ಇತ್ತೀಚಿನ ಸುದ್ದಿ
ಸ್ಕಾಲರ್‌ಶಿಪ್ ಕುರಿತ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ: ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ
27/10/2024, 23:27
ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ರೂ 24,000ಗಳ ಸ್ಕಾಲರ್‌ಶೀಪ್ ಸೌಲಭ್ಯವಿರುವ ಕುರಿತಾದ ಸುಳ್ಳು ಸುದ್ದಿಯ ಅಧಿಕೃತ ಸಹಿಯಿಲ್ಲದ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಸಾರ್ವಜನಿಕರು ನಂಬದಿರಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮೇಲಿನ ಸುದ್ದಿಯು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದ್ದು, ಸಾರ್ವಜನಿಕರು ವಿವಿಧ ಕಛೇರಿಗಳಿಗೆ ಅರ್ಜಿಗಾಗಿ ಅಲೆದಾಡುತ್ತಿರುವುದು ಕಂಡುಬಂದಿರುತ್ತದೆ. ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆಯು ಎಲ್ಲಾ ತಂದೆಯಿಲ್ಲದ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಈ ಯೋಜನೆಯ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು. ಯೋಜನೆಯಲ್ಲಿ
ಫಲಾನುಭವಿಯಾಗಲು ನಿರ್ಧಿಷ್ಟ ಮಾನದಂಡಗಳು ಅನ್ವಯವಾಗಲಿವೆ ಎಂದು ತಿಳಿಸಿದ್ದಾರೆ.
ಪ್ರಾಯೋಜಕತ್ವ ಯೋಜನೆಯ ಮಾನದಂಡಗಳಾದ ತಾಯಿ ವಿಧವೆ, ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ, ಮಕ್ಕಳು ಅನಾಥರಾಗಿದ್ದಾರೆ ಹಾಗೂ ವಿಸ್ತ್ರತ ಕುಟುಂಬದೊಡನೆ ಜೀವಿಸುತ್ತಿದ್ದರೆ, ಪೋಷಕರು ಜೀವಕ್ಕೆ ಬೆದರಿಕೆಯೊಡ್ಡುವ, ಗಂಭೀರ ಸ್ವರೂಪದ ಖಾಯಿಲೆಯ ಸಂತ್ರಸ್ಥರಾಗಿದ್ದರೆ, ಪೋಷಕರು ಆಸಕ್ತರಾಗಿದ್ದಾರೆ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಅರ್ಥಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥವಾಗಿದ್ದರೆ.
ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ ಅಂದರೆ ವಸತಿರಹಿತರು, ಯಾವುದಾದರು ನೈಸರ್ಗಿಕ ವಿಕೋಪಗಳ ಸಂತ್ರಸ್ಥರು, ಮಾನವ ಕಳ್ಳ ಸಾಗಾಣೆ ಸಂತ್ರಸ್ಥರು, ಹೆಚ್.ಐ.ವಿ/ ಏಡ್ಸ್ ಪರಿಣಾಮ ಪೀಡಿತ ಮಗು, ವಿಶೇಷ ಚೇತನ ಮಗು, ತಪ್ಪಿಸಿಕೊಂಡಿರುವ ಅಥವಾ ಓಡಿಬಂದಿರುವ ಮಗು, ಭಿಕ್ಷಾಟಣೆ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ ಮಗು, ಬೆಂಬಲ ಹಾಗೂ ಪುನರ್ವಸತಿಯ ಅಗತ್ಯವಿರುವ ಹಿಂಸೆಗೊಳಪಟ್ಟ ಅಥವಾ ನಿಂದನೆ ಅಥವಾ ಶೋಷಿತ ಮಕ್ಕಳ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.