ಇತ್ತೀಚಿನ ಸುದ್ದಿ
ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ; ಬಂಧಿತನಾದ ಅನಿಲ್‍ಗೂ, ನನಗೂ ಯಾವುದೇ ಸಂಬಂಧವಿಲ್ಲ: ಮಾಜಿ ಸಚಿವ ಬೈರತಿ ಬಸವರಾಜ್
21/07/2025, 20:25

ಬೆಂಗಳೂರು(reporterkarnataka.com): ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಅನಿಲ್‍ಗೂ, ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಾಜಿ ಸಚಿವರ ಹಾಗೂ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್ ಹೇಳಿದ್ದಾರೆ.
ಪೋಲಿಸರಿಂದ ಬಂಧನಕ್ಕೊಳಗಾಗಿರುವ ಅನಿಲ್, ನನ್ನ ಸಹೋದರ ಮಗನೆಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಮಾತು. ಆತ ಯಾರೆಂಬುದೇ ನಮಗೆ ತಿಳಿದಿಲ್ಲ. ಈ ಪ್ರಕರಣದಲ್ಲಿ ನಮ್ಮ ಸಹೋದರನ ಮಗ ಶಾಮೀಲಾಗಿದ್ದಾರೆ ಎಂದು ಅನಗತ್ಯವಾಗಿ ರಾಜಕೀಯ ದುರುದ್ದೇಶದಿಂದ ಕೆಲವರು ನನ್ನ ಚಾರಿತ್ರ್ಯವಧೆ ಮಾಡಲು ಷಡ್ಯಂತ್ರ ನಡೆಸಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ರಾಜಕೀಯ ಪ್ರೇರಿತ ಈ ಪ್ರಕರಣವನ್ನು ಹೇಗೆ ಎದುರಿಸಬೇಕೆಂಬುದು ನನಗೆ ಗೊತ್ತಿದೆ. ಇಂತಹ ಷಡ್ಯಂತ್ರಗಳನ್ನು ಎದುರಿಸಿಯೇ ನಾನು ಮೇಲಕ್ಕೆ ಬಂದಿದ್ದೇನೆ. ಇದಕ್ಕೆಲ್ಲಾ ಹೆದರುವ ಜಾಯಮಾನದವನಲ್ಲ ಎಂದರು.
ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೂಕ್ತ ಕಾಲದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ.
ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ದೇಶದ ಕಾನೂನಿಗೆ ತಲೆಬಾಗುತ್ತೇನೆ. ಪೋಲೀಸರ ವಿಚಾರಣೆಗೆ ಹಿಂದೆಯೂ ಸಹಕಾರ ಕೊಟ್ಟಿದ್ದೆ?ಮುಂದೆಯೂ ಕೊಡುತ್ತೇನೆ. ಹೆದರಿ ಕೂರುವ ಜಾಯಮಾನ ನನ್ನದಲ್ಲ. ಏನೇ ಬಂದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಬೈರತಿ ಬಸವರಾಜ್ ಹೇಳಿದ್ದಾರೆ.