3:03 PM Thursday24 - October 2024
ಬ್ರೇಕಿಂಗ್ ನ್ಯೂಸ್
ವಯನಾಡು ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ; ಬೃಹತ್… ಪಂಚಾಯತ್ ಪಾಲಿಟಿಕ್ಸ್: ಅಧಿಕಾರ, ಅನುದಾನದ ಆಸೆಗೆ ಗ್ರಾಪಂ ಸದಸ್ಯೆಯ ಪತಿಯ ಭೀಕರ ಹತ್ಯೆ:… ಮೂಡಿಗೆರೆ ರೈತ ಭವನದಲ್ಲಿ ಅ.25ರಂದು ವೈವಿಧ್ಯಮಯ ‘ಮಲೆನಾಡು ಹಬ್ಬ’ ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಸಂಶೋಧನೆ ಮತ್ತು ಸಾಹಿತ್ಯದ ಮೇರುಶಿಖರ : ಡಾ.ಧರ್ಮಪಾಲನಾಥ ಸ್ವಾಮೀಜಿ

29/01/2022, 12:27

ಡಾ.ಸುಬ್ರಹ್ಮಣ್ಯ ಸಿ ಕುಂದೂರು

ವಿಚಾರವಂತರು, ಸಾಧು, ಸಂತರು ಆತ್ಮದ ಅನುಸಂಧಾನಕ್ಕಾಗಿ ಬರೆಯುತ್ತಾರೆ. ನಮಗೆ ಅವರ ಬರೆಹವು ಸಾಮಾಜಿಕ ಅಭಿವ್ಯಕ್ತಿಯಂತೆ ಕಾಣುತ್ತದೆ. ಅದು ನಮ್ಮೊಳಗೆ ಖುಷಿಯನ್ನು, ಸಾಂಸ್ಕೃತಿಕ ತಾರ್ಕಿಕತೆಯನ್ನು ಹುಟ್ಟುಹಾಕುತ್ತದೆ. ಇಂತಹ ಸಾಹಿತ್ಯವು ಲೋಕವನ್ನು ಕಟ್ಟುವ ಕಾಯಕವನ್ನು ಸದ್ದಿಲ್ಲದೆ ಮಾಡುತ್ತದೆ. ಬರಹಗಾರನ ಕಾಯಕ, ಮನಸ್ಸಿನ ಅನುಷ್ಠಾನವು ಸಾಹಿತ್ಯವೊಂದರ ಚಲನೆಯ ಸೌಂದರ್ಯವನ್ನು ಕ್ರೋಡೀಕರಿಸುತ್ತದೆ ಎಂಬುವುದು ಕಾವ್ಯಮೀಮಾಂಸೆಯ ಧೋರಣೆಯು ಹೌದು. ಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಮಠಪರಂಪರೆಯ ಕಸುವನ್ನು ತನ್ನಾಂರ್ತದಲ್ಲಿ ಪ್ರಜ್ಞೆ ಮತ್ತು ಪರಿಸರವಾಗಿಸಿಕೊಂಡಿರುವುದರಿಂದ ಭಾರತೀಯ ಧಾರ್ಮಿಕ ಚಿಂತನೆಯು ಅವರಲ್ಲಿ ಗಾಢವಾಗಿ ಕಾಣಿಸುತ್ತದೆ.

ಸಾಮಾಜಿಕವಾಗಿ ರೂಪಿತವಾದ ಸಾಂಸ್ಕೃತಿಕ ಪರಿಭಾವಗಳನ್ನು, ಪರಿಕರಗಳನ್ನು ಅಧ್ಯಾತ್ಮದ ದಾರದಲ್ಲಿ ಪೋಣಿಸಿರುವುದರಿಂದ ಶ್ರೀಗಳ ಸಾಹಿತ್ಯದ ಘಮಲು ನಮ್ಮನ್ನು ಆಕರ್ಷಿಸುತ್ತದೆ. ಸಂಸ್ಕೃತ ಸಾಹಿತ್ಯದ ಜೊತೆಯಲ್ಲಿಯೇ ಬರೆಹದ ಅಭಿರುಚಿಯನ್ನು ರೂಢಿಸಿಕೊಂಡ ಶ್ರೀಗಳ ಮೊದಲ ಲೇಖನ “ಜನ್ಮ ಸಾರ್ಥಕ ಮಾಡಿಕೊ, ಅಹಂ ಭಾವವನ್ನು ಬಿಡು”, ಆನಂತರ ಬರೆದ ಬರೆಹಗಳೆಲ್ಲವು ಸಂಶೋಧನೆಯ ಪರಿಧಿಯನ್ನು ಒಳಗೊಂಡು ಆಧ್ಯಾತ್ಮಿಕ ತಾತ್ವಿಕತೆಯನ್ನು ಅಪ್ಪಿಕೊಂಡವು. ‘ಯುಗಪುರುಷ, ಮಹಾತಪಸ್ವಿ, ರಜತಗಿರಿವಾಸಿನಿ ಶ್ರೀಚೌಡೇಶ್ವರಿ, ಭಾವಗಂಗ, ಪ್ರಜ್ಞಾದೀಪ್ತಿ, ಚಿಂತನಾ ಗಂಗಾ, ಜ್ಞಾನಾಮೃತ, ಜ್ಞಾನಸುಧೆ, ಶ್ರೀಆದಿಚುಂಚನಗಿರಿ ನೃತ್ಯನಾಟಕ, ಸಂಕಷ್ಟಹರ ಅಷ್ಟಾಷ್ಟಬೈರವ ಸ್ತೋತ್ರಮ್ ಇತ್ಯಾದಿ ಈವರೆಗಿನ ಕೃತಿಗಳು.

ಸಂಸ್ಕೃತ ಭಾಷೆಯ ಪ್ರೌಢಿಮೆಯನ್ನು ಬರೆಹದ ಒಡಲಲ್ಲಿ ಬಿಗಿಯಾಗಿ ಸೃಜಿಸುವ ಶ್ರೀಗಳ ಬಹುತೇಕ ಗದ್ಯ, ಕಾವ್ಯಗಳೆಲ್ಲವೂ ಲೋಕದಲ್ಲಿ ನಡೆಯುವ ಘಟನೆಗಳನ್ನು ದುಡಿಸಿಕೊಂಡಿವೆ. ಕಾವ್ಯದಲ್ಲಿ ಲೀಲಾಜಾಲವಾಗಿ ರೂಪಕ, ಉಪಮೆ, ಪ್ರಾಸ ಹಾಗೂ ಗೇಯತೆಯನ್ನು ರೂಪಿಸುವ ಶ್ರೀಗಳ ಕಾವ್ಯಶಕ್ತಿಯು ಶಿಶುನಾಳ ಶರೀಫರ ತತ್ವಪದದಷ್ಟೆ ಭಾವನಾತ್ಮಕ ಸಂವೇದನೆಯನ್ನು ಅಧ್ಯಾತ್ಮಿಕ ಮೀಮಾಂಸೆಯಲ್ಲಿಟ್ಟು ಬಂಧಿಸಿ, ಬಗ್ಗಿ, ಹಿಗ್ಗಿಸಿ ವಿವೇಚಿಸಿದ್ದನ್ನು ಕಾಣಬಹುದು. ಬಹುತೇಕ ಕಾವ್ಯದ ಸಾಲುಗಳು ಮಾನವನ ಲೌಕಿಕ ಬದುಕಿನ ಆಯಾಮಗಳನ್ನು ಶರೀರವಾಗಿ ಬಳಸಿಕೊಂಡು ಆತ್ಮ-ಪರಮಾತ್ಮನ ತತ್ವವನ್ನು ತಾರ್ತಿಕವಾಗಿ ಕಟ್ಟುವುದೇ ಇಲ್ಲಿನ ಬರೆಹಗಳ ಜೀವಾಳವಾಗಿದೆ.

ಪೂಜ್ಯ ಜಗದ್ಗರು ಶ್ರೀ ಬಾಲಗಂಗಾಧರನಾಥ ಸ್ವಾಜೀಜಿಯವರ ಶಿಷ್ಯರಾಗಿ, ಅವರ ತತ್ವದಂತೆ ನಡೆಯುವ ಡಾ.ಧರ್ಮಪಾಲನಾಥ ಸ್ವಾಮೀಜಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ರೂಪಿಸಿದ್ದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜೀವಮಾನದ ಸಾಧನೆಯನ್ನೇ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಇದ್ದ ಕಾರಣ, ಶ್ರೀಮಠದ ಬೆಳವಣಿಗೆಗೆ ಸಾಕ್ಷಿ ನಿರೂಪಿತರಾಗಿರುವ ಶ್ರೀಗಳು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸದ ಮಹಾಪ್ರಬಂಧ “ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ” ಈ ಮಹಾಪ್ರಬಂಧವು ಆದಿಚುಂಚನಗಿರಿ ಮಠದ ಚಾರಿತ್ರಿಕ ನೆಲೆಯನ್ನು ಗುರುತಿಸುವ ಮೂಲಕ ನಾಥಪರಂಪರೆಯನ್ನು ಅವಲೋಕಿಸುತ್ತದೆ. ಮಹಾಸ್ವಾಮೀಜಿಯವರ ಕಾಲಮಾನದಲ್ಲಿನ ಶ್ರೀಮಠದ ಬೆಳವಣಿಗೆಯನ್ನು ಸಾಂಸ್ಕೃತಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದ ಬೆಳಣಿಗೆಯ ಅಭಿವ್ಯಕ್ತಿಯನ್ನು ಬಹುದೀರ್ಘವಾಗಿ ಚರ್ಚೆಗೆ ಒಳಗು ಮಾಡಿದ ಮಹತ್ವದ ಸಂಶೋಧನಾ ಗ್ರಂಥವಾಗಿದೆ.

ಕೊರೊನಾ ಕಾಲಮಾನದಲ್ಲಿ ಓದು, ಬರಹವನ್ನು ಸಂಶೋಧನೆಗೆ ಮೀಸಲಿರಿಸಿದ ಶ್ರೀಗಳು ಸಂಶೋಧನೆಯ ಬರಹವನ್ನು ತಪಸ್ಸಿನಂತೆ ಮುಗಿಸಿದ್ದು ವಿಶೇಷವಾಗಿದೆ. ಸಂಶೋಧನೆ ಎಂದರೆ ಸತ್ಯದ ಹುಡುಕಾಟ ಎಂಬ ತಾತ್ವಿಕತೆಗೆ ಒಗ್ಗಿಕೊಂಡ ಶ್ರೀಗಳು ಸಂಶೋಧನಾ ಬರೆಹದ ಸೈದ್ಧಾಂತಿಕವಾಗಿ ರೂಪಿಸುವುದಕ್ಕೆ ಶ್ರೀಮಠದ ಬಗೆಗೆ ರಚಿತಗೊಂಡಿರುವ ಕೃತಿಗಳ ಓದು, ಶಾಸನಗಳ ಹುಡುಕಾಟ, ಜಾನಪದ ಮತ್ತು ಪುರಾಣಗಳ ಅಭಿವ್ಯಕ್ತಿಯ ಅನುಸಂಧಾನ, ಶ್ರೀಮಠದ ರೇಖಾಚಿತ್ರಗಳ ಬಳಕೆ, ಅನೇಕ ಸಂಶೋಧನಾ ಗ್ರಂಥಗಳನ್ನು ಸಮೀಕ್ಷೆಯಾಗಿ ಬಳಸಿಕೊಂಡಿದ್ದನ್ನು ಕಾಣಬಹುದು. ಮಹಾಪ್ರಬಂಧದ ಬಗೆಗೆ ಶ್ರೀಗಳಿಗೆ ಇದ್ದ ಶ್ರದ್ದೆ ಅಪರೂಪವಾದದ್ದು. ವಿಷಯ ಸಂಗ್ರಹಣೆಯ ನೆಲೆಯಿಂದ ಶ್ರೀಗಳು ಬಹುತೇಕ ಕೃತಿಗಳನ್ನು ತಮ್ಮ ಓದಿಗೆ ಒಳಪಡಿಸಿಕೊಂಡರೂ ಸಹ ಆ ಸಂಶೋಧಕನು ತನ್ನ ಸಿದ್ದಾಂತವನ್ನು ಮಂಡಿಸುವುದಕ್ಕೆ ಬಳಸಿದ ಮೂಲ ಆಕಾರವನ್ನು ಗುರುತಿಸಿ, ಮೂಲ ಕೃತಿಯಲ್ಲಿ ನಿರೂಪಿತವಾದ ವಿಚಾರಧಾರೆಯನ್ನು ತರ್ಕಿಸುವ ಕಾರ್ಯವನ್ನು ಮಾಡಿದ್ದು ಸಂಶೋಧಕನೊಬ್ಬನ ನಿಜವಾದ ಆಸಕ್ತಿಯಾಗಿದೆ. ಈ ಮಹಾಪ್ರಬಂಧವು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕಾಲಮಾನದ ಚಾತ್ರಿಕ ಪ್ರಜ್ಞೆಯನ್ನು ಜಾಗತಿಕ ಪ್ರಜ್ಞೆಯಾಗಿ ಕಟ್ಟಿದ ಮಹತ್ವದ ಸಂಶೋಧನಾ ಪ್ರಬಂಧವಾಗಿದೆ.

ಅಧ್ಯಾತ್ಮಿಕ ವಿಚಾರಶೀಲತೆಯನ್ನು ನೆಲೆದ ಕಸುವಾಗಿ ಹೊಂದಿರುವ ದ.ಕನ್ನಡ ಪ್ರದೇಶಕ್ಕೆ ಚುಂಚನಗಿರಿ ಮಠದ ಸಂಪರ್ಕವು ಚಲನಶೀಲತೆಯನ್ನು ಪಡೆದುಕೊಂಡದ್ದು ಜಗದ್ಗರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕಾಲಮಾನದಲ್ಲಿ, ಮಂಗಳೂರು, ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ಭಾಗಕ್ಕೆ ಮಹಾಸ್ವಾಮೀಜಿಯವರ ಧಾರ್ಮಿಕ ಯಾತ್ರೆಯು ದ.ಕನ್ನಡ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟುವಂತೆ ಮಾಡಿತು. 1999ರ ಕಾಲಮಾನದಲ್ಲಿ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ತುಮಕೂರು ಜಿಲ್ಲೆಯ ದಸರಿಘಟ್ಟದಲ್ಲಿ ನಿರ್ವಹಿಸಿದ ಬಹುತೇಕ ಸಮಜಮುಖಿ ಕಾರ್ಯಗಳು ಅವರನ್ನು ದ.ಕನ್ನಡ ಜಿಲ್ಲೆಯ ಆದಿಚುಂಚನಗಿರಿ ಶಾಖಮಠದ ಕಾರ್ಯದರ್ಶಿಯಾಗಿ ನೇಮಕ ಮಾಡುವಂತೆ ಮಾಡಿತು. ಶ್ರೀ ಗುರುವಿನ ಮೇಲಿನ ಭಕ್ತಿ ಕಾರ್ಯ ಶ್ರದ್ಧೆ, ಅಧ್ಯಯನದ ಬಲವಾದ ತುಡಿತಗಳು ಮಂಗಳೂರಿನ ಭಾಗದಲ್ಲಿ ಶಿಕ್ಷಣ ಕ್ಷೇತ್ರವನ್ನು ರೂಪಿಸುವಂತೆ ಮಾಡಿತು. ಬಹುತೇಕ ಸವಾಲಿನ ನಡುವೆಯೇ ಸಿಬಿಎಸ್‌ಇ ಶಾಲೆಯನ್ನು, ಪದವಿಪೂರ್ವ ಮತ್ತು ಪದವಿ ಕಾಲೇಜನ್ನು, ಬಿಜಿಎಸ್ ಪ್ರೌಢಶಾಲೆಯನ್ನು ಹಾಗೂ ಕನ್ನಡ ಮಧ್ಯಮ ಸರ್ವೋದಯ ಪ್ರೌಢಶಾಲೆಯನ್ನು ಆರಂಭಿಸಿದರು. ಶ್ರೀಗಳ ವಿಶೇಷವಾದ ಆಸಕ್ತಿ ಮತ್ತು ಮಕ್ಕಳ ಮೇಲಿನ ಅದಮ್ಯ ಪ್ರೀತಿಯೇ ಇಂದು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುವಂತೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು