ಇತ್ತೀಚಿನ ಸುದ್ದಿ
ಸತತ 5ನೇ ಬಾರಿ ಗೆದ್ದಿರುವುದಕ್ಕೆ ಖಾದರ್ ಫುಲ್ ಖುಷ್: ರಾಜ್ಯದ ಜನತೆಯ ನೋವು ಓಟಿನ ಮೂಲಕ ವ್ಯಕ್ತವಾಗಿದೆ ಎಂದ ಮಿಸ್ಟರ್ ಕೂಲ್
16/05/2023, 16:28

ಮಂಗಳೂರು(reporterkarnataka.com): ಬಿಜೆಪಿ ಸರಕಾರದ 4 ವರ್ಷಗಳ ಆಡಳಿತ ಕಂಡ ಜನತೆ ತಮ್ಮ ನೋವನ್ನು ಓಟಿನ ಮೂಲಕ ವ್ಯಕ್ತಪಡಿಸಿರುವುದು ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿಗೆ ಕಾರಣವಾಯಿತು ಎಂದು ಮಂಗಳೂರು ಶಾಸಕ ಯು.ಟಿ. ಖಾದರ್ ಹೇಳಿದರು.
5ನೇ ಬಾರಿ ಗೆಲುವು ಸಾಧಿಸಿದ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿಯ ಜನವಿರೋಧಿ, ದ್ವೇಷಪೂರಿತ ಆಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಗೆ ಅಭೂತಪೂರ್ವ ಜಯ ಸಿಕ್ಕಿದೆ ಎಂದರು.
ಬಿಜೆಪಿ ಸರಕಾರದ ತಾರತಮ್ಯ ದ, ದ್ವೇಷಪೂರಿತ, ಜನವಿರೋಧಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಬೆಲೆಯೇರಿಕೆ, ಟ್ಯಾಕ್ಸ್, ಭ್ರಷ್ಟಾಚಾರದಿಂದ ತತ್ತರಿಸಿ ಹೋಗಿದ್ದಾರೆ. ಇದೆಲ್ಲ ಮತದಾನದ ಮೂಲಕ ವ್ಯಕ್ತವಾಗಿದೆ. ನಾನು ಕೂಡ ಮಂಗಳೂರು ಕ್ಷೇತ್ರದಲ್ಲಿ 5ನೇ ಬಾರಿ ಜಯಗಳಿಸಿದ್ದೇನೆ ಎಂದು ಅವರು ಖುಷಿ ಹಂಚಿಕೊಂಡರು.
ದ.ಕ. ಮತ್ತು ಉಡುಪಿ ಬಿಟ್ಟರೆ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿದಂತೆ ಎಲ್ಲ ಕಡೆ ಕಾಂಗ್ರೆಸ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಆದರೆ ದ.ಕ. ಹಾಗೂ ಉಡುಪಿಯಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ 5 ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿ ಮುಂದಿನ ಚುನಾವಣೆ ಯಲ್ಲಿ ಕರಾವಳಿಯಲ್ಲೂ ಉತ್ತಮ ಸಾಧನೆ ಮಾಡಲಿದೆ ಎಂದು ಅವರು ನುಡಿದರು.