಿದ್ದರೆ ಅವರ ಸಾಮಾನ್ಯ ದಿನಚರಿ. ಶಾಸಕರ ಬ್ಯುಸಿ ಕಾರ್ಯಕ್ರಮ, ಅದರಲ್ಲೂ ಏಕ್ ದಂ ಭೂಮಿ ಪೂಜೆ ಮಾಡುವ ಬಗ್ಗೆ ಕುತೂಹಲಗೊಂಡ ‘ರಿಪೋರ್ಟರ್ ಕರ್ನಾಟಕ’ ಇದರ ಬೆನ್ನು ಹತ್ತಿದಾಗ ಶಾಸಕರು ಕಳೆದ 4 ತಿಂಗಳಿನಲ್ಲಿ ನಡೆಸಿದ ಭೂಮಿಪೂಜೆಯ ಸಂಪೂರ್ಣ ಪಟ್ಟಿಯೇ ಲಭಿಸಿದೆ.

ಶಾಸಕ ಕಾಮತ್ ಅವರ ಸಾರ್ವಜನಿಕ ಕಾರ್ಯಕ್ರಮ ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ತೆರವುಗೊಂಡ ಬೆನ್ನಲ್ಲೇ ಆರಂಭಗೊಂಡಿದೆ. ಜತೆಗೆ ಮಂಗಳೂರಿನಲ್ಲಿ ಒಮ್ಮಿಂದೊಮ್ಮೆಗೇ ಅಭಿವೃದ್ಧಿ ಸ್ಫೋಟಗೊಂಡಿದೆ?! ಕಡಲ ನಗರಿಯ ಆಯಕಟ್ಟಿನ ರಸ್ತೆಗಳನ್ನು ಏಕಕಾಲದಲ್ಲಿ ಅಗೆದು ಹಾಕಲಾಯಿತು. ಮೇಕಪ್ ಇದ್ದ ರಸ್ತೆಗಳನ್ನು ಮರು ಮೇಕಪ್ ಗೆ ಸಿದ್ಧಪಡಿಸಲಾಯಿತು. ಸ್ಮಾರ್ಟ್ ಸಿಟಿಯ ಎಂಜಿನಿಯರ್ ಗಳು ಹೊಟ್ಟೆ ಮೇಲಿನ ಬೆಲ್ಟ್ ಟೈಟ್ ಮಾಡಿ ಹಂಪನಕಟ್ಟೆಯಲ್ಲಿ ಓಡಾಡಲಾರಂಭಿಸಿದರು. ಸ್ಮಾರ್ಟ್ ಸಿಟಿ ಫಂಡ್ ನಲ್ಲಿ 250 ಕೋಟಿ ರೂ. ವನ್ನು ರಸ್ತೆ ನಿರ್ಮಾಣಕ್ಕೆ ಮೀಸಲಿಡಲಾಯಿತು. ಇದರಲ್ಲಿ 120 ಕೋಟಿ ರೂ. ಈಗಾಗಲೇ ರಸ್ತೆಗೆ ಸುರಿಯಲಾಯಿತು. ಆದರೆ ರಸ್ತೆ ಮಾತ್ರ ಒಂದಿಚ್ಚೂ ಅಗಲವಾಗಿಲ್ಲ ಎಂದು ನಾಗರಿಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ.

ಅದೇನೇ ಇರಲಿ, ಮತ್ತೆ ಶಾಸಕರ ಭೂಮಿಪೂಜೆಯತ್ತ ಬರೋಣ.

2022ರ ಜನವರಿಯಿಂದ ಶಾಸಕ ವೇದವ್ಯಾಸ ಕಾಮತರ ಕಾರ್ಯಕ್ರಮದತ್ತ ನೋಟ ಬೀರಿದರೆ ಅವರೆಷ್ಟು ಭೂಮಿ ಪೂಜೆ ನಡೆಸಿದ್ದಾರೆ ಎಂಬ ಸತ್ಯ ಹೊರಬೀಳುತ್ತದೆ. 2022 ಜನವರಿಯಿಂದ ಏಪ್ರಿಲ್ 21ರ ವರೆಗೆ ಶಾಸಕರು ಸ್ವಕ್ಷೇತ್ರದಲ್ಲಿ ಸಾಕಷ್ಟು ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲೂ ಸುಮಾರು 48ಕ್ಕೂ ಹೆಚ್ಚು ಭೂಮಿ ಪೂಜೆ ನಡೆಸಿದ್ದಾರೆ. ಹಾಗೆಂತ ಇವರು ಮಾಡಿದ ಭೂಮಿಪೂಜೆ ಮೆಗಾ ಪ್ರಾಜೆಕ್ಟ್ ಗಳಿಗೇನೂ ಅಲ್ಲ, ಬದಲಿಗೆ ಕಾರ್ಪೊರೇಟರ್ ಗಳು ಮಾಡಬಹುದಾದ ಸಣ್ಣ ಪುಟ್ಟ ಕಾಮಗಾರಿಯ ಭೂಮಿ ಪೂಜೆ ಆಗಿದೆ. ಆದರೆ ಇದರಲ್ಲಿ ಹೆಚ್ಚಿನ ಕಾಮಗಾರಿಗಳ ವೆಚ್ಚ ಮಾತ್ರ ಕೋಟಿಗಿಂತ ಅಧಿಕವಾದದ್ದು ಎನ್ನುವುದು ವಿಶೇಷ.

ರಿಪೋರ್ಟರ್ ಕರ್ನಾಟಕಕ್ಕೆ ದೊರೆತ ಮಾಹಿತಿ ಪ್ರಕಾರ 2022 ಜನವರಿ ತಿಂಗಳಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು 14 ಭೂಮಿ ಪೂಜೆ ನೆರವೇರಿಸಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಜನವರಿಗೆ ಹೋಲಿಸಿದರೆ ಒಂದು ಮಾತ್ರ ಕಡಿಮೆ. ಅಂದ್ರೆ 13 ಭೂಮಿಪೂಜೆ ಪೂರೈಸಿದ್ದಾರೆ. ಹಾಗೆ ಮಾರ್ಚ್ ನಲ್ಲಿ 7 ಮಾತ್ರ. ಯಾಕೆಂದರೆ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿತ್ತು. ಆದುದರಿಂದ ಶಾಸಕರು ಬೆಂಗಳೂರಿನಲ್ಲಿದ್ದರು. ಮತ್ತೆ ಏಪ್ರಿಲ್ ನಲ್ಲಿ 21ರ ವರೆಗೆ ಶಾಸಕರು ಮತ್ತೆ 11 ಭೂಮಿಪೂಜೆ ನೆರವೇರಿಸಿದ್ದಾರೆ. ಇತ್ತೀಚೆಗೆ ಕೊಡಿಯಾಲ್ ಬೈಲ್ ವಾರ್ಡ್ ನಲ್ಲಿ ಒಳಚರಂಡಿ ಕೊಳವೆ ಬದಲಾವಣೆಗೆ 1.25 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ನಗರದ ಕೇಂದ್ರ ಮೈದಾನ ಬಳಿ ಜಲಸಿರಿ ಯೋಜನೆಯಡಿ 5.78 ಕೋಟಿ ರೂ. ವೆಚ್ಚದಲ್ಲಿ ಜಲಸಂಗ್ರಹಗಾರ ನಿರ್ಮಿಸಲು ಭೂಮಿಪೂಜೆ, ಬಜಾಲ್ ಪರಿಸರದಲ್ಲಿ ಜಲಸಿರಿ ಯೋಜನೆಯಡಿ 4.60 ಕೋಟಿ ವೆಚ್ಚದಲ್ಲಿ ಮೇಲ್ಮಟ್ಟದ ಜಲಸಂಗ್ರಹಗಾರಕ್ಕೆ ಭೂಮಿಪೂಜೆ, ಜಪ್ಪು ವಾರ್ಡ್ ನ ಎಕ್ಕೂರು ರಾಜಕಾಲುವೆಯ ಆಯ್ದ ಭಾಗಗಳ ಅಭಿವೃದ್ಧಿಗೆ 1.25 ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ ಮಾಡಲಾಗಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ. ಇದೆಲ್ಲ ಏಪ್ರಿಲ್ ತಿಂಗಳಿನಲ್ಲೇ ನಡೆದಿದೆ.

ಸ್ಥಳೀಯ ಕಾರ್ಪೊರೇಟರ್ ಗಳು ಅಧಿಕಾರಿಗಳೊಂದಿಗೆ ಸೇರಿಕೊಂಡು ಮಾಡಬಹುದಾದ ಭೂಮಿಪೂಜೆಯಲ್ಲಿ ಶಾಸಕರು ತಮ್ಮ ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಶಾಸಕರು ಮಾಡಿದ ಹೆಚ್ಚಿನ ಭೂಮಿಪೂಜೆಯ ಕಾಮಗಾರಿ ಸ್ಮಾರ್ಟ್ ಸಿಟಿ ಫಂಡ್ ನಲ್ಲಿ ನಡೆಯುತ್ತದೆ. ಇದುಅಧಿಕಾರಗಳಿಂದಲೂ ಅನುಷ್ಠಾನಗೊಳ್ಳುತ್ತದೆ. ಇಂತಹ ಸಣ್ಣ ಪುಟ್ಟ ಕಾಮಗಾರಿಗೆ ಶಾಸಕರು ತಮ್ಮ ಪಟಲಾಂ ಕಟ್ಟಿಕೊಂಡು ಹೋಗಿ ಭೂಮಿ ಪೂಜೆ ಮಾಡುವ ಅಗತ್ಯವೇನಿದೆ? ಸ್ಥಳೀಯ ಕಾರ್ಪೊರೇಟರ್ ಮಾಡುವುದಿಲ್ಲವೇ? ಆ ಸಮಯವನ್ನು ಶಾಸಕರು

ಸಾರ್ವಜನಿಕರ ಅಹವಾಲು ಕೇಳಲು ಕಚೇರಿಯಲ್ಲೇ ಕಳೆಯಬಹುದಲ್ಲವೇ ಎಂದು ಮಂಗಳೂರಿನ ಹಿರಿಯ ನಾಗರಿಕ ರಾಮಗೋಪಾಲ್ ಪ್ರಶ್ನಿಸುತ್ತಾರೆ.

ಶಾಸಕರು ಮಂಗಳೂರಿಗೆ ಖಾಸಗಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಭೂಮಿಪೂಜೆ ನಡೆಸುವುದಾದರೆ ಅವರಿಗೆ ದೊಡ್ಡ ಸೆಲ್ಯೂಟ್. ಅದು ಬಿಟ್ಟು ರಾಜ ಕಾಲುವೆಯ ಸುತ್ತಮುತ್ತಲಿನ ಅಭಿವೃದ್ಧಿಗೆ ಅದ್ಯಾವ ಸೀಮೆಯ ಭೂಮಿ ಪೂಜೆ ಎಂದು ಸಿವಿಲ್ ಎಂಜಿನಿಯರ್ ಸಂದೀಪ್ ಹೇಳುತ್ತಾರೆ.

ಶಾಸಕರೇ ಮುತುವರ್ಜಿ ವಹಿಸಿ ಹೋರಾಟ ನಡೆಸಿ ಸರಕಾರದಿಂದ ಅನುದಾನ ತಂದು ಯೋಜನೆ ಅನುಷ್ಠಾನ ಮಾಡಿದರೆ ಅದು ನಿಜಕ್ಕೂ ಗ್ರೇಟ್. ಶಾಸಕ ಕಾಮತರು ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಸರಕಾರದಿಂದ ಎಷ್ಟು ಅನುದಾನ ತಂದಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾವ ಹೊಸ ಯೋಜನೆ ತಂದಿದ್ದಾರೆ ಎಂದು ಮತದಾರರ ಮುಂದೆ ಹೇಳಲಿ ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಸವಾಲು ಹಾಕುತ್ತಾರೆ. ಶಾಸಕರ ಉತ್ತರದ ನಿರೀಕ್ಷೆಯಲ್ಲಿ ನಾವಿದ್ದೇವೆ.

ಇತ್ತೀಚಿನ ಸುದ್ದಿ

ಜಾಹೀರಾತು