ಇತ್ತೀಚಿನ ಸುದ್ದಿ
ಸೇವೆಗೆ ಮತ್ತೊಂದು ಹೆಸರು ಬಾಚಾಳಿಕೆಯ ಸ್ನೇಹಾಲಯ: ನಿಸ್ವಾರ್ಥ ಸೇವೆಗೆ 15 ವರ್ಷಗಳ ಹರ್ಷ
28/09/2024, 14:16
ಕಾಸರಗೋಡು(reporterlarnataka.com):ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯು ಕಳೆದ 15 ವರುಷಗಳಿಂದ, ಮಂಜೆಶ್ವರದ ಪಾವೂರು ಬಳಿಯ ಬಾಚಾಳಿಕೆ ಎಂಬಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಿ, ಅವರಿಗೆ ಅಸರೆ ಒದಗಿಸಿದ್ದು,
ರೋಗಿಗಳ ಶೂಶ್ರುಷೆ ಮಾಡಿ, ಔಷೋದೊಪಚಾರ ನೀಡಿ, ಅವರನ್ನು ಗುಣಪಡಿಸಿ 1300ಕ್ಕೂ ಮಿಗಿಲಾಗಿ ಅಂತಹ ಗುಣಪಟ್ಟ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿದೆ.
ಸಂಸ್ಥೆಯು ನಿಸ್ವಾರ್ಥವಾಗಿ ನಡೆಸುತ್ತಿರುವ ಸೇವೆಯು ನಿರಾಶ್ರಿತ, ನಿರಾಧಾರಿತರಿಗೆ ಸ್ನೇಹಾಲಯವು ಭರವಸೆಯ ಆಶಾದೀಪವಾಗಿದೆ. ಸರಕಾರದ ಮಾನ್ಯತೆ ಪಡೆದು, ಸಾರ್ವಜನಿಕರ ಪ್ರಶಂಸೆ, ಬೆಂಬಲದೊಂದಿಗೆ ಸಂಸ್ಥೆಯು ಮಾಡುತ್ತಿರುವ ಸೇವೆಯು ಈಗ ಮನೆಮಾತಾಗಿದೆ.
ಸೇವಾ ಕ್ಷೇತ್ರದಲ್ಲಿ ಒಂದೊಂದೇ ಮೆಟ್ಟಲನ್ನು ಹತ್ತುವ ಅಭ್ಯಾಸ ಮಾಡಿಕೊಂಡ ಸಂಸ್ಥೆಯ ಕಣ್ಣಿಗೆ ಬಿದ್ದ ಇನ್ನೊಂದು ಮಹಾ ಅವಕಾಶ, ಸಮಾಜದಲ್ಲಿ ಹೆಮ್ಮರವಾಗಿ ಬೇರು ಬಿಡುತ್ತಿರುವ ಸಾಮಾಜಿಕ ಕಂಟಕ “ವ್ಯಸನಗಳು.”
ಯುವಜನರಲ್ಲಿ, ಪ್ರೌಡಾವಸ್ಥೆಯಲ್ಲಿರುವ ಬಾಲಕ/ಬಾಲಕಿಯಲ್ಲಿ, ಸ್ತ್ರೀಯರಲ್ಲೂ ಹರಡಿ ಸಮಾಜವನ್ನೇ ನಾಶಮಾಡುತ್ತಿರುವ ಸಾಮಾಜಿಕ ಪಿಡುಗು ಬಗ್ಗೆ ಸಂಸ್ಥೆಯು ಹೊಸ “ವ್ಯಸನ ಮುಕ್ತ ಸಮಾಜ” ರೂಪಿಸುವಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ. ಈ ಸೇವೆಯು ಎಲ್ಲಾ ತರಹದ ವ್ಯಸನಿಗಳಿಗೆ ಆರೈಕೆ, ಸೇವೆ ಹಾಗು ಪುನರ್ವಸತಿಯ ನೂತನ ಕೇಂದ್ರವಾಗಲಿದೆ.
ಸದರಿ ನೂತನ “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ”ವನ್ನು ದಿನಾಂಕ 02-10-2024 ರಂದು ಮುಂಜಾನೆ 9.30 ಘಂಟೆಗೆ ಸರಿಯಾಗಿ ಸ್ನೇಹಾಲಯ ಸಂಸ್ಥೆ ಬಾಚಾಳಿಕೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.
• ನೂತನ ಕೇಂದ್ರದ ಉದ್ಘಾಟನೆಯನ್ನು ಸನ್ಮಾನ್ಯ ಶ್ರಿಯುತ ಮೈಕಲ್ ಡಿ ಸೋಜ, (ಭಾರತೀಯ ಅನಿವಾಸಿ ಉದ್ಯಮಿ, ದುಬಾಯಿ) ಇವರು ನೆರವೇರಿಸುವರು.
• ಕೇಂದ್ರದ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಸನ್ಮಾನ್ಯ ಅತೀ ವಂ. ಡೊ. ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ನೆರವೇರಿಸುವರು.
• ಸಂಭ್ರಮದ ಮುಖ್ಯ ಅತಿಥಿಗಳಾಗಿ ದೆಹಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷರಾದ ಸನ್ಮಾನ್ಯ ಅತೀ ವಂದನೀಯ ದೀಪಕ್ ವಲೇರಿಯನ್ ತಾವ್ರೊರವರು ಭಾಗವಹಿಸಲಿದ್ದಾರೆ.
• ಪ್ರಮುಖ ಭಾಷಣಕಾರಾರಾಗಿ, ವಿಶೇಷ ಅಹ್ವಾನಿತರಾದ ಸನ್ಮಾನ್ಯ ವಿಜಯಲಕ್ಶ್ಮೀ ಶಿಬರೂರು ( ಖ್ಯಾತ ಪತ್ರಕರ್ತೆ) ಹಾಗೂ ಆತ್ಮದಾಸ್ ಯಾಮಿ (ಬಹು ಧಾರ್ಮಿಕ ಜ್ಞಾನಿ) ತಮ್ಮ ಸಂದೇಶ ನೀಡಲಿದ್ದಾರೆ.
• ಗಣ್ಯ ಅತಿಥಿಗಳಾಗಿ :
ಯು. ಟಿ ಖಾದರ್, ಸ್ಪೀಕರ್, ಕರ್ನಾಟಕ ಸರಕಾರ,
ಎ.ಕೆ.ಎಮ್. ಅಶ್ರಫ಼್ಹ್, ಮಾನ್ಯ ಶಾಸಕರು, ಮಂಜೆಶ್ವರ
ಕುನ್ಹಂಭು, ಶಾಸಕರು, ಉದುಮ, ವಾಲ್ಟರ್ ನಂದಳಿಕೆ ದಾಯ್ಜಿವಲ್ಡ್ ಸಂಸ್ಥಾಪಕರು ಮಾತಾನಾಡಲಿದ್ದಾರೆ.
ಈ ಸಂಭ್ರಮದ ಉದ್ಘಾಟನೆಗೆ 50ಕ್ಕೂ ಅಧಿಕ ಅತಿಥಿಗಳು, 100 ಕ್ಕಿಂತಲೂ ಅಧಿಕ ದಾನಿಗಳು, ಸಾವಿರಾರು ಪ್ರೇಕ್ಷಕರ, ಅಭಿಮಾನಿಗಳ, ಹಿತೈಷಿಗಳ ಉಪಸ್ಥಿತಿಯನ್ನು ನೀರಿಕ್ಷಿಸಲಾಗಿದೆ.
*ಸ್ನೇಹಾಲಯದ ಪ್ರಾರಂಭ ಹಾಗೂ ನಡೆದು ಬಂದ ದಾರಿ:*
2009 ಆಗಸ್ಟ್ 26 ರಂದು ಸೇಂಟ್ ಮದರ್ ತೆರೇಸಾ ಅವರ 99ನೇ ಜನ್ಮ ದಿನ. ಅಂದು ಅವರು ಬದುಕಿ ಇದ್ರೆ ಜೀವನದ ಶತಮಾನಕ್ಕೆ ಕಾಲಿಡುತ್ತಿದ್ದರು. ಆದರೆ ಶತ-ಶತಮಾನಗಳಿಗೂ ಮಿರೀಸುವಂತಹ ಮಾನವೀಯತೆಯ ಅದ್ಭುತ ಸೇವೆಯನ್ನು ಈ ಸಮಾಜಕ್ಕೆ ದಾರೆ ಎರೆದ ಪುನೀತೆ ಇಹ ಲೋಕ ತ್ಯಜಿಸಿದ್ದರೂ, ಅವರ 99ನೇ ಜನುಮ ದಿನದಂದೇ ಮಂಗಳೂರಿನಲ್ಲಿ ಸ್ನೇಹಾಲಯ ಸಂಸ್ಥೆಯ ಪ್ರಾರಂಭ. ಮದರ್ ತೆರೆಜಾರವರ ಆದರ್ಶ ಹಾಗೂ ಪ್ರೇರಣೆಯನ್ನೇ ಸ್ನೇಹಾಲಯ ಸಂಸ್ಥೆಯು ತನ್ನ ಹೆಜ್ಜೆಗಳನ್ನಾಗಿ ಮಾಡಿಕೊಂಡು 14 ಯಶಸ್ವಿ ಸಂವತ್ಸರಗಳನ್ನು ಪೂರೈಸಿರುವ ಸಂತ್ರಪ್ತಿ.
ಅಂದು, ಮಂಗಳೂರಿನ ನಗರದಲ್ಲಿ ಆಟೊ ಓಡಿಸುತ್ತಿದ್ದ ಜೋಸೆಫ಼್ ಕ್ರಾಸ್ತಾ ಎಂಬವರು ನಗರದ ಪ್ರಧಾನ ರಸ್ತೆ ಪಕ್ಕದಲ್ಲಿ ಅನಾಥರಾಗಿ ಬಿದ್ದು ಒದ್ದಾಡುತ್ತಿದ್ದ ಇಬ್ಬರು ನಿರಾಶ್ರಿತರನ್ನು ಕಂಡು, ಅವರನ್ನು ತನ್ನ ಆಟೊದಲ್ಲಿ ಕುಳ್ಳಿರಿಸಿ, ತನ್ನ ಮನೆಗೆ ಕರೆತಂದರು. ಅವರಿಗೆ ಆಹಾರ ನೀಡಿ, ಕ್ಷೌರ ಮಾಡಿ, ಅವರಿಗೆ ಉತ್ತಮ ಸ್ನಾನ ನೀಡಿದರು. ಅವರ ಗಾಯಗಳಿಗೆ ಪ್ರಥಮ ಚಿಕಿತ್ಸೆ ಮಾಡಿದರು. ಈ ಇಬ್ಬರೂ ಸಹೋದರರು ತನ್ನ ಧರ್ಮಕ್ಕೆ, ತನ್ನ ಊರಿಗೆ ಸೇರದವರಾಗಿದ್ದರು. ಅವರ ಮುಖದಲ್ಲಿ ಕಂಡ ನಗು, ವಿರಮಿಸಿದ ರೀತಿ ಕಂಡು ತನ್ನ ಅಂತರಂಗದಲ್ಲಿ ಸಂತ್ರಪ್ತಿ ಭಾವನೆ ಮೂಡಿಸಿತು. ಕಾಕತಾಳಿಯವಾಗಿ ಅಂದು ಮದರ್ ತೆರೆಜಾರವರ ಜನುಮದಿನ ಎಂಬುದು ತಿಳಿದೊಡನೇ ಅವರು ನಿರ್ದಾರವೊಂದನ್ನು ಮಾಡಿದರು. ನನಗೆ ಇಂದು ಈ ಪ್ರೇರಣೆ ಹಾಗೂ ಅವಕಾಶ ದೇವರು ಒದಗಿಸಿದ್ದಾರೆ ಎಂಬುವುದನ್ನು ಮನದಟ್ಟಾಗಿಸಿದರು.
“ರೊಮ್ ಇಸ್ ನೊಟ್ ಬಿಲ್ಟ್ ಇನ್ ಎ ಡೆ” ಹಾಗೇಯೇ ಜೋಸೆಫ಼್ಹ್ ರವರ ಸೇವಾ ಪ್ರಕ್ರೀಯೆಯ ಹಿನ್ನೆಲೆ 2006 ರಲ್ಲೇ ಪ್ರಾರಂಭಗೊಂಡಿತ್ತು. ತನ್ನ ಆಟೊದಲ್ಲಿ ಬಾಡಿಗೆಗಾಗಿ ಮೀನು ಮಾರುಕಟ್ಟೆ ಬಳಿ ಕ್ಯೂದಲ್ಲಿ ನಿಂತ ಜೋಸೆಫ಼್ಹರಿಗೆ, ಪಕ್ಕದಲ್ಲೇ ಮೀನು ತುಂಬಿಸಿಕೊಂಡು ಬಂದು ನಿಂತ ಟ್ರಕ್ಕ್ ಒಂದರಿಂದ ಐಸ್ ಕರಗಿ ನೀರು ಹತ್ತಿರದ ಕಾಲುವೆಗೆ ಹರಿಯುತ್ತಿತ್ತು. ಮಾನಸಿಕ ಅಸ್ವಸ್ಥ ಮಹಿಳೆಯೋರ್ವಳು ಹಸಿವಿನಿಂದ ಆ ಹರಿಯುವ ಅಶುದ್ಧ, ನೀರನ್ನು ಕುಡಿಯುವುದನ್ನು ನೋಡಿದರು. ಆ ಮಹಿಳೆಯ ದಯನೀಯ ಸ್ಥಿತಿಯನ್ನು ನೋಡಿದ ಕ್ಷಣ ಮನಸ್ಸಿನೊಳಗೆ ಪ್ರತಿದ್ವನಿಸಿದ ವಾಕ್ಯ “ನಾನು ಹಸಿದಿದ್ದು ನನಗೆ ತಿನ್ನಲು ಏನಾದರೂ ಕೊಟ್ಟೆಯಾ?”. ಅವು ಪವಿತ್ರ ಬೈಬಲಿನ ವಾಕ್ಯಗಳಾಗಿದ್ದುವು. ತತ್-ಕ್ಷಣ ಜೋಸೆಫ್ ರವರು ಹತ್ತಿರದ ಹೋಟೆಲ್‌ಗೆ ಧಾವಿಸಿ, ಅವಳಿಗೆ ಆಹಾರವನ್ನು ಖರೀದಿಸಿ, ಕುಡಿಯಲು ಶುದ್ದ ನೀರಿನ ಬಾಟಲನ್ನು ಕೊಟ್ಟರು. ಅವಳ ಕಣ್ಣುಗಳಲ್ಲಿ ಕಂಡ ಹೊಳಪು, ಮುಖದಲ್ಲಿ ಮಂದಹಾಸದಲ್ಲಿ ದೇವರನ್ನೇ ಕಂಡ ಅನುಭವ. ಅಂದಿನಿಂದ ಕಸ ಮತ್ತು ಕಸದ ತೊಟ್ಟಿಗಳಿಂದ ಆಹಾರವನ್ನು ಸಂಗ್ರಹಿಸುವ ಜನರಿಗೆ ಮಿತ್ರರೊಡಗೂಡಿ, ತಮ್ಮ ಮಧ್ಯಾಹ್ನದ ಊಟದ ರೂ.100 ಅನ್ನು ತ್ಯಾಗ ಮಾಡಿ, ಮಧ್ಯಾಹ್ನದ ಆಹಾರವನ್ನು ಒದಗಿಸಲು ಪ್ರಾರಂಭಿಸಿದರು. ಈ ಸಣ್ಣ ಪ್ರಯತ್ನ ಪ್ರತಿದಿನ ಸುಮಾರು 40 ಮಂದಿಗೆ ಊಟವನ್ನು ನೀಡುವಂತಾಯಿತು. ಇದು ನಿರಂತರ 2009ರ ತನಕ ಮುಂದುವರೆಯಿತು.
ಏತನ್ಮಧ್ಯೆ, ದಾರಿಯಲ್ಲಿ ಕಂಡ ಹಲವು ರೋಗಿಗಳಿಗೆ ಸರಿಯಾದ ಆರೈಕೆ ಇಲ್ಲದೇ, ರಸ್ತೆಯಲ್ಲೇ ವಾಸ್ತವ್ಯವಿದ್ದ, ವಿಶೇಷ ಗಮನದ ಅಗತ್ಯವಿರುವ ಹಲವಾರು ಗಾಯಾಳುಗಳನ್ನು ಅವರು ಗಮನಿಸಿದರು. ಮಂಗಳೂರಿನ ಬೀದಿಗಳಿಂದ ಅಂತಹವರನ್ನು ಕರೆದೊಯ್ದು ವಿವಿಧ ಸಾಮಾಜಿಕ ಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ಪ್ರಾರಂಭಿಸಿದರು. ಅಂತಹ ಸಂಸ್ಥೆಗಳು ನಿವಾಸಿಗಳಿಂದ ತುಂಬಿ ತುಳುಕುತ್ತಿರುವಾಗ ಪುನರ್ವಸತಿ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಹುಡುಕುವುದು ಅನಿವಾರ್ಯವಾಯಿತು. ನಿರಾಶ್ರಿತ ಮಕ್ಕಳು, ಮನೆಯಿಂದ ಓಡಿ ಬಂದ ಹಲವು ಮಕ್ಕಳನ್ನು ಅಂದಿನ ಸಮರ್ಥ “ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ” ಮುಂದೆ ಹಾಜರುಪಡಿಸಿ ಪುನರ್ವಸತಿ ಕಲ್ಪಿಸಲು ಸುಲಭವಾಗಿತ್ತು. ಆದರೆ ಮಹಿಳೆ, ಪುರುಷರಿಗೆ ವಸತಿ ಸೌಕರ್ಯನೇ ಇಲ್ಲದಿರುವಾಗ ತಾನು ಕರೆ ತಂದ ಇಬ್ಬರು ಸಹೋದರರನ್ನು ಇರಿಸಿದ ಮನೆಯನ್ನೇ ಅಭಿವೃದ್ಧಿಪಡಿಸಲು ದೃಡ ಚಿಂತನೆ ಮಾಡಿದರು. ಈ ಮನೆಗೆ “ಸ್ನೇಹಾಲಯ ” ಎಂದು ಹೆಸರಿಸಲಾಯಿತು.
ತಾನು ರಕ್ಷಿಸಲ್ಪಟ್ಟ ಆ ಇಬ್ಬರು ಸಹೋದರರನ್ನು ಮನೆಗೆ ಕರೆತರುವ ಕೇವಲ 5 ದಿನಗಳ ಮೊದಲು, ಕ್ಲಪ್ತ ಸಮಯಕ್ಕೆ ಸರಿಯಾಗಿ ಎಂಬಂತೆ ಇದೇ ಸಮಯ ಜೋಸೆಫ಼ರ ತಂದೆಯ ಅಸ್ತಿಯಿಂದ ಅವರ ಪಾಲು ಲಭಿಸಿತು. ಇದರಿಂದ ಈಗಾಗಲೇ ನಿರ್ಮಿಸಿದ ಮನೆಯೊಂದಿಗೆ 21 ಸೆಂಟ್ಸ್ ಭೂಮಿಯನ್ನು ಖರೀದಿಸಿದರು.
ಸ್ನೇಹಾಲಯವು ಮಾನಸಿಕ ಅಸ್ವಸ್ಥ, ನಿರ್ಲಕ್ಷಿತ, ನಿರಾಧಾರ, ವಯೋವೃದ್ಧರ ಭರವಸೆಯ ಆಶ್ರಯ. ಜಾತಿ, ಮತ, ಅಂತಸ್ತು, ಧರ್ಮವನ್ನು ಲೆಕ್ಕಿಸದೆ ಸಹೋದರ ಸಹೋದರಿಯರ ಭಾವನಾತ್ಮಾಕ ಕೊಂಡಿಗಳಿಂದ ಬೆಸೆದ ಪ್ರೀತಿಯ ಮನೆ “ಸ್ನೇಹಾಲಯ”ವಾಗಿದೆ. ಇದು ಇಂದು ಮೂರು ಬೆಡ್ರೂಮ್ಗಳ ಮನೆಯಿಂದ 300 ನಿವಾಸಿಗಳಿಗೆ ಸಾಕಾಗುವಷ್ಟು ಸೌಲಭ್ಯವನ್ನು ಹೊಂದಿದ್ದು, ಅವರಲ್ಲಿ 2023ವರೆಗೆ 800ಕ್ಕೂ ಹೆಚ್ಚು ಜನರು ತಮ್ಮ ಕುಟುಂಬಗಳೊಂದಿಗೆ ಭಾರತದಾದ್ಯಂತ ಮತ್ತೆ ಒಂದಾಗಿದ್ದಾರೆ.
ಒಬ್ಬ ಸಾಮಾನ್ಯ ವ್ಯಕ್ತಿಯಿಂದ, ರಕ್ಷಿಸಲ್ಪಟ್ಟ ಇಬ್ಬರು ಮಾನಸಿಕ ನಿರ್ಗತಿಕರ ವಸತಿ ಕಲ್ಪಿಸಿಕೊಟ್ಟ ಪಯಣ, 1600 ನಿರಾಶ್ರಿತರನ್ನು ಬೀದಿಗಳಿಂದ ರಕ್ಷಿಸಿ, 1300ಕ್ಕೂ ಅಧಿಕ ನಿವಾಸಿಗಳನ್ನು ಅವರವರ ಮನೆಗಳೆಗೆ ಕಳುಹಿಸಿ, ಇಂದಿಗೆ 300 ನಿವಾಸಿಗಳ ಸ್ವರ್ಗೀಯ ತಾಣವಾಗಿದೆ. ಈ ಕೆಲಸ ಸುಗುಮವಾಗಿ ದೇವರ ಆಶೀರ್ವಾದ, ದಾನಿಗಳ ಸಹಕಾರ, ಸಿಬ್ಬಂದಿ ವರ್ಗದ ಪರಿಶ್ರಮದಿಂದ ಉತ್ತುಂಗದ ಸೇವೆ ನೀಡುವಲ್ಲಿ ಸಫ಼ಲವಾಗಿದೆ.
ಇಂದು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವಿವಿಧ ಕಾರ್ಯಕ್ರಮಗಳಿಂದ ಸೇವಾ ಕ್ಷೇತ್ರದ ಮುಂಚೂಣಿಯಲ್ಲಿದೆ. ಕಳೆದ 15 ವರುಷಗಳಲ್ಲಿ ಕೈಗೊಂಡ ವಿವಿಧ ಕಾರ್ಯಯೋಜನೆಗಳು:
1. ಪುರುಷರಿಗಾಗಿ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರ-2009: ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಕಾಸರಗೋಡು ಜಿಲ್ಲೆಯ ಮಾದರಿ ಕೇಂದ್ರವಾಗಿದೆ. ನೂರಾರು ಪ್ರಶಸ್ತಿಗಳನ್ನು ಈ ಕೇಂದ್ರ ತನ್ನ ಸೇವೆಗಾಗಿ ಈ ತನಕ ಪಡೆದುಕೊಂಡಿದೆ. ಪ್ರಸ್ತುತ 300 ಮಾನಸಿಕ ಅಸ್ವಸ್ಥ ನಿರಾಶ್ರಿತರಿಗೆ ಆರೋಗ್ಯಕರ ಆಹಾರ, ವೈದ್ಯಕೀಯ ನೆರವು ಮತ್ತು ಚಿಕಿತ್ಸಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
2. ಮಹಿಳೆಯರಿಗಾಗಿ ಮಾನಸಿಕ-ಸಾಮಾಜಿಕ ಪುನರ್ವಸತಿ ಮನೆ-2019: ಮಹಿಳೆಯರಿಗೆ ವಿಷೇಶ ಸೌಕರ್ಯವುಳ್ಳ ತಾಣ 26ನೇ ಜನವರಿ 2019 ರಂದು ಉದ್ಘಾಟನೆಗೊಂಡಿತು. ಪ್ರಸ್ತುತ ಇದು ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಹೊಂದಿರುವ 90 ನಿರಾಶ್ರಿತ ಮಹಿಳೆಯರಿಗೆ ಚಿಕಿತ್ಸಾ ನೆಲೆಯಾಗಿದೆ.
3. ರೋಗಿಗಳ ಪರಿಚಾರಕರಿಗಾಗಿ ಮದ್ಯಾಹ್ನದ ಉಚಿತ ಊಟದ ವ್ಯವಸ್ಥೆ – “ಮನ್ನಾ”: ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ 700 ಜನರಿಗೆ ಉಚಿತ ಮಧ್ಯಾಹ್ನದ ಊಟವನ್ನು “ಸ್ನೇಹಾಲಯ ಮನ್ನಾ”- ಹೆಸರಿನಲ್ಲಿ ರೋಗಿಗಳ ಪರಿಚಾರಕರಿಗಾಗಿ, ಹಸಿದವರಿಗಾಗಿ 2015 ರಿಂದ ಪ್ರತಿ ದಿನ ಯಾವುದೇ ಸಂದರ್ಭಗಳಲ್ಲಿ ತಪ್ಪದೆ ಒದಗಿಸುತ್ತಿರುವುದು ವಿಶೇಷ.
4. ಇತರ ಸಾಮಾಜಿಕ ಸಂಪರ್ಕ ಕಾರ್ಯಕ್ರಮಗಳು/ಸೇವೆಗಳು:
• ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಅಂತ್ಯಕ್ರಿಯೆಗಾಗಿ ಮೃತದೇಹಗಳನ್ನು ಕೊಂಡೊಯ್ಯಲು, ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ.
• ಕೋವಿಡ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸಿಲುಕಿಕೊಂಡಿರುವ ದೂರದ ಪ್ರದೇಶಗಳಲ್ಲಿನ ಬಡ ಕುಟುಂಬಗಳು, ಟ್ರಾನ್ಸ್ಜೆಂಡರ್, ಎಚ್ಐವಿ ಪೀಡಿತ ಜನರು, ಲೈಂಗಿಕ ಕಾರ್ಯಕರ್ತರಿಗೆ 3000 ಕ್ಕೂ ಹೆಚ್ಚು ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಆರೋಗ್ಯ ಹಾಗೂ ಅಗತ್ಯ ಸಾರಿಗೆಯ ವ್ಯವಸ್ಥೆ ನೀಡಲಾಗಿತ್ತು.
• ಕೇರಳದ ಪ್ರವಾಹ ಸಂದರ್ಭದಲ್ಲಿ ಪರಿಹಾರ ಶಿಬಿರಗಳು, ಕೂರ್ಗ್ ಭೂಕುಸಿತ ಸಂದರ್ಭದಲ್ಲಿ, ಲಾಕ್‌ಡೌನ್ ಸಂದರ್ಭದಲ್ಲಿ ಪರಿಹಾರ ಇತ್ಯಾದಿಗಳನ್ನು ಒದಗಿಸಲಾಗಿತ್ತು.
• ಲಾಕ್‌ಡೌನ್‌ನಿಂದಾಗಿ ರಾಜ್ಯಗಳ ಗಡಿಗಳಲ್ಲಿ ನಿಲ್ಲಿಸಲಾದ ಉತ್ತರ ಕರ್ನಾಟಕ, ಬಿಹಾರ, ಯುಪಿ, ಜಾರ್ಖಂಡ್ ಮತ್ತು ಉತ್ತರ ಭಾರತದ ಇತರ ಭಾಗಗಳಿಂದ ಬಂದ ಕಾರ್ಮಿಕರಿಗೆ ತಲಪಾಡಿ ಗಡಿಯಲ್ಲಿ (ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ) 15 ದಿನಗಳ ಕಾಲ ಸ್ನೇಹಾಲಯ ಅಡುಗೆಮನೆಯಲ್ಲಿ ತಯಾರಿಸಿದ ಉಚಿತ ಆರೋಗ್ಯಕರ ಆಹಾರವನ್ನು ಒದಗಿಸಲಾಗಿದೆ.
• ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ದಾನಿಗಳ ಬೆಂಬಲ ಮತ್ತು ಸ್ಥಳೀಯರ ಕೊಡುಗೆಯೊಂದಿಗೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಅತ್ಯಗತ್ಯ ಅವಶ್ಯಕತೆ ಇರುವ 16 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲಾಗಿದೆ.
• ಉನ್ನತ ಶಿಕ್ಷಣಕ್ಕಾಗಿ 100ಕ್ಕೂ ಹೆಚ್ಚು ಬಡ ವಿಧ್ಯಾರ್ಥಿಗಳಿಗಾಗಿ ಸಹಾಯಧನ. ಹಾಗೂ ಇನ್ನಿತರ ಸಾಮಾಜಿಕ ಕಳಕಳಿಯ ಹಲವು ಕಾರ್ಯಕ್ರಮಗಳನ್ನುನಡೆಸಲಾಗಿದೆ. ಉದಾ: ವಿಶ್ವ ಏಡ್ಸ್ ಡೇ, ವಿಶ್ವ ಮಾನಸಿಕ ಅರೋಗ್ಯ ದಿನ, ವಿಶ್ವ ಸಾಮರಸ್ಯ ದಿನ, ರಾಷ್ಟೀಯ ಹಬ್ಬಗಳು ಇತ್ಯಾದಿ.
• ಸಂಸ್ಥೆಗೆ ಈ ತನಕ ಭೇಟಿ ನೀಡಿದವರ ಸಂಖ್ಯೆ 15,000 ದಾಟಿರಬಹುದು, ಜೊತೆಗೆ ಪ್ರತಿ ವರುಷ 8-10 ವಿಧ್ಯಾರ್ಥಿಗಳು ತಮ್ಮ ಇಂಟರ್ನ್ ಶಿಪ್ ನಡೆಸುವ ಸಂಸ್ಥೆ ಇದಾಗಿದೆ.
• ಸಂಸ್ಥೆ ಹಾಗೂ ಸಂಸ್ಥಾಪಕರ ಬಗ್ಗೆ ಪ್ರಕಾಶಿಸಿದ ಸ್ನೇಹಗಂಗೆ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ವಿಧ್ಯಾರ್ಥಿಗಳ ಪದವಿ ವ್ಯಾಸಂಗಕ್ಕೆ ಆರಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಬರೆದ ” ಎ ಮ್ಯಾನ್ ವಿದ್ ಎ ಮಿಷನ್” ಪುಸ್ತಕ ಸಂಸ್ಥೆಯ ಸವಿವರ ನೀಡುವ ಅದ್ಭುತ ಕೃತಿಯಾಗಿದೆ.
ಪತ್ರಿಕಾ ಪ್ರಕಟಣೆ: ಶ್ರೀ ಜೋಸೆಫ್ ಕ್ರಾಸ್ತಾ, ಮ್ಯಾನೇಜಿಂಗ್ ಟ್ರಸ್ಟಿ, ಸ್ನೇಹಾಲಯ