ಇತ್ತೀಚಿನ ಸುದ್ದಿ
ರಂಗ ಮಂದಿರ, ಕನ್ನಡಿಗರಿಗೆ ಉದ್ಯೋಗ: ದ.ಕ. ಜಿಲ್ಲೆ 67ನೇ ರಾಜ್ಯೋತ್ಸವದಲ್ಲಿ ಸಚಿವ ಸುನಿಲ್ ಕುಮಾರ್ ಭರವಸೆ
01/11/2022, 18:48

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
ಸಚಿವರ ಸಂದೇಶ: ಸಾವಿರಾರು ವರ್ಷಗಳ ಸುಧೀರ್ಘ ಪರಂಪರೆಯಲ್ಲಿ ಕನ್ನಡ ಭಾಷೆ ತನ್ನ ಸ್ವರೂಪವನ್ನು ಹಾಗೂ ಸಮಾಜವನ್ನು ಸಶಕ್ತವಾಗಿ ಬೆಳೆಸಿದೆ. ಕನ್ನಡ ಭಾಷೆ ನಮ್ಮನ್ನು ನಾಗರಿಕರನ್ನಾಗಿಸಿದೆ, ಸುಸಂಸ್ಕøತರನ್ನಾಗಿಸಿದೆ, ವಿವೇಕಿಗಳನ್ನಾಗಿಸಿದೆ. ಕನ್ನಡಿಗರು ಅತ್ಯಂತ ಸ್ನೇಹಶೀಲರಾದವರು ಹಾಗೂ ಮಾನವೀಯತೆ ಉಳ್ಳವರು, ಜ್ಞಾನಿಗಳು. ಭಾರತದ ಸುಧೀರ್ಘ ಇತಿಹಾಸದಲ್ಲಿ ಕನ್ನಡಿಗರು ಸಶಕ್ತವಾದ ಆಡಳಿತವನ್ನು ನೀಡಿದವರು. ಶಿಸ್ತುಬದ್ದವಾದ ಯೋಜನೆ, ಯೋಚನೆ, ಸೌಲಭ್ಯಗಳನ್ನು ತಮ್ಮ ಆಡಳಿತದಿಂದ ಒದಗಿಸಿದ ಪ್ರಭುತ್ವ ಕನ್ನಡಿಗರದಾಗಿತ್ತು. ವೈಜ್ಞಾನಿಕ ಮನೋಧರ್ಮ, ಸೂಕ್ಷ್ಮ ಸಂವೇದನೆ ಹೊಂದಿದ ನಮ್ಮ ಕವಿಗಳು ಹೊಸ ಬಗೆಯ ಅರಿವು, ಚಿಂತನೆಗಳನ್ನು ಕನ್ನಡ ಕಾವ್ಯಗಳಲ್ಲಿ ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ಅಖಂಡ ಕರ್ನಾಟಕವನ್ನು ಕಟ್ಟಿದ ಇತಿಹಾಸವನ್ನು ಪ್ರತಿಯೊಬ್ಬರು ಅರಿಯಬೇಕಿದೆ.
ದಕ್ಷಿಣ ಭಾರತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಗರ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣ ಚಳವಳಿ ಮೂಲಕ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು.
ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 1973 ನವೆಂಬರ್ 1 ರಂದು ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣ ಹೊಂದಲಾಯಿತು. ಕರ್ನಾಟಕ ಏಕೀಕರಣಕ್ಕೆ ಮನ್ನಣೆ ನೀಡಿದ ಆಲೂರು ವೆಂಕಟರಾಯರವರು, ಕೆ. ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಬಿ.ಎಂ ಶ್ರೀ ಮುಂತಾದ ಅನೇಕ ಮಹಾನೀಯರನ್ನು ಸ್ಮರಿಸುವ ಅಗತ್ಯವಿದೆ.
1799ರಲ್ಲಿ ಮೈಸೂರು ಪ್ರದೇಶವನ್ನು, 1818ರಲ್ಲಿ ಉತ್ತರ ಕರ್ನಾಟಕವನ್ನು, 1834 ರಲ್ಲಿ ಕೊಡಗು ನಾಡನ್ನು ಗೆದ್ದ ಬ್ರಿಟಿಷರು ತಮ್ಮ ಒಟ್ಟಾರೆ ಆಡಳಿತದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು 20 ಆಡಳಿತದ ಪ್ರದೇಶದಲ್ಲಿ ಹರಿದು ಹಂಚಿಬಿಟ್ಟರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದೇ ಆಳ್ವಿಕೆಗೆ ಒಳಪಡಬೇಕೆಂಬ ಒತ್ತಾಯ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಸಾಗಿತ್ತು.
ಕನ್ನಡದ ಪುನರುತ್ಥಾನ ಕರ್ನಾಟಕದ ಜಾಗೃತಿಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಪಾರ ಕೆಲಸ ಕಾರ್ಯಗಳು, ಹೋರಾಟಗಳು ನಿರಂತರವಾಗಿ ನಡೆದವು, ಕನ್ನಡದ ಏಕೀಕರಣಕ್ಕಾಗಿ ಅವಿರತ ದುಡಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಜೊತೆ ಜೊತೆಗೆ ಎಸ್. ನಿಜಲಿಂಗಪ್ಪ, ಹಳಕಟ್ಟಿ, ಬಸವ ನಾಳ, ಸಿದ್ದಪ್ಪ ಕಂಬಳಿ, ಚಿಕ್ಕೋಡಿ ತಮ್ಮಣ್ಣಪ್ಪ, ದಿವಾಕರ, ರಾಮಕೃಷ್ಣ ಕಾರಂತ, ಶಿವರಾಮ ಕಾರಂತ, ಜಿನರಾಜ ಹೆಗಡೆ, ತಿ.ತಾ ಶರ್ಮಾ ಮೊದಲಾದ ಮಹನೀಯರ ಏಕೀಕರಣದ ಹೋರಾಟ ಅನೂಹ್ಯ ತ್ಯಾಗದಿಂದ ಕೂಡಿತ್ತು. ಈ ರೀತಿಯ ಸಾಂಘಿಕ ಹೋರಾಟದ ಪ್ರಯತ್ನಗಳಿಂದ ಸ್ವಾತಂತ್ರ್ಯ ಪೂರ್ವದಲ್ಲಿ 20 ಆಡಳಿತ ವಿಭಾಗದಲ್ಲಿ ಹಂಚಿಹೋಗಿದ್ದ ಕರ್ನಾಟಕ ಸ್ವಾತಂತ್ರ್ಯ ನಂತರ ಮದ್ರಾಸ್, ಮುಂಬೈ, ಕೊಡಗು, ಹೈದರಾಬಾದ್ ಮತ್ತು ಮೈಸೂರು ಹೀಗೆ ಐದು ಆಡಳಿತ ವಿಭಾಗಗಳಿಗೆ ಸೇರಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡಿನೊಂದಿಗೆ ಮದ್ರಾಸ್ ಸರ್ಕಾರದ ಆಡಳಿತಕ್ಕೆ ಸೇರಿ ಹೋಯಿತು. ಮತ್ತೆ ಕನ್ನಡಿಗರಿಗೆ ದೊಡ್ಡ ನಿರಾಸೆಯಾಯಿತು. ಆಡಳಿತದ ಈ ಎಲ್ಲ ಗೋಜಲುಗಳಿಂದ ಬಿಡಿಸಿಕೊಂಡು ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳು ಒಂದೇ ಆಡಳಿತಕ್ಕೆ ಸೇರಬೇಕೆನ್ನುವ ಅಖಂಡ ಕರ್ನಾಟಕದ ಹೋರಾಟ ಮತ್ತೆ ಅತಿ ದೀರ್ಘವಾಗಿ ಆರಂಭವಾಯಿತು. ಕರ್ನಾಟಕ ಏಕೀಕರಣದ ಚಳುವಳಿ ದೊಡ್ಡಮಟ್ಟದಲ್ಲಿ ನಡೆದ ನಂತರ 1956 ರಲ್ಲಿ ಮೈಸೂರು ರಾಜ್ಯ ಉದಯವಾಯಿತು. ಆದರೆ ಈ ಸಂತೋಷ ಸಂಭ್ರಮದ ನಡುವಣ ಅಪಾರ ಯಾತನೆ ಎಂದರೆ ಕನ್ನಡದ ಮುಖ್ಯ ನೆಲ, ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಗಳಿಗೆ ಜನ್ಮ ನೀಡಿದ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿಹೋದದ್ದು. ಆನಂತರ 1973ರಲ್ಲಿ ಕರ್ನಾಟಕವೆಂಬ ಹೆಸರು ಸ್ಥಿರವಾಯಿತು. ನಮ್ಮ ಕನ್ನಡ ರಾಜ್ಯೋತ್ಸವ ಹೆಮ್ಮೆಯ, ಅಭಿಮಾನದ ಆಚರಣೆಯಾಯಿತು.
ದಕ್ಷಿಣ ಕನ್ನಡ ಎಂದರೆ ಬುದ್ದಿವಂತರ ನಾಡು ಎನ್ನುವ ಮಾತು ಎಲ್ಲೆಲ್ಲೂ ಪ್ರಸಿದ್ಧ. ಕನ್ನಡ ಸಾಹಿತ್ಯದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕವಿ ಸಾಹಿತಿಗಳ ಕೊಡುಗೆ ಅಪೂರ್ವವಾಗಿದೆ. 16ನೇ ಶತಮಾನದಲ್ಲಿ ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರಾದ ಮಹಾನ್ ಕವಿ ರತ್ನಾಕರ ವರ್ಣಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯವರು ಎಂಬುವುದೇ ಅತ್ಯಂತ ಹೆಮ್ಮೆಯ ವಿಚಾರ. ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯರಾದ ರತ್ನಾಕರ ವರ್ಣಿ ಶಾಂತಿಯ ಹರಿಕಾರನಂತೆ ಶಾಂತಿ ಮಂತ್ರವನ್ನು ಸಾಹಿತ್ಯದ ಮೂಲಕ ನೀಡಿರುವುದನ್ನು ಗಮನಿಸಬೇಕಾಗಿದೆ ರತ್ನಾಕರ ವರ್ಣಿಯು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮತ್ತು ಕನ್ನಡದ ಸೇವೆ ನಿಜಕ್ಕೂ ವರ್ಣಿಸಲು ಅಸದಳ.
ಕನ್ನಡದ ಮುಂಗೋಳಿ ಎಂದೇ ಹೆಸರಾದ ಮುದ್ದಣ, ಕನ್ನಡದ ಮೊದಲ ಸಣ್ಣಕಥೆಗಳ ಜನಕರು, ಕಾದಂಬರಿ, ಹರಟೆ, ಸಂಶೋಧನೆ ಹಿಗೆ ಹಲವು ಮೊದಲುಗಳ ಮೂಲಕ ಕನ್ನಡಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಪಂಜೆ ಮಂಗೇಶರಾಯರು, ‘ಕನ್ನಡವನುಳಿದೆನಗೆ ಅನ್ಯಜೀವನವಿಲ್ಲ, ಕನ್ನಡವೇ ಎನ್ನುಸಿರು ಪೆತ್ತೆನ್ನ ತಾಯಿ’ ಎಂದು ಹಂಬಲಿಸಿದ ಬೆನಗಲ್ ರಾಮರಾಯರು. ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ, ಎಲ್ಲರೂ ಎದ್ದೆದ್ದು ಓಡಿ ಬನ್ನಿ, ಕನ್ನಡದ ಗಡಿ ಕಾಯೆ, ಗುಡಿ ಕಾಯೆ, ನುಡಿ ಕಾಯೆ, ಕಾಯಲಾರನೆ ಸಾಯೆ ಓ ಬನ್ನಿ ಬನ್ನಿ’ ಎಂದು ಕಾತರಿಸಿದ ಕಯ್ಯಾರ ಕಿಞ್ಞಣ್ಣ ರೈ, ತಮ್ಮ ಸಂಶೋಧನಾ ವಿದ್ವತ್ತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಪಡೆದ ಅಮೃತ ಸೋಮೇಶ್ವರ, ಕಥೆಕಾದಂಬರಿ ಲೋಕದಲ್ಲಿ ವಿಶೇಷ ಸಾಧನೆ ಮಾಡಿದ ನಿರಂಜನ, ಹಾಸ್ಯಸಾಹಿತ್ಯಕ್ಕೇ ಹೊಸ ಭಾಷ್ಯ ಬರೆದ ಭುವನೇಶ್ವರಿ ಹೆಗಡೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ಕೊಡುಗೆಯಿಂದ ನಮ್ಮ ಜಿಲ್ಲೆ ಸಾಹಿತ್ಯ ಸಂಸ್ಕøತಿಯ ಶ್ರೀಮಂತ ಜಿಲ್ಲೆಯಾಗಿದೆ ಎಂದು ಹೇಳಿಕೊಳ್ಳಲು ಅಪಾರ ಅಭಿಮಾನ ಹೆಮ್ಮೆ ಎನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, , ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ್ ಅಂಚನ್, ಉಪ ಮೇಯರ್ ಪೂರ್ಣಿಮ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರಭಾರ ಜಿಲ್ಲಾಧಿಕಾರಿ ಡಾ. ಕುಮಾರ್,ಅಪಾರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ,
ಪೊಲೀಸ್ ಕಮಿಷನರ್ ಶಶಿ ಕುಮಾರ್, ಉಪ ಆಯುಕ್ತರು ಡಿಸಿಪಿ ದಿನೇಶ್ ಕುಮಾರ್, ಸಂಚಾರ ಎಸಿಪಿ ಗೀತಾ ಕುಲಕರ್ಣಿ, ಮಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ ಮತ್ತಿತರರು ಉಪಸ್ಥಿತರಿದ್ದರು.
ಉತ್ತಮ ಪಥ ಸಂಚಾಲನಕ್ಕಾಗಿ ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾಯೋಜನೆ ಸ್ವಯಂ ಸೇವಕ ,ಸೇವಕಿಯ ತಂಡಕ್ಕೆ ಪ್ರಥಮ ಬಹುಮಾನ ನೀಡಲಾಯಿತು.
ಕಾರ್ಯಕ್ರಮ ಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡವು.