ಇತ್ತೀಚಿನ ಸುದ್ದಿ
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ: ಮಾಜಿ ಸಚಿವ ಎಸ್. ಸುರೇಶ್ ಕುಮಾರ್
01/08/2025, 21:56

ಇಂತಹ ಅಸಂಬದ್ಧ ಪದವನ್ನು ಬಳಸುವ ಪ್ರಯತ್ನವು ತೀವ್ರ ಹತಾಶೆಯ ಮತ್ತು ಬೌದ್ಧಿಕ ದಿವಾಳಿತನದ ಸಂಕೇತವಾಗಿದೆ: ಸುರೇಶ್ ಕುಮಾರ್
ಬೆಂಗಳೂರು(reporterkarnataka.com): ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಹೊಸದಾದ ಅಸಂಬದ್ಧ ಪರಿಭಾಷೆಯನ್ನು ಸೇರಿಸುವ ಪ್ರಯತ್ನವನ್ನು ಮಾಜಿ ಸಚಿವ ಮತ್ತು ರಾಜಾಜಿನಗರದ ಶಾಸಕ ಎಸ್. ಸುರೇಶ್ ಕುಮಾರ್ ಶುಕ್ರವಾರ “ಹತಾಶೆ ಮತ್ತು ಬೌದ್ಧಿಕ ದಿವಾಳಿತನದ ಉತ್ತುಂಗ “ಎಂದು ಬಣ್ಣಿಸಿದ್ದಾರೆ.
ಪತ್ರಿಕೆಗೆ ಹೇಳಿಕೆಯನ್ನು ನೀಡುತ್ತಾ, ಸುರೇಶ್ ಕುಮಾರ್ ರವರು ರಾಹುಲ್ ಗಾಂಧಿ ಅವರು ಹತಾಶೆಯಿಂದ “ಮತ ಕಳ್ಳತನ” ಅಥವಾ “ಮತಗಳನ್ನು ಕಳವು ಮಾಡುವುದು” ಎಂಬ ಪದಗಳನ್ನು ಬಳಸಿಕೊಂಡು ರಾಜಕಾರಣದಲ್ಲಿ ಹೊಸದಾದ ನಿರೂಪಣೆಯೊಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
“ಕೇಂದ್ರ ಮತ್ತು ರಾಜ್ಯದಲ್ಲಿ, ರಾಹುಲ್ ಗಾಂಧಿಯವರಿಂದ ಹಿಡಿದು ಇಡೀ ಕಾಂಗ್ರೆಸ್ ನಾಯಕತ್ವವು ಒಂದು ಹೊಸ ನಮೂನೆಯ ಮನೋರೋಗ ದಿಂದ ಬಳಲುತ್ತಿರುವುದನ್ನು ಇತ್ತೀಚಿಗೆ ಅವರು ನೀಡುತ್ತಿರುವ ಅಸಂಬದ್ಧ ಮತ್ತು ಹಾಸಾಸ್ಪದ ಹೇಳಿಕೆಗಳು ಸಾಬೀತು ಮಾಡಿವೆ.
ಇವರು ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾದೇವಪುರ ಹಾಗೂ
ರಾಜಾಜಿನಗರದಲ್ಲಿ “ಮತಗಳನ್ನು ಕಳವು ಮಾಡಲಾಗಿದೆ” ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಕಳೆದ ನಾಲ್ಕು ಲೋಕಸಭಾ ಚುನಾವಣೆಗಳ ಅಂಕಿಅಂಶಗಳ ಸಹಾಯದಿಂದ ಚುನಾವಣಾ ಫಲಿತಾಂಶಗಳನ್ನು ವಿವರಿಸಿದ ಸುರೇಶ್ ಕುಮಾರ್, “2009 ರಿಂದ ಆರಂಭವಾದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ ಮುನ್ನಡೆ ಸಾಧಿಸಿದೆ. 2009 ರಲ್ಲಿ ಬಿ.ಜಿ.ಪಿ. ಯು 21,304, 2014 ರಲ್ಲಿ 48,602, 2019 ರಲ್ಲಿ 44,004 ಮತ್ತು 2024 ರಲ್ಲಿ 39,529 ಮತಗಳ ಮುನ್ನಡೆಯಿಂದ ಬಿ.ಜೆ.ಪಿ. ಅಭ್ಯರ್ಥಿಯು ಜಯಗಳಿಸಿರುವುದನ್ನು ಅಂಕಿ-ಸಂಖ್ಯೆ ಸಮೇತ ವಿವರಿಸಿದ್ದಾರೆ.
ಅಂತೆಯೇ, ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ಮತಗಳ ಸಂಖ್ಯೆಯಲ್ಲಿ ಅಲ್ಪ ಮಟ್ಟದಲ್ಲಿ ಹೆಚ್ಚಳವಾಗಿದ್ದು, 2009 ರಲ್ಲಿ ಒಟ್ಟು ಮತಗಳ ಸಂಖ್ಯೆ 1,80,000, 2014ರಲ್ಲಿ ಒಟ್ಟು ಮತಗಳ ಸಂಖ್ಯೆ 1,94,316 ಆಗಿತ್ತು. 2019 ರಲ್ಲಿ ಒಟ್ಟು ಮತಗಳ ಸಂಖ್ಯೆ 2,11,000, 2024 ರಲ್ಲಿ ಒಟ್ಟು ಮತಗಳ ಸಂಖ್ಯೆ 2,01,287 ಆಗಿರುತ್ತದೆ, ಎಂದು ಉದಾಹರಿಸುತ್ತಾ, ಕಾಂಗ್ರೆಸ್ ನಾಯಕರು ಆರೋಪಿಸಿರುವಂತೆ ಮತಗಳನ್ನು ಕಳುವು ಮಾಡುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ರವರು ತಮ್ಮ ಹಿಂದಿನ ಚುನಾವಣೆಗಳಲ್ಲಿನ ಕಾಂಗ್ರೆಸ್ ವೈಫಲ್ಯದ ಕುರಿತು ಆತ್ಮವಲೋಕನ ಮಾಡಿಕೊಳ್ಳದೆ ಮುಂಬರುವ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿನ ಸೋಲುವ ಭೀತಿಯಲ್ಲಿ ಚುನಾವಣೆಗೂ ಮೊದಲೇ ಕೇವಿಯಟ್ ಸಲ್ಲಿಸಿ, ಪರೋಕ್ಷವಾಗಿ ತಮ್ಮ ಸೋಲಿಗೆ ಒಂದು ನೆಪ ಹುಡುಕುತ್ತಿದ್ದಾರೆ.
ಬಿಹಾರದಲ್ಲಿ ಚುನಾವಣಾ ಆಯೋಗವು ವಿಶೇಷವಾಗಿ ಹಮ್ಮಿಕೊಳ್ಳಲಾದ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ, ನಕಲಿ ಮತ್ತು ಮೃತ ಮತದಾರರನ್ನು ಗುರುತಿಸಿ ಅವರನ್ನು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಂತೆ ಮಾಡಿರುವುದು ಕಾಂಗ್ರೆಸ್ ಗೆ ಗಾಬರಿ ಹುಟ್ಟಿಸಿದೆ.
ಸ್ವಚ್ಚ ಮತ್ತು ಪಾರದರ್ಶಕವಾದ ಮತದಾರರ ಪಟ್ಟಿಯನ್ನು ಸಿದ್ದಪಡಿಸುವುದು ಪ್ರಜಾಪ್ರಭುತ್ವದ ನಿಜವಾದ ಆಧಾರವಾಗಿದ್ದು, ಇದನ್ನು ಬಿಜೆಪಿ ಪಕ್ಷವು ಯಾವಾಗಲೂ ಸಮರ್ಥಿಸುತ್ತಾ ಬಂದಿದೆ. ಆದರೆ, ಈ ಪರಿಷ್ಕರಣೆಯನ್ನು 140 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ವಿರೋಧಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
2024ರ “ಲೋಕಸಭಾ ಚುನಾವಣೆಗಳು ಏಪ್ರಿಲ್ 2024ರಲ್ಲಿ ನಡೆದು, 2024ರ ಮೇ ತಿಂಗಳಲ್ಲಿ ಫಲಿತಾಂಶವನ್ನು ಘೋಷಿಸಲಾಯಿತು. ಇಂದು ನಾವು 2025ರ ಆಗಸ್ಟ್ ತಿಂಗಳಿನಲ್ಲಿದ್ದೇವೆ. ಫಲಿತಾಂಶ ಬಂದ 16 ತಿಂಗಳ ನಂತರ ಈ ವಿಷಯವನ್ನು “ಸಂಶೋಧಿಸಿ” ಜನರನ್ನು ದಾರಿ ತಪ್ಪಿಸುತ್ತಿದೆ.
ಅಲ್ಲದೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಂಪರ್ಕಿಸುವ ವ್ಯವಸ್ಥೆಯಿದೆ. ಹಾಗಿದ್ದರೂ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಚುನಾವಣೆಗೆ ಮುನ್ನ ಆಕ್ಷೇಪಣೆಯನ್ನು ಏಕೆ ಎತ್ತಲಿಲ್ಲ? ಇಂತಹ ಪ್ರಶ್ನೆಗಳಿಗೆ ಉತ್ತರ ನೀಡದೆ, ಯಾವುದೇ ದಾಖಲೆಗಳನ್ನು ಕೂಡ ಸಲ್ಲಿಸಿದೇ ಗಾಳಿಯಲ್ಲಿ ಗುಂಡು ಹಾರಿಸುತ್ತಾ ಜಗತ್ತೇ ಕೊಂಡಾಡುವ ಭಾರತದ ಚುನಾವಣಾ ವ್ಯವಸ್ಥೆಯನ್ನು ರಾಹುಲ್ ಗಾಂಧಿಯವರು ಅಣಕ ಮಾಡುತ್ತಿರುವುದು ಅವರ ಮನೋ ಸಮಸ್ಯೆಯನ್ನು ಸೂಚಿಸುತ್ತದೆ.
ರಾಹುಲ್ ಗಾಂಧಿಯವರ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ಧಾರಾಮಯ್ಯ ಪುನರುಚ್ಚರಿಸಿರುವುದಕ್ಕೆ ಸುರೇಶ್ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸಿದ್ಧಾರಾಮಯ್ಯ ಅವರು ಬುದ್ಧಿವಂತ, ಪ್ರಬುದ್ಧ ಮತ್ತು ಅನುಭವಿ ರಾಜಕೀಯ ನಾಯಕ ಎಂದು ನನಗೆ ತಿಳಿದಿದೆ. ಆದರೆ ಅವರು ರಾಹುಲ್ ಗಾಂಧಿಯವರ ಅಸಂಬದ್ಧ ನಿಲುವಿಗೆ ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದಾರೆ. ಬಹುಶ: ಸಿದ್ಧಾರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುವ ಮತ್ತು ಕಾಪಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿ ಇಂತಹ ಹೇಳಿಕೆ ನೀಡುತ್ತಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
ಯಾವುದಾದರೂ ದಾಖಲೆಗಳಿದ್ದರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ನ್ಯಾಯಾಂಗವನ್ನು ಸಂಪರ್ಕಿಸಬೇಕು. ಅದನ್ನು ಬಿಟ್ಟು ಜನರನ್ನು ಮೂರ್ಖರನ್ನಾಗಿಸಿ ದಾರಿ ತಪ್ಪಿಸುವ ಇಂತಹ ನಾಟಕಗಳಲ್ಲಿ ತೊಡಗುವ ಬದಲು ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡಬೇಕು. ಈ ರೀತಿ ಹಾದಿ ಬೀದಿಯಲ್ಲಿ ಮಾಡುವ ಈ ರೀತಿಯ ಕ್ಷುಲ್ಲಕ ಆರೋಪ ರಾಜ್ಯದ ಸುಶಿಕ್ಷಿತ ಮತ್ತು ಪ್ರಜ್ಞಾವಂತ ಮತದಾರ ಪ್ರಭುಗಳಿಗೆ ಮಾಡುವ ಅವಮಾನ ಮತ್ತು ಪ್ರಜಾಪ್ರಭುತ್ವದ ಅಣಕ ಎಂದು ಸುರೇಶ್ ಕುಮಾರ್ ಕಟುವಾಗಿ ಟೀಕಿಸಿದ್ದಾರೆ.