ಇತ್ತೀಚಿನ ಸುದ್ದಿ
ಸಾಹಿತ್ಯ ಅನುವಾದ ಸೇತುವೆ ಕಟ್ಟುವ ಕೆಲಸದಂತೆ: ಚಿಂತಕ ರಹಮತ್ ತರೀಕೆರೆ ಪ್ರತಿಪಾದನೆ
30/12/2024, 16:44
ಗಣೇಶ್ ಇನಾಂದಾರ ಹೊಸಪೇಟೆ
info.reporterkarnataka@gmail.com
ವಿದ್ವೇಷಗಳಿರುವ ಸಮಾಜದಲ್ಲಿ ಮಾನವೀಯ ಸಾಹಿತ್ಯ ಅನುವಾದ ಮಾಡುವುದು ಸೇತುವೆ ಕಟ್ಟುವ ಕೆಲಸದಂತಿದೆ ಎಂದು ಚಿಂತಕ ರಹಮತ್ ತರೀಕೆರೆ ಪ್ರತಿಪಾದಿಸಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾಹಿತಿ, ಲೇಖಕಿ ನೂರ್ ಜಹಾನ್ ಅವರು ಅನುವಾದಿಸಿದ “ಗಾಲಿಬ್‌ರವರ ಗಜಲ್” ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಯ ಬಿಡುಗಡೆ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕನ್ನಡದಲ್ಲಿ ಅನುವಾದಕರೆಂದರೆ ಸೇತುವೆ ಕಟ್ಟುವ ಕೆಲಸ ಮಾಡುವವರು. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ಅಲ್ಲಮ ವಿಸ್ಮಯದಿಂದ ಹೇಳುತ್ತಾನೆ. ಈ ವಿಸ್ಮಯದ ಮಾತು ಸಾಹಿತ್ಯ ಲೋಕದಲ್ಲಿ ಲೇಖಕರು ಪ್ರೇರಣೆ ಪ್ರಭಾವ ಪಡೆಯುವುದಕ್ಕೂ ಅನ್ವಯವಾಗುತ್ತದೆ. ಅತ್ಯಂತ ಗ್ರಾಮೀಣ ಸ್ಥಳೀಯ ಕವಿ ಎನ್ನಲಾದ ಬೇಂದ್ರೆಯವರು ಅರಬ್ಬಿಯಲ್ಲಿ ಬರೆಯುತ್ತಿದ್ದ ಲೆಬನಾನಿನ ಲೇಖಕ ಖಲೀಲ್ ಗಿಬ್ರಾನ್ ಮತ್ತು ಇಂಗ್ಲೆಂಡಿನ ರಸೆಲ್ ಅವರಿಂದ ಪ್ರಭಾವಿತನಾದೆನೆಂದು ಬರೆಯುತ್ತಾರೆ. ಬೆಳಗು ಜಾವ ಕವಿತೆಯಲ್ಲಿ-ಉಮರಖಯಾಮನ ಚೌಪದಿಯನ್ನು ಬೇಂದ್ರೆ ಮರುಸೃಷ್ಟಿಸುತ್ತಾರೆ” ಎಂದು ಹೇಳಿದರು.
ಕುವೆಂಪು ಅವರು ರಾಮಾಯಣ ದರ್ಶನಂ ಬರೆಯುವಾಗ ಮಿಲ್ಟನ್ ಡಾಂಟೆ, ಫಿರ್ದೂಸಿ ಅವರನ್ನು ನೆನೆಯುತ್ತಾರೆ. ಮಾರ್ಕ್ವೆಜ್‌ನ ಕಾದಂಬರಿಯ ಒಂದು ಸಾಲಿನಿಂದ ಪ್ರೇರಿತನಾಗಿ ನಾನು ಕುಸುಮಬಾಲೆ ಬರೆದೆನೆಂದು ದೇವನೂರರು ಹೇಳುತ್ತಾರೆ. ಈ ಕಾಲದಲ್ಲಿ ದೇಶದ ಸಂಸ್ಕೃತಿ, ಧರ್ಮ, ಭಾಷೆಗಳ ಗಡಿಮೀರಿದ ಈ ಸಂಬಂಧವು ಸಾಹಿತ್ಯಲೋಕದಲ್ಲಿ ಸಹಜವಾಗಿದೆ. ನಮ್ಮ ಪಕ್ಕದ ಗಂಗಾವತಿಯಲ್ಲಿ ರಾಘವೇಂದ್ರರಾವ್ ಜಜ್ಬ್ ಎಂಬ ಕವಿಯಿದ್ದರು. ಅವರು ಉರ್ದು ಮತ್ತು ಫಾರಸಿ ಪಂಡಿತರಾಗಿದ್ದರು. ಫಾರಸಿ ಕಾವ್ಯದ ಬಗ್ಗೆ ಅವರು ಬರೆದ ಪುಸ್ತಕ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ. ನಾನು ಇರಾನಿಗೆ ಹೋದಾಗ, ಅಲ್ಲಿ ಚಂದ್ರಭಾನ್ ಬ್ರಾಹ್ಮನ್ ಸ್ಕ್ವೇರ್ ಎಂಬ ಜಾಗವಿತ್ತು. ವಿಚಾರಿಸಿ ನೋಡಿದರೆ, ಮೊಘಲರ ಕಾಲದಲ್ಲಿ ಫಾರಸಿಯಲ್ಲಿ ಕಾವ್ಯ ಬರೆದ ದೆಹಲಿಯ ಕವಿ ಈತ. ಕವಿ ಇಕ್ಬಾಲರು ಏಕಕಾಲಕ್ಕೆ ಟರ್ಕಿಯ ಜಲಾಲುದ್ದೀನ್ ರೂಮಿಯಿಂದಲೂ ಜರ್ಮನಿಯ ನೀಶೆಯಿಂದಲೂ ಪ್ರಭಾವಿತರಾಗಿದ್ದರು. ಸಾಹಿತ್ಯದವರಿಗೆ, ಸಂಗೀತದವರಿಗೆ ಗಡಿಗಳೇ ಇಲ್ಲ” ಎಂದು ಹೇಳಿದರು.
ರಿಯಾಜ್ ಅಹ್ಮದ್ ಗೋಡೆ ಪುಸ್ತಕ ಪರಿಚಯ ಮಾಡಿದರು, ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್ ರಿಷ್ಕಿ ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.