ಇತ್ತೀಚಿನ ಸುದ್ದಿ
ಶಾಲಾ ಆವರಣದಲ್ಲಿ ಕಾಳಿಂಗ ಸರ್ಪ ಸೆರೆ: ಉರಗ ಪ್ರೇಮಿ ಬಣಕಲ್ ಆರೀಫ್ ಅವರಿಂದ ತಾಸಿನ ಕಾರ್ಯಾಚರಣೆ; ನೋಡಲು ಜನಜಾತ್ರೆ!
22/09/2024, 00:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಒಳಗೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಜನರು ಭಯಭೀತರಾದರು.
ಶುಕ್ರವಾರ ಸಂಜೆ ಶಾಲೆ ಬಿಟ್ಟ ನಂತರ ಕಾಳಿಂಗ ಸರ್ಪ ಶಾಲೆಯ ಶೌಚಾಲಯ ಬಳಿ ಅಡಗಿದ್ದನ್ನು ಸಾರ್ವಜನಿಕರು ನೋಡಿ ಉರಗ ಪ್ರೇಮಿ ಬಣಕಲ್ ಮೊಹಮ್ಮದ್ ಆರೀಫ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಬಂದ ಸ್ನೇಕ್ ಆರೀಫ್ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ 15 ಅಡಿ ಉದ್ದ ಕಾಳಿಂಗ ಸರ್ಪ ಸೆರೆ ಹಿಡಿದರು. ಶಾಲೆಯ ಮಕ್ಕಳಿದ್ದ ಸಮಯದಲ್ಲಿ ಕಾಳಿಂಗ ಸರ್ಪ ಯಾರಿಗೂ ಕಾಣಿಸದ ಕಾರಣ ದೊಡ್ಡ ಅಪಾಯ ಸಂಭವಿಸುವುದು ತಪ್ಪಿದಂತಾಗಿದೆ. ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಡಲಾಯಿತು. ಕಾರ್ಯಾಚರಣೆ ವೇಳೆ ನೂರಾರು ಮಂದಿ ಜಮಾಯಿಸಿ ಕಾಳಿಂಗ ಸರ್ಪವನ್ನು ವೀಕ್ಷಿಸಿದರು.