ಇತ್ತೀಚಿನ ಸುದ್ದಿ
ರೇಶನ್ ಕಾರ್ಡ್ ವಿಚಾರದಲ್ಲಿ ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ
23/11/2024, 17:02
ಮಂಗಳೂರು(reporterkarnataka.com): ಯಾವುದೇ ಅಭಿವೃದ್ಧಿ ಕಾರ್ಯದ ಪರ ನಿಲ್ಲದ ರಾಜ್ಯದ ಪ್ರತಿಪಕ್ಷವಾದ ಬಿಜೆಪಿಯು ರೇಶನ್ ಕಾರ್ಡ್ ವಿಚಾರದಲ್ಲಿ ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆಪಾದಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ 5.80 ಕೋಟಿ ರೇಶನ್ ಕಾರ್ಡ್ ಗಳನ್ನು ರದ್ದುಮಾಡಿದೆ.
ಇದರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಬಾಯಿ ಬರುವುದಿಲ್ಲ. ಕೇಂದ್ರ ಸರಕಾರದ ನಿರ್ದೇಶನ ಪಾಲಿಸುವುದು ರಾಜ್ಯ ಸರಕಾರಗಳ ಧರ್ಮವೂ ಆಗಿದೆ. ಆದರೆ ಬಿಜೆಪಿಗರು ರಾಜ್ಯ ಸರಕಾರ ರೇಶನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಪಿಎಲ್ ಕಾರ್ಡ್ ನ ಅರ್ಹತೆ ಇಲ್ಲದವರನ್ನು ಎಪಿಎಲ್ ಕಾರ್ಡ್ ಗೆ ಸೇರಿಸುವುದು ಸಹಜ ಪ್ರಕ್ರಿಯೆಯಾಗಿದೆ. ಈ ಸಂದರ್ಭದಲ್ಲಿ ಕೆಲವೊಂದನ್ನು ಅಮಾನತಿನಲ್ಲಿಟ್ಟಿರುವ ಸಾಧ್ಯತೆಗಳೂ ಇವೆ. ನಿಜವಾದ ಫಲಾನುಭವಿಗಳಿಗೆ ಇದರಿಂದ ತೊಂದರೆಯಾಗಿದ್ದಲ್ಲಿ ಸರಕಾರ ಕೂಡಲೇ ಅದನ್ನು ಸರಿಪಡಿಸಲಿದೆ ಎಂದು ಅವರು ನುಡಿದರು.
ವಕ್ಫ್ ನೋಟಿಸ್ ಜಾರಿ ಮಾಡಿರುವುದು ಇದೇ ಮೊದಲೇನಲ್ಲ. 2019ರಿಂದ ಬಿಜೆಪಿ ಸರಕಾರ ಕೂಡ ನೋಟಿಸ್ ಜಾರಿ ಮಾಡಿದೆ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕೂಡ 226 ನೋಟಿಸ್ ಗಳನ್ನು ಜಾರಿ ಮಾಡಿದೆ. ರೈತರಿಗೆ, ದೇವಾಲಯ, ಮಠ- ಮಂದಿರಕ್ಕೆ ಸೇರಿದ ಒಂದಿಚ್ಚು ಜಾಗವನ್ನೂ ಯಾವುದೇ ದಾಖಲೆಗಳಿಲ್ಲದೆ ವಕ್ಫ್ ಗೆ ಕೊಡುವ ಪ್ರಶ್ನೆಯೇ ಇಲ್ಲ ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.