10:12 PM Friday28 - February 2025
ಬ್ರೇಕಿಂಗ್ ನ್ಯೂಸ್
STUDENT NATIONAL SEMINAR | ಬೆಂಗಳೂರಿನ ಸೈಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಕಾಲೇಜಿನಲ್ಲಿ… Political Dispute | ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಮಾಜಿ… Agriculture | ರಾಜ್ಯದಲ್ಲಿ ಎಫ್ ಪಿಒಗಳಿಂದ 1073 ಕೋಟಿ ರೂ.ಗಳ ವಹಿವಾಟು: ಕೃಷಿ… ಕಪಿಲೆಯಲ್ಲಿ ಮುಳುಗಿದ ಇಬ್ಬರು ವ್ಯಕ್ತಿಗಳು: ಎಲ್ಲರಲ್ಲೂ ಭಯ, ಆತಂಕ; ದೌಡಾಯಿಸಿದ ಎನ್ ಡಿಆರ್… BSY B’day | ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರ: ಮಾಜಿ… PU Exams | ಸಿಸಿ ಟಿವಿ ಕಣ್ಗಾವಲಿನಲ್ಲಿ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ Travel Expo | ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಬೆಳೆಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಸಂಭ್ರಮ: ಕಪಿಲೆಯಲ್ಲಿ ಮಿಂದ ಭಕ್ತ… ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮೇಳ: ಸಿದ್ಧತಾ ಕಾರ್ಯ ಪರಿಶೀಲಿಸಿದ ಸ್ಪೀಕರ್ ಖಾದರ್ Forest Fire | ಚಿಕ್ಕಮಗಳೂರು: ದೇವರು ಮನೆಗುಡ್ಡದಲ್ಲಿ ಕಾಡ್ಗಿಚ್ಚು; ಅರಣ್ಯ ಇಲಾಖೆ ಪರಿಶ್ರಮದಿಂದ…

ಇತ್ತೀಚಿನ ಸುದ್ದಿ

Science & Technology | ಸರಕಾರಿ ಶಾಲೆಗಳಲ್ಲಿ ಪ್ರಯೋಗಶೀಲತೆಗೆ ಅವಕಾಶ ಕಲ್ಪಿಸುವ ಹೊಸ ಕಲಿಕಾ ಯೋಜನೆಗೆ ಚಿಂತನೆ

28/02/2025, 20:05

ಬೆಂಗಳೂರು(reporterkarnataka.com): ಇಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಎಐ ಮತ್ತು ಮೆಷಿನ್‌ ಲರ್ನಿಂಗ್‌ ನಂತಹ ಕ್ಷೇತ್ರಗಳಲ್ಲಿ ಸಾಧನೆಗೆ ಪ್ರೇರೇಪಿಸುವಂತಹ ಕೌಶಲ್ಯಗಳನ್ನ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಸರಕಾರಿ ಶಾಲೆಗಳಲ್ಲಿ ಪ್ರಯೋಗಶೀಲತೆಗೆ ಹಾಗೂ ಚಟುವಟಿಕೆಯ ಮೂಲಕ ಕಲಿಕೆಗೆ ಅನುವು ಮಾಡಿಕೊಡುವ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌. ಎಸ್‌. ಭೋಸರಾಜು ಹೇಳಿದರು.
ಇಂದು ಜವಾಹರ್‌ಲಾಲ್‌ ನೆಹರು ತಾರಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಯು. ಆರ್‌. ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ವಿಷಯ ತಿಳಿಸಿದರು.
ದೇಶ ಹಾಗೂ ರಾಜ್ಯಗಳ ಪ್ರಗತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ. ಪ್ರತಿವರ್ಷ ಫೆಬ್ರವರಿ 28ರಂದು ಸರ್‌ ಸಿ.ವಿ. ರಾಮನ್‌ ಅವರ “ರಾಮನ್‌ ಪರಿಣಾಮ” ಆವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಜ್ಞಾನವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದು – ಜನರನ್ನು ವಿಜ್ಞಾನದ ಕಡೆಗೆ ಕರೆದೊಯ್ಯುವುದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ಅವರ ದೂರದೃಷ್ಟಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಸೃಜನಶೀಲತೆ, ಸುಸ್ಥಿರತೆ ಮತ್ತು ವೈಜ್ಞಾನಿಕತೆಯನ್ನು ಸಾರುವಂತಹ ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕರ್ನಾಟಕ ರಾಜ್ಯವನ್ನು ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದಕ್ಕೆ ನಮ್ಮ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಸಂಶೋದನೆ ಮತ್ತು ಅಭಿವೃದ್ದಿಗೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಸಲು ಕಳೆದ ಬಜೆಟ್‌ನಲ್ಲಿ ಟೆಲಿಸ್ಕೋಪ್‌ ವಿತರಿಸಲು ಅಗತ್ಯ ಅನುದಾನ ನೀಡಲಾಗಿತ್ತು. ಇಂದು ವಸತಿ ಶಾಲೆಗಳಿಗೆ ಟೆಲಿಸ್ಕೋಪ್‌ ಕೂಡಾ ಹಸ್ತಾಂತರಿಸಲಾಗುತ್ತಿದೆ.
ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯುವ ನಿಟ್ಟಿನಲ್ಲಿ ಪಾಠದ ಜೊತೆಯಲ್ಲೇ ಹೆಚ್ಚಿನದ್ದನ್ನು ಮಾಡುವುದು ಅಗತ್ಯ. ವಿದ್ಯಾರ್ಥಿಗಳು ಹೆಚ್ಚಿನದ್ದನ್ನ ಓದುವಂತೆ, ಬರೆಯುವಂತೆ, ಸಂಶೋಧಿಸುವಂತೆ, ಪ್ರಾಯೋಗಿಕವಾಗಿ ಚರ್ಚಿಸುವಂತೆ, ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರೇರೇಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಯೋಗಶೀಲತೆಗೆ ಅನುವು ಮಾಡಿಕೊಡುವಂತಹ ಹೊಸ ಯೋಜನೆ ರೂಪಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಚಿಂತನೆ ನಡೆಸುತ್ತಿದೆ. ವಿಜ್ಞಾನ, ತಂತ್ರಜ್ಞಾನ, ರೊಬೊಟಿಕ್ಸ್‌, ಪರಿಸರ ಮತ್ತು ಪರಿಸರ ವಿಜ್ಞಾನ, ಖಗೋಳಶಾಸ್ತ್ರ ಮತ್ತು ಗಣಿತದ ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥಮಾಢಿಕೊಳ್ಳಲು ಉಪಕರಣಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ. ಈ ಮೂಲಕ ನಮ್ಮ ವಿದ್ಯಾರ್ಥಿಗಳು ಎಐ ಮತ್ತು ಮೆಷಿನ್‌ ಲರ್ನಿಂಗ್‌ ನಂತಹ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್‌ ಮಾನ್ಯ ಸಭಾಪತಿಗಳಾದ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್‌, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಸಚಿವರಾದ ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಎಂ.ಸಿ. ಸುಧಾಕರ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು