5:29 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ‘ಕದಂಬ ವೃಕ್ಷೋತ್ಸವ’ : ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟ

04/10/2021, 14:59

ಚಿಕ್ಕಬಳ್ಳಾಪುರ(reporterkarnataka.com): ಅಶ್ವತ್ಥ ವೃಕ್ಷ, ಕದಂಬ ಸೇರಿದಂತೆ ನಾಡಿನ ಸಾಂಸ್ಕೃತಿಕ ಪರಂಪರೆಯ ಪವಿತ್ರ ವೃಕ್ಷಗಳನ್ನು ರಕ್ಷಿಸುವ ಮತ್ತು ಹೆಚ್ಚಿಸುವ ಕಾರ್ಯವನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿದ್ದು, ಆ ಮೂಲಕ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಸೆಳೆಯಲಾಗುವುದು ಎಂದು ಮಂಡಳಿಯ ಅಧ್ಯಕ್ಷ, ನಿವೃತ್ತ ಐ ಎ ಎಸ್ ಅಧಿಕಾರಿ ಎಂ.ಮದನ್ ಗೋಪಾಲ್ ಹೇಳಿದರು.

ಅವರು ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ನಂದಿಬೆಟ್ಟದ ತಪ್ಪಲಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪವಿತ್ರ ವೃಕ್ಷಗಳ ಹಬ್ಬ ಕದಂಬ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ಕದಂಬ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಪರಂಪರೆ ಮತ್ತು ಇತಿಹಾಸದಲ್ಲಿ ಕದಂಬ, ಅಶ್ವತ್ಥ ವೃಕ್ಷ ಸೇರಿದಂತೆ ನೂರಾರು ಪವಿತ್ರ ವೃಕ್ಷಗಳಿವೆ. ಈ ಪವಿತ್ರ ವೃಕ್ಷಗಳ ಬಗ್ಗೆ ಜನರಲ್ಲಿ ಪೂಜನೀಯ ಭಾವನೆಯಿದ್ದು, ಜನರು ಅವುಗಳನ್ನು ಪೂಜಿಸಿ, ಗೌರವಿಸಿ ಆರಾಧಿಸುತ್ತಾರೆ. ಅಲ್ಲದೇ, ಈ ವೃಕ್ಷಗಳು ಔಷಧೀಯ ಗುಣಗಳನ್ನೂ ಹೊಂದಿದ್ದು, ಆಯುರ್ವೇದ ವೈದ್ಯದಲ್ಲಿ ಹೆಚ್ಚು ಮಹತ್ವವನ್ನು ಪಡೆದಿವೆ. ಇಂತಹ ವೃಕ್ಷಗಳ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೇಖವಿದೆ. ಈ ವೃಕ್ಷಗಳನ್ನು ಮುಂದಿನ ಪೀಳಿಗೆಗೂ ತಲುಪಿಸಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಂಡಳಿ ಪವಿತ್ರ ವೃಕ್ಷಗಳ ಹಬ್ಬ ಎಂಬ ವಿಶಿಷ್ಟ ಅಭಿಯಾನಕ್ಕೆ ಚಾಲನೆ ನೀಡಿದೆ. 

ಒಂದು ವರ್ಷಕ್ಕೆ ಒಂದು ಪವಿತ್ರ ಮರ ಎಂಬಂತೆ ಪ್ರತಿವರ್ಷವೂ ಒಂದೊಂದು ಪವಿತ್ರ ಮರವನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಂಡು ನೆಟ್ಟು ಪೋಷಿಸುವ ಮುಖಾಂತರ ಈ ನೆಲದ ಪವಿತ್ರ ಮರಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ ಪರಿಸರ ಪ್ರವಾಸೋದ್ಯಮದ ಅರಣ್ಯೀಕರಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ವರ್ಷ ಕದಂಬ ವೃಕ್ಷ ಆಯ್ಕೆಯಾಗಿದೆ. ಈ ಕದಂಬ ವೃಕ್ಷವು ಹಲವಾರು ಪುಣ್ಯಕ್ಷೇತ್ರಗಳಲ್ಲಿದ್ದು, ಊಹಿಸಲಾಗದಷ್ಟು ಮಹತ್ವದ ಔಷಧೀಯ ಗುಣಗಳನ್ನು ಹೊಂದಿದೆ. ಕದಂಬ ವೃಕ್ಷದ ಸಂಖ್ಯೆಯನ್ನು ಸಾವಿರ ಸಾವಿರವಾಗಿಸಲು ಮಂಡಳಿ ವಿಶೇಷ ಗಮನಹರಿಸಲಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದಿನ ಯುವಪೀಳಿಗೆ ಉದ್ಯೋಗಾಧಾರಿತ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ ಪರಿಸರ ಸಂರಕ್ಷಣೆಯತ್ತಲೂ ಒಲವು ಬೆಳೆಸಿಕೊಳ್ಳಬೇಕು. ಆಧುನಿಕ ಶೈಲಿಯ ಆಹಾರಕ್ಕೆ ಹೆಚ್ಚು ಆಕರ್ಷಿತರಾಗದೆ ಉತ್ತಮ ಆರೋಗ್ಯಕ್ಕೆ ಪೂರಕವಾದ ಪೌಷ್ಠಿಕಯುಕ್ತ ಆಹಾರವನ್ನು ಹೆಚ್ಚು ಸೇವಿಸುವತ್ತ ಗಮನಹರಿಸಬೇಕು. ಸಿರಿಧಾನ್ಯಗಳಲ್ಲಿ ಒಂದಾದ ರಾಗಿ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಪ್ರಮುಖ ಆಹಾರ ಧಾನ್ಯವಾಗಿದ್ದು, ರಾಗಿ ಗಂಜಿ, ರಾಗಿಮುದ್ದೆ ಸೇರಿದಂತೆ ರಾಗಿಯ ಇತರೆ ಉತ್ಪನ್ನಗಳನ್ನು ನಿತ್ಯ ಆಹಾರದಲ್ಲಿ ಬಳಕೆ ಮಾಡುವುದರಿಂದ ಕಾಯಿಲೆಗಳು ದೂರವಾಗಿ ಜೀವಿತಾವಧಿ ವೃದ್ಧಿಸುತ್ತದೆ. ಯುವಜನರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳದೇ ಸಿರಿಧಾನ್ಯಗಳ ಆಹಾರಕ್ಕೆ ಒತ್ತು ನೀಡಿ ಉತ್ತಮ ಆರೋಗ್ಯವನ್ನು ಪಡೆಯಲು ಮುಂದಾಗಬೇಕು. ಸ್ವತ: ತಾವೂ ಕೂಡಾ ರಾಗಿ ಗಂಜಿಯನ್ನು ದಿನನಿತ್ಯ ಸೇವಿಸಿ ಉತ್ತಮ ಆರೋಗ್ಯವನ್ನು ಹೊಂದಿರುವುದಾಗಿ ಸಂಸದರು ತಮ್ಮ ನವಿರಾದ ಹಾಸ್ಯದೊಂದಿಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸಿದರು. 

ಕದಂಬ ವೃಕ್ಷೋತ್ಸವದ ಅಂಗವಾಗಿ ಬೆಂಗಳೂರಿನ ವಿವಿಧ ಕಾಲೇಜುಗಳ ಎನ್ಎರಸ್ಎ ಸ್ ಮತ್ತು ಎನ್ಸಿತಸಿ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟಕ್ಕಾಗಿ ಶೀರ್ಷಿಕೆಯಡಿಯಲ್ಲಿ ನಂದಿಬೆಟ್ಟದ ತಪ್ಪಲಿನಲ್ಲಿ ಓಟ ಮತ್ತು ಸೈಕಲ್ ಜಾಥಾ ನಡೆಸುವ ಮೂಲಕ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಸ್ವಯಂ ಸೇವಕರು ನಂದಿಬೆಟ್ಟದ ತಪ್ಪಲಿನಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. 

ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ ವನ್ಯಜೀವಿ ಸಂರಕ್ಷಕರಾದ ಚಿಕ್ಕಬಳ್ಳಾಪುರ ನಗರದ ಪೃಥ್ವಿರಾಜ್, ಪಿಲ್ಲಾ ವೆಂಕಟೇಶ್ ಹಾಗೂ ಗೌರಿಬಿದನೂರು ವಿಭಾಗದ ಉಪವಲಯ ಅರಣ್ಯಾಧಿಕಾರಿ ಯಲ್ಲಪ್ಪ ಕೆರೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚಿಕ್ಕಬಳ್ಳಾಪುರ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ 67 ನೇ ವನ್ಯಜೀವಿ ಸಪ್ತಾಹ 2021 ರ ಲಾಂಛನವನ್ನು ಕಾರ್ಯಕ್ರಮದಲ್ಲಿ ಗಣ್ಯರು ಬಿಡುಗಡೆ ಮಾಡಿದರು. ಸಪ್ತಾಹದ ಅಂಗವಾಗಿ ಜಿಲ್ಲೆಯಾದ್ಯಂತ ಒಂದು ವಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ 7 ಅತ್ಯವಶ್ಯಕ ಮರಗಳು ಎಂಬ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸವೆನ್ ಟ್ರೀಸ್ ಫಾರ್ ಲೈಫ್ ಅಭಿಯಾನದ ಲಾಂಛನವನ್ನೂ ಅನಾವರಣ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಅರಣ್ಯ.ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಿಇಒ ವಿಜಯಕುಮಾರ್ ಸಾಲಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಸ್ಯತಜ್ಞ ಡಾ.ಸುಂದರರಾಜ್, ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್, ನಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು