ಇತ್ತೀಚಿನ ಸುದ್ದಿ
ಸಾರ್ವಜನಿಕ ರಂಗದ ಪ್ರತಿಷ್ಠಿತ ಕಂಪನಿಯ ನಿರ್ಲಕ್ಷ್ಯ: ಜೋಕಟ್ಟೆ ಜನವಸತಿ ಪ್ರದೇಶದ ರಸ್ತೆಯಲ್ಲೇ ಸಲ್ಫರ್ ಚೆಲ್ಲಿ ಸಾಗುವ ಎಂಆರ್‌ಪಿಎಲ್ ಟ್ರಕ್ ಗಳು!
14/03/2023, 21:30
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಜನರ ಆರೋಗ್ಯದ ಕುರಿತು ಸಾರ್ವಜನಿಕ ರಂಗದ ಪ್ರತಿಷ್ಠಿತ ಕಂಪನಿಯಾದ ಎಂಆರ್ ಪಿಎಲ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತೊಮ್ಮೆ ಸಾಬೀತಾಗಿದೆ. ಕಂಪನಿಗೆ ಸೇರಿದ ಟ್ರಕ್ ಗಳು ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ಅಪಾಯಕಾರಿ ಸಲ್ಫರ್ ಚೆಲ್ಲಿ ಸಾಗಿದ್ದು ಬೆಳಕಿಗೆ ಬಂದಿದೆ.
ಭೂಮಿ ಕೊಟ್ಟ ಕೃಷಿಕರಿಗೆ ರೋಗ ಕೊಟ್ಟ ಎಂಆರ್ ಪಿಎಲ್ ನಿಂದ ಸ್ಥಳೀಯರ ಬದುಕು ನಿತ್ಯ ನರಕವಾಗುತ್ತಿದೆ. ಎಂಆರ್ ಪಿಎಲ್ ಸುರತ್ಕಲ್ ಪ್ರದೇಶಕ್ಕೆ ಲಗ್ಗೆ ಇಟ್ಟಾಗಿನಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆ ಒಂದು ಎರಡು ಅಲ್ಲ, ಟ್ರಾಫಿಕ್ ಸಮಸ್ಯೆಯಿಂದ ಆರಂಭಗೊಂಡು ಮಾಲಿನ್ಯದವರೆಗೆ ಎಲ್ಲ ತರಹದ ತೊಂದರೆಗಳನ್ನು ಜನರು ಅನುಭವಿಸುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಅದ್ವಾನ ಎಂಆರ್ ಪಿಎಲ್ ನಿಂದ ನಡೆದಿದೆ. ಎಂಆರ್ ಪಿಎಲ್ ನ ಟ್ರಕ್ ಗಳು ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ಅಪಾಯಕಾರಿ ಸಲ್ಫರ್ ಚೆಲ್ಲಿ ಸಾಗಿದೆ. ಈ ಕುರಿತು ಕಂಪನಿ ಕಡೆಯಿಂದ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದಿರುವುದು ಸ್ಪಷ್ಟವಾಗುತ್ತಿದೆ. ಕರ್ನಾಟಕದವರೇ ಆದ ಎಂಡಿ ಹಾಗೂ ಸ್ಥಳೀಯರೇ ಆದ ಜನರಲ್ ಮೆನೇಜರ್ ಗಳನ್ನು ಕಂಪನಿಯು ಹೊಂದಿದ್ದರೂ ಇವರು ಸ್ಥಳೀಯರ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸ್ಥಳೀಯ ಜನರು ರಿಪೋರ್ಟರ್ ಕರ್ನಾಟಕಕ್ಕೆ ದೂರಿದ್ದಾರೆ.




ಜಿಲ್ಲೆಗೆ ಬೃಹತ್ ಕೈಗಾರಿಕೆಗಳು ಬಂದರೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಆರ್ಥಿಕ ವ್ಯವಹಾರ ಕುದುರುತ್ತದೆ ಎಂಬ ಆಸೆ ತೋರಿಸಿ 3-4 ದಶಕಗಳ ಹಿಂದೆ ಕರಾವಳಿಗೆ ಎಂಟ್ರಿ ಕೊಟ್ಟ ಬೃಹತ್ ಕೈಗಾರಿಕೆಗಳ ನಿಜ ಸ್ವರೂಪ ಒಂದೊಂದಾಗಿ ಬಯಲಾಗುತ್ತಿದೆ. ಸಾರ್ವಜನಿಕ ರಂಗದ ಪ್ರತಿಷ್ಠಿತ ಕಂಪನಿಯಾದ ಎಂಆರ್ ಪಿಎಲ್ ಬಂದ ಬಳಿಕ ಸಾಲು ಸಾಲಾಗಿ ಲಗ್ಗೆ ಇಟ್ಟ ಬೃಹತ್ ಕೈಗಾರಿಕೆಗಳು ಉದ್ಯೋಗ ಏನೋ ಸೃಷ್ಟಿಸಿದೆ. ಆದರೆ ಸ್ಥಳೀಯರಿಗೆ ನೌಕರಿ ನೀಡಿಲ್ಲ. ಬದಲಿಗೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಕೊಟ್ಟ ರೈತ – ಕೃಷಿಕರಿಗೆ ಉಚಿತವಾಗಿ ರೋಗ ಕೊಟ್ಟಿದೆ.
ಸಾರ್ವಜನಿಕ ರಂಗದ ಎಂಆರ್ ಪಿಎಲ್ ತಡರಾತ್ರಿ ಮಾಲಿನ್ಯ ಬಿಡುಗಡೆ ಮಾಡುವಾಗ ಉಂಟಾಗುವ ದುರ್ನಾತ ಕುರಿತು ಇತ್ತೀಚೆಗಷ್ಟೇ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಬೃಹತ್ ಪ್ರತಿಭಟನೆಯನ್ನು ಎಂಆರ್ ಪಿಎಲ್ ಕಾರ್ಗೋ ಗೇಟ್ ಎದುರು ನಡೆಸಿದ್ದರು. ನಾಗರಿಕರು ತಮ್ಮ ಸಮಸ್ಯೆ ಕೇಳಲು ಎಂಆರ್ ಪಿಎಲ್ ಎಂಡಿ ವೆಂಕಟೇಶ್ ಅವರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರೂ ಎಂಡಿಯಾಗಲಿ, ಸ್ಥಳೀಯರೇ ಆದ ಜನರಲ್ ಮೆನೇಜರ್ ಆಗಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸದೆ ವೆಲ್ಫೇರ್ ಆಫೀಸರ್ ಅವರನ್ನು
ಸ್ಥಳೀಯರ ಜತೆ ಮಾತುಕತೆಗೆ ಕಳುಹಿಸಿದ್ದರು. ನಂತರ ಬೈಕಂಪಾಡಿ ಕೈಗಾರಿಕಾ ವಲಯ, ಎಂಆರ್ ಪಿಎಲ್, ಎಸ್ ಇಝಡ್ ತಮ್ಮ ಕೈಗಾರಿಕಾ ಮಾಲಿನ್ಯದ ತ್ಯಾಜ್ಯವನ್ನು ಫಲ್ಗುಣಿ ನದಿ ಸೇರುವ ತೋಕೂರು ಹಳ್ಳಕ್ಕೆ ಹರಿಯಬಿಟ್ಟಿತ್ತು. ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಪೂರ್ತಿ ಕೊಳೆತು ನಾರಲಾರಂಭಿಸಿತು. ಇದೆಲ್ಲ ನೇರವಾಗಿ ಪಲ್ಗುಣಿ ನದಿಗೆ ಸೇರುತ್ತಿತ್ತು. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತದೆ. ಇದೆಲ್ಲ ಮುಗಿಯುವಷ್ಟರಲ್ಲಿ ಇದೀಗ ರಸ್ತೆಯಲ್ಲೇ ಸಲ್ಫರ್ ಚೆಲ್ಲಿ ಟ್ರಕ್ ಗಳು ಸಾಗುತ್ತಿದೆ. ದಿನಾ ಸಾಯುವವನಿಗೆ ಅಳುವವರು ಯಾರು ಎಂಬ ಪರಿಸ್ಥಿತಿ ಸ್ಥಳೀಯರದ್ದಾಗಿದೆ.














