ಇತ್ತೀಚಿನ ಸುದ್ದಿ
ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿ ನಿಧಿಗೆ ತಲಾ 10 ಲಕ್ಷ ರೂ. ನೀಡಲು ಚಿಂತನೆ: ಕೆ.ವಿ.ಪ್ರಭಾಕರ್
26/11/2024, 16:15
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ದಿ ನಿಧಿಗೆ ತಲಾ 10 ಲಕ್ಷ ರೂ. ನೀಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ತುಮಕೂರಿನಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಘನತೆ ಹೆಚ್ಚಿಸಿದ ಪತ್ರಕರ್ತರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಬ್ಬಡ್ಡಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜಿಲ್ಲಾ ತಂಡಕ್ಕೆ ವೈಯಕ್ತಿಕವಾಗಿ ಇಪ್ಪತ್ತೈದು ಸಾವಿರ ರೂ ಬಹುಮಾನ ಘೋಷಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲೇ ಕೋಲಾರ ಜಿಲ್ಲಾ ಸಂಘವು ಮಾದರಿಯಾಗಿದೆ, ಪ್ರತಿಯೊಂದು ಚಟುವಟಿಕೆಗಳನ್ನು ಸಂಘವು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ. ಯಾವುದೇ ಕ್ರೀಡಾ ಕೂಟದಲ್ಲಿ ಭಾಗವಹಿಸಿದಾಗ ಇಡೀ ಜಿಲ್ಲೆಯ ಪತ್ರಕರ್ತರ ತಂಡವೇ ಭಾಗವಹಿಸಿದೆ ಎನ್ನುವ ದೃಢವಿಶ್ವಾಸದೊಂದಿಗೆ ಗೆಲುವು ಸಾಧಿಸಿಕೊಂಡು ಬಂದಿದ್ದೀರಿ ಎಂದು ಅಭಿನಂದಿಸಿದರು.
ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಎಲ್ಲೇ ನಡೆಯಲಿ ಕಪ್ ಮಾತ್ರ ಕೋಲಾರದ ಪತ್ರಕರ್ತರ ಸಂಘಕ್ಕೆ ಬರಬೇಕು ಎಂಬ ಬ್ರ್ಯಾಂಡ್ ಹೆಚ್ಚಬೇಕು, ಕೋಲಾರದವರು ಭಾಗವಹಿಸಿದ್ದಾರೆ ಎಂದರೆ ಅಲ್ಲಿ ಗೆಲುವು ನಮ್ಮದಾಗಿರಬೇಕು ಎಂಬ ಸ್ಫೂರ್ತಿ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಇಂದಿನ ಕಾಲಘಟ್ಟದಲ್ಲಿ ವರದಿಗಾರಿಕೆ ವಿಧಾನ ಬದಲಾಗಿದೆ, ತಾಂತ್ರಿಕತೆ, ನೈಪುಣ್ಯತೆ ಇಂದಿನ ಅಗತ್ಯವಾಗಿದೆ, ನೀವು ಸಾಧನೆ ಮಾಡಿದಾಗ ತಾನಾಗಿಯೇ ಗೌರವ, ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ರಾಜ್ಯಮಟ್ಟದ ಪತ್ರಿಕಾರಂಗದಲ್ಲಿ ಸದಾ ಕೋಲಾರದ ಧ್ವನಿ ಹೆಚ್ಚಿನದಾಗಿ ಕೇಳಿ ಬರುತ್ತಲೇ ಇದೆ, ಇದು ಕ್ರೀಡಾಕೂಟಗಳಲ್ಲೂ ಆಗಿದೆ, ಈ ಬೆಳೆವಣಿಗೆ ಆಶಾದಾಯಕವಾಗಿದ್ದು, ನಿಮ್ಮ ಸಾಧನೆ ಮುಂದುವರೆಸಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಬ್ರ್ಯಾಂಡ್ ಇದೆ. ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಇರುತ್ತದೆ, ಸೋತಾಗಲೂ ಬೆನ್ನು ತಟ್ಟುವ ಮೂಲಕ ಸಂಘವು ಹುರಿದುಂಬಿಸುತ್ತದೆ ಎಂದು ಹೇಳಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆರ್ಥಿಕವಾಗಿ ತನ್ನ ಕಾಲ ಮೇಲೆ ನಿಂತಿದೆ ಇದು ಸಂಘದ ಒಗ್ಗಟ್ಟಿನಿಂದ ಸಾಧ್ಯವಾಗಿದೆ. ಅತ್ಯಂತ ಯಶಸ್ವಿ ಮತ್ತು ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಸಂಘವನ್ನು ಕಟ್ಟಿ ಇದನ್ನು ಸಾಬೀತು ಮಾಡಿದ್ದೇವೆ.
ಕೆ.ವಿ.ಪ್ರಭಾಕರ್ ಅವರಿಗೆ ಪತ್ರಕರ್ತರ ಬಗ್ಗೆ ಕಾಳಜಿ ಇದೆ. ಯಾವುದೇ ಅಪವಾದ ಇಲ್ಲದೇ ನಡೆದುಕೊಂಡು ಬಂದಿದ್ದಾರೆ, ಈಗಾಗಲೇ 25 ಲಕ್ಷ ರೂ ಕೋಲಾರ ಪತ್ರಕರ್ತರ ಸಂಘಕ್ಕೆ ಕಲ್ಯಾಣ ನಿಧಿಗೆ ಕೊಡಿಸಿದ್ದಾರೆ. ಕೋಲಾರ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ, ಈ ನಿಟ್ಟಿನಲ್ಲಿ ಕೋಲಾರದ ಪತ್ರಕರ್ತರ ಬರಹ ಮತ್ತು ಕ್ರೀಯಾಶೀಲತೆಯಲ್ಲಿ ಗುಣಮಟ್ಟ ಅಗತ್ಯವಿದೆ, ಯಾವುದೇ ಉತ್ತಮ ಅವಕಾಶ ಬಂದರೆ ಬಳಸಿಕೊಳ್ಳಿ ಸದಸ್ಯರು ಸಂಘದ ಘನತೆ ಹೆಚ್ಚಿಸಿ ಎಂದು ಶುಭಹಾರೈಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರಕ್ಕೆ ಕ್ರೀಡೆಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ, ಅದು ಹಿಂದಿನಿಂದಲೂ ಬಂದಿದೆ, ಉತ್ತಮ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ, ಆತ್ಮಸ್ಥೈರ್ಯದಿಂದ ಗೆದ್ದು ಬರಬೇಕು ಎಂದರು.
ನಮ್ಮ ಜಿಲ್ಲೆಯಲ್ಲಿನ ಕ್ರೀಡಾಕೂಟಗಳೇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲಲು ಸಾಧ್ಯ ಮುಂದೆ ಪ್ರತಿ ವರ್ಷ ಕ್ರೀಡಾಕೂಟ ಮಾಡೋಣ ಎಂದು ತಿಳಿಸಿ, ಸಾಧನೆ ಮಾಡಿದ ಪತ್ರಕರ್ತ ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ,ಕೋಲಾರದವರು ಕ್ರೀಡಾಕೂಟದ ಹೆಸರಲ್ಲಿ ಮೈದಾನಕ್ಕೆ ಇಳಿದರೆ ಬರಿಗೈಯಲ್ಲಿ ಬರಲ್ಲ ಎಂಬುದು ಉದಾಹರಣೆ ಸಹಿತ ನಮ್ಮ ಕಣ್ಣ ಮುಂದಿದೆ, ಸತತವಾಗಿ ಒಗ್ಗಟ್ಟಿನಿಂದ ಆತ್ಮಸೈರ್ಯದಿಂದ ಅಲ್ಲಿಗೆ ಹೋಗಿ ಗೆದ್ದುಕೊಂಡ ಬಂದಿದ್ದೇವೆ ಪ್ರತಿಭೆಗೆ ಕೊರತೆಯಿಲ್ಲ ಪ್ರತಿ ಕ್ರೀಡಾ ಕೂಟದಲ್ಲಿ ಭಾಗವಹಿಸೋಣ ಸೋಲು ಗೆಲುವು ಸಹಜ ಎಂದು ನುಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮಾತನಾಡಿ, ಜಿಲ್ಲಾ ಕಾರ್ಯಾನಿರತ ಪತ್ರಕರ್ತ ಸಂಘದಿಂದ ಭಾಗವಹಿಸಿದ ರಾಜ್ಯದ ಯಾವುದೇ ಕ್ರೀಡಾ ಕೂಟದಲ್ಲಿ ನಾವು ಬರಿಗೈನಲ್ಲಿ ಬಂದ ಉದಾಹರಣೆ ಇಲ್ಲ, ರಾಜ್ಯ ಮಟ್ಟದ ಕ್ರೀಡಾ ಕೂಡದಲ್ಲೂ ಗೆದ್ದಿದ್ದೇವೆ, ಕೋಲಾರಕ್ಕೆ ಒಂದು ಬ್ರಾಂಡ್ ಇದೆ, ಗೆದ್ದು ಕೊಂಡು ಬರುತ್ತೇವೆ, ಎಲ್ಲೇ ಹೋದರೂ ಗುರುತು ನಮ್ಮದಿದೆ ಎಂದರು.
ಹಿರಿಯ ಪತ್ರಕರ್ತರಾದ ರಾಜೇಂದ್ರಸಿಂಹ,ಮಾಮಿ ಪ್ರಕಾಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ರವಿಕುಮಾರ್, ಮದನ್ ಕುಮಾರ್, ಕಿರಣ್ ಕುಮಾರ್, ನಾಗರಾಜ್ , ಮಂಜುನಾಥ್, ಸಿ.ಅಮರೇಶ್, ಗಂಗರಾಜು, ಗಂಗಾಧರ್ ಪುರುಷೋತ್ತಮ ಶ್ರೀಕಾಂತ್, ವಿನೋದ್, ಸತೀಶ್, ವಿಜಯಕುಮಾರ್, ಸಮೀರ್, ಮಾಮಿ ಪ್ರಕಾಶ್, ಗೋಪಿ, ಶ್ರೀನಿವಾಸ್ ಮತ್ತಿತರರಿದ್ದರು.