ಇತ್ತೀಚಿನ ಸುದ್ದಿ
ರಾಜಕಾರಣ ಕಲುಷಿತಗೊಂಡು ದ್ವೇಷದ ರಾಜಕಾರಣ ಹೆಚ್ಚಿದೆ; ಶುದ್ಧೀಕರಣ ಅಗತ್ಯವಿದೆ: ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ
21/12/2024, 21:50
ಧಾರವಾಡ(reporterkarnataka.com): ಇಂದಿನ ರಾಜಕಾರಣ ಬಹಳ ಕಲುಷಿತಗೊಂಡು, ದ್ವೇಷದ ರಾಜಕಾರಣ ಹೆಚ್ಚಿದೆ. ಹಿಂದಿನ ಆದರ್ಶದ ರಾಜಕಾರಣಿಗಳು ಇಲ್ಲ. ರಾಜಕಾರಣ ಶುದ್ಧೀಕರಣಗೊಳ್ಳುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಭವನದಲ್ಲಿ ಶುಕ್ರವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರ ಶಂಕರ ಪಾಗೋಜಿ ವಿರಚಿತ ‘ಗಾಂಧಿ ಮಂದಿರ’ ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಎಲಿಯವರೆಗೂ ಹಣ ಪಡೆದು ಓಟ್ ಹಾಕುತ್ತಿರೋ, ಅಲ್ಲಿಯವರೆಗೂ ವ್ಯವಸ್ಥೆಯನ್ನು ಬದಲಾಣೆ ಮಾಡುವುದು ಅಸಾಧ್ಯ. ಈ ವ್ಯವಸ್ಥೆಯೊಂದಿಗೆ ಬದುಕುವ ಸಂದಿಗ್ಧೆ ಎದುರಾಗಿದೆ. ಹೀಗಾಗಿ ಹಣ ಪಡೆದು ಮತ ಹಾಕುವ ಕೆಟ್ಟ ಪ್ರವೃತ್ತಿ ಬಿಡಬೇಕು ಎಂದು ನೆರದ ಜನರಿಗೆ ಸಲಹೆ ನೀಡಿದರು.
ಜಗತ್ತಿನಲ್ಲಿ ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ತಮ್ಮ ಮೈಮೇಲೆ ಬಟ್ಟೆ ಹಾಕದೆ, ಇಡೀ ದೇಶಕ್ಕಾಗಿ ಜೀವನ ಮುಡುಪು ಇಟ್ಟವರು. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ದುರ್ಬಳಕೆಗೆ ವಿಷಾದಿಸಿದರಲ್ಲೇ, ಯುವಜನ ದೇಶ ಕಟ್ಟುವ ಕಾಯಕ ಮಾಡಲು ಹೇಳಿದರು.
ಬದಲಾದ ಕಾಲಘಟ್ಟದಲ್ಲಿ ಹಾಗೂ ಮೊಬೈಲ್ ಜಗತ್ತಿನಲ್ಲಿ ಪುಸ್ತಕ ಓದುವುದು ಹಾಗೂ ಪುಸಕ್ತ ಬರೆಯುವವರ ಸಂಖ್ಯೆಯೂ ಕಡಿಮೆ. ಕಲೆ, ಸಾಹಿತ್ಯ, ಸಂಗೀತ ಹೀಗೆ ಎಲ್ಲ ಕಲೆಗಳು ನಶಿಸುತ್ತಿವೆ. ಪತ್ರಕರ್ತ ಶಂಕರ ಪಾಗೋಜಿ ಒತ್ತಡದ ನಡುವೆಯೂ ಗಾಂಧಿ ಮಂದಿರ ಪುಸ್ತಕ ಬರೆದಿರುವುದು ಶ್ಲಾಘನೀಯ ಎಂದರು.
ಕೃತಿ ಪರಿಚಯಸಿದ ನಟರಾಜ ಮೂರಶಿಹಳ್ಳಿ, ಗಾಂಧಿ ಮಂದಿರ ಶಂಕರ ಪಾಗೋಜಿ ಅವರ ಬದುಕು -ಬರಹದ ಕುರಿತು 17 ಕಥೆಗಳು ಒಳಗೊಂಡಿದೆ. ಕೃತಿಯ ಬರಹದ ಭಾವ, ಸಂಸ್ಕೃತಿ, ಗ್ರಾಮೀಣರ ಜನಜೀವನ, ಅಂತರ್ ಜಾತಿ ಮತ್ತು ಪ್ರೇಮ ವಿವಾಹ ಚಿತ್ರಣ ಕೃತಿಯಲ್ಲಿ ಕಟ್ಟಿಕೊಟ್ಟ ಪ್ರಯತ್ನ ಅದ್ಭುತ ಎಂದರು.
ಸಾಹಿತಿಗಳನ್ನು ಪರಿಚಯಿಸುವ ಕೈಂಕರ್ಯ ಹೆಚ್ಚೆಚ್ಚು ನಡೆಬೇಕು. ಮುಖ್ಯವಾಗಿ ಯುವಜನ ಮೊಬೈಲ್ ಜಗತ್ತಿನಿಂದ ಹೊರಬಂದು, ಪುಸ್ತಕ ಓದುವ ಹವ್ಯಾದ ಬೆಳೆಸಿಕೊಂಡು ಜ್ಞಾನದ ಕ್ಷಿತಿಜ ಹೆಚ್ಚಿಸಿಕೊಳ್ಳಬೇಕು. ನಶಿಸುತ್ತಿರುವ ಸಂಸ್ಕೃತಿ, ಸಂಸ್ಕಾರ ಉಳಿಸುವಂತೆ ಕರೆ ನೀಡಿದರು.
ಬೆಂಗಳೂರಿನ ಸಿರಿವರ ಪ್ರಕಾಶನದ ಪ್ರಕಾಶಕ ರವೀಂದ್ರನಾಥ ಸಿರಿವರ, ಜಿಲ್ಲಾ ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು. ಕೃತಿಕಾರ ಶಂಕರ ಪಾಗೋಜಿ ಪ್ರಾಸ್ತಾವಿಕ ಸ್ವಾಗತಿಸಿ, ಮಾತನಾಡಿದರು. ಡಾ.ಬಸವರಾಜ ಹೊಂಗಲ್ ನಿರೂಪಿಸಿದರು.