ಇತ್ತೀಚಿನ ಸುದ್ದಿ
ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ತಿರುಪತಿ ಮಾದರಿ ಸೌಕರ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
14/10/2024, 11:14
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತಾಧಿಗಳು ಭೇಟಿ ನೀಡುವುದರಿಂದ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು ಸರಕಾರ ಪ್ರಥಮ ಆದ್ಯತೆ ನೀಡಲಿದೆ.ತಿರುಪತಿ ಮಾದರಿಯ ಸೌಕರ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಪ್ರಥಮ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಭಕ್ತಾಧಿಗಳಿಗೆ ಉತ್ತಮ ವಸತಿ ಹಾಗೂ ದರ್ಶನಕ್ಕೆ ಅನುಕೂಲ ಕಲ್ಪಿಸಬೇಕು. ದೇವಸ್ಥಾನ ಹಾಗೂ ಸುತ್ತಮುಲಿನಲ್ಲಿರುವ ಸರಕಾರದ ಜಮೀನು ಒತ್ತುವರಿ ಆಗದಂತೆ ತಡೆಯಲು ಕಂಪೌಂಡ್ ಹಾಕಬೇಕು ಎಂದು ತಿಳಿಸಿದರು.
ಸದ್ಯಕ್ಕೆ ವ್ಯಾಪಾರ-ವಹಿವಾಟು ಮಾಡುವ ಜನರಿಗೆ ಪ್ರತ್ಯೇಕ ಜಾಗೆಯನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು ಎಂದರು.
ಪ್ರವಾಸೋದ್ಯಮ ಮಂಡಳಿ ಮತ್ತು ದೇವಸ್ಥಾನ ಮಂಡಳಿ ಸೇರಿಕೊಂಡು ಭಕ್ತಾಧಿಗಳಿಗೆ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು.
ಉತ್ತಮ ಸೌಲಭ್ಯ ಒದಗಿಸಿದರೆ ಭಕ್ತಾಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಸುಲಭ ದರ್ಶನಕ್ಕೆ ಅವಕಾಶ ಕಲ್ಪಿಸುವುದು ಪ್ರಥಮ ಆದ್ಯತೆಯಾಗಿರಬೇಕು.
*ತಿರುಪತಿ ಮಾದರಿ ಸೌಕರ್ಯಕ್ಕೆ ಸೂಚನೆ:*
ತಿರುಪತಿ ಮಾದರಿಯನ್ನು ಅಧ್ಯಯನ ಮಾಡಿಕೊಂಡು ಅದೇ ಮಾದರಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
45 ಕೋಟಿ ಬ್ಯಾಂಕಿನಲ್ಲಿದ್ದು, ವಾರ್ಷಿಕ ಅಂದಾಜು 25 ಕೋಟಿ ಆದಾಯ ಬರುತ್ತಿದೆ. ಉತ್ತಮ ಸೌಲಭ್ಯ ಒದಗಿಸುವ ಮೂಲಕ ಭಕ್ತರ ಭೇಟಿಯ ಪ್ರಮಾಣವನ್ನು ಹೆಚ್ಚಿಸಬೇಕು.
ಸುಕ್ಷೇತ್ರಗಳಿಗೆ ಭೇಟಿ ನೀಡುವವರು ಬಡವರೇ ಆಗಿದ್ದರೂ ಸಂಪ್ರದಾಯ ಮತ್ತು ಖರ್ಚು ವೆಚ್ಚಕ್ಕೆ ಯೋಚನೆ ಮಾಡುವುದಿಲ್ಲ. ಆದ್ದರಿಂದ ಉತ್ತಮ ಸೌಲಭ್ಯ ಒದಗಿಸಬೇಕು.
ಹುಣ್ಣಿಮೆ ಸಂದರ್ಭದಲ್ಲಿ ಚಕ್ಕಡಿಗಳಲ್ಲಿ ಜನರು ಬರುತ್ತಾರೆ. ಅಂತಹ ವೇಳೆ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
*ದಾನಿಗಳು-ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿ:*
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾಕಷ್ಟು ಜಮೀನು ಲಭ್ಯವಿರುವುದರಿಂದ ವಸತಿ ಮತ್ತಿತರ ಸೌಲಭ್ಯ ಒದಗಿಸಲು ಮುಂದಾಗುವ ದಾನಿಗಳು ಮತ್ತು ಸಂಸ್ಥೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಬರೀ ವಾಣಿಜ್ಯ ದೃಷ್ಟಿಯಿಂದ ನೋಡದೇ ಭಕ್ತಾಧಿಗಳಿಗೆ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರಿಗೂ ಅವಕಾಶ ಒದಗಿಸಬೇಕು.
ಸೋಲಾರ್ ಪಾರ್ಕ್, ರೋಪ್ ವೇ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಬೇಕು.
ಪಿಪಿಪಿ ಮಾದರಿ ಯೋಜನೆಗಳಡಿ ಬಂಡವಾಳ ಹೂಡಿಕೆಗೆ ಮುಂದಾಗುವರಿಗೆ ಕನಿಷ್ಠ 60 ವರ್ಷ ಗುತ್ತಿಗೆ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಭಕ್ತಾಧಿಗಳು ಪಡ್ಡಲಗಿ ತುಂಬಿಸಿ ಜೋಗತಿಯರಿಗೆ ನೈವೇದ್ಯ ಸಮರ್ಪಿಸುತ್ತಾರೆ. ಜನಸಂದಣಿ ಹೆಚ್ಚಾಗಿರುವಾಗ ದರ್ಶನ ಸಾಧ್ಯವಾಗುತ್ತಿಲ್ಲ; ಆದ್ದರಿಂದ ಎಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಸರಕಾರದ ವತಿಯಿಂದ 25 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರವಾಸೋದ್ಯಮ ಮತ್ತು ದೇವಸ್ಥಾನ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ, ಯಲ್ಲಮ್ಮ ಸುಕ್ಷೇತ್ರಕ್ಕೆ ಆಗಮಿಸುವ ಬಹಳಷ್ಟು ಜನರು ಬಡವರು ಹಾಗೂ ಅನಕ್ಷರಸ್ಥರಾಗಿರುತ್ತಾರೆ. ಆದ್ದರಿಂದ ಸ್ವಚ್ಛತೆ, ವಸತಿ ಹಾಗೂ ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಪ್ರತಿಪಾದಿಸಿದರು.
ಪಿಪಿಪಿ ಮಾದರಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಮಹಾರಾಷ್ಟ್ರದ ಭಕ್ತರೊಬ್ಬರು ಎರಡು ಎಕರೆ ಜಾಗೆ ನೀಡಿದರೆ ಮೂರು ಮಹಡಿಯ ವಸತಿ ಸಮುಚ್ಛಯ ಸ್ಥಾಪಿಸಿಕೊಡುವ ಭರವಸೆ ನೀಡಿದ್ದಾರೆ.
ಅದಲ್ಲದೇ ಹರ್ಷ ಶುಗರ್ಸ್ ನಾಲ್ಕೈದು ಎಕರೆ ಜಾಗೆ ನೀಡಿದರೆ ನೂರಾರು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಮೂರು ಸಾವಿರ ಜನರು ಊಟ ಮಾಡಲು ಸರಕಾರದ ವತಿಯಿಂದಲೇ ದಾಸೋಹ ಭವನ ನಿರ್ಮಿಸಿಕೊಡಬೇಕು ಎಂದು ಎಚ್.ಕೆ.ಪಾಟೀಲ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸುಕ್ಷೇತ್ರ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿ ಯೋಜನೆಯ ರೂಪುರೇಷೆಗಳನ್ನು ಸಭೆಯಲ್ಲಿ ವಿವರಿಸಿದರು
ಗೌರಿ ಹುಣ್ಣಿಮೆ, ಹೊಸ್ತಿಲ ಹುಣ್ಣಿಮೆ, ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆ ಸೇರಿ ಒಟ್ಟಾರೆ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ.
ಈ ಸಂದರ್ಭದಲ್ಲಿ ಸುಗಮ ದರ್ಶನ ಹಾಗೂ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳ ಭಕ್ತಾಧಿಗಳ ಅನುಕೂಲಕ್ಕಾಗಿ ಸರದಿ ಕಾಂಪ್ಲೆಕ್ಸ್(ಕ್ಯೂ ಕಾಂಪ್ಲೆಕ್ಸ್), ಅಲ್ಲಿಯೇ ಲಘು ಉಪಾಹಾರ ನೀಡಲು ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಪಡ್ಡಲಗಿ ತುಂಬಲು ನಾಲ್ಕೈದು ಸಾವಿರ ಜನರು ಒಂದೇ ಕಡೆ ಅಡುಗೆ ಮಾಡಲು ಕೊಠಡಿಗಳು; ಎಣ್ಣೆಹೊಂಡದಲ್ಲೂ ಕೂಡ ಸರದಿ ವ್ಯವಸ್ಥೆ ಹಾಗೂ ರಾಮೇಶ್ವರಂ ಮಾದರಿಯಲ್ಲಿ ಮೇಲಿನಿಂದ ನೀರಿನ ಸಿಂಪರಣೆ ಹಾಗೂ ಸ್ನಾನದ ಬಳಿಕ ಬಟ್ಟೆ ಬದಲಾಯಿಸಲು ಕೂಡ ವ್ಯವಸ್ಥೆ ಮಾಡುವ ಯೋಜನೆಯನ್ನು ಜಿಲ್ಲಾಧಿಕಾರಿ ರೋಷನ್ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹುಣ್ಣಿಮೆ ಸಂದರ್ಭದಲ್ಲಿ ಜನದಟ್ಟಣೆ ಹಾಗೂ ಸುಗಮ ಸಂಚಾರ ನಿರ್ವಹಣೆಗೆಇಂಟ್ರಾನೆಟ್ ವಾಕಿಟಾಕಿ ವ್ಯವಸ್ಥೆ ಅಗತ್ಯವಿರುತ್ತದೆ ಎಂದು ವಿವರಿಸಿದರು.
ಮುಜರಾಯಿ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ, ವಾಯವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರಾದ ಭರಮಗೌಡ ಕಾಗೆ, ಶಾಸಕರಾದ ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ, ಆಸಿಫ್(ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ವಿ.ರಾಜೇಂದ್ರ, ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.