ಇತ್ತೀಚಿನ ಸುದ್ದಿ
ಪುತ್ತೂರು ಸೌಮ್ಯ ಭಟ್ ಕೊಲೆಗೆ 22 ವರ್ಷ: ಆರೋಪಿ ಆಶ್ರಫ್ ಇನ್ನೂ ಪತ್ತೆ ಇಲ್ಲ; ರಾಜಕೀಯ ಲಾಭ ಪಡೆದವರ ಸದ್ದಿಲ್ಲ!
07/08/2021, 08:48
ಪುತ್ತೂರು(reporterkarnataka.com): ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಪುತ್ತೂರು ಸೌಮ್ಯ ಭಟ್ ಕೊಲೆಗೆ ಭರ್ತಿ 22 ವರ್ಷ ಸಂದಿದೆ. 1997 ಆಗಸ್ಟ್ 7ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಎಸ್ ಸಿ ವಿದ್ಯಾರ್ಥಿನಿ ಸೌಮ್ಯಳ ಹತ್ಯೆ ನಡೆದಿತ್ತು.
ಸಂಜೆ 5 ಗಂಟೆಯ ಸಮಯಕ್ಕೆ ಸೌಮ್ಯ ಕಾಲೇಜು ಮುಗಿಸಿ ಕಬಕದಲ್ಲಿ ಬಸ್ಸಿನಿಂದ ಇಳಿದು ಕೆದಿಲಕ್ಕೆ ಹೋಗುವ ಒಳ ರಸ್ತೆಯಲ್ಲಿ ರೈಲ್ವೆ ಹಳಿಯನ್ನು ದಾಟಿ ತನ್ನಷ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಅದೊಂದು ಗ್ರಾಮೀಣ ನಿರ್ಜನ ಪ್ರದೇಶ. ಅಕ್ಕಪಕ್ಕದಲ್ಲಿ ಎಲ್ಲೂ ಮನೆಗಳಿಲ್ಲ. ಮುಸುಕಿದ ಮೋಡ ಜತೆ ಹೊತ್ತು ಇಳಿ ಸಂಜೆಗೆ ಇಳಿದಿತ್ತು. ಸೌಮ್ಯ ತನ್ನ ಪಾಡಿಗೆ ತಾನು ಹೋಗುತ್ತಿದ್ದಳು.
ಒಂದೆರಡು ದಿನ ಮಂಚೆ ಆಶ್ರಫ್ ಮಿಲಿಟರಿಯಿಂದ ರಜೆ ಪಡೆದು ಕಬಕಕ್ಕೆ ಬಂದಿದ್ದ. ಅವನು ಭಾರತೀಯ ಸೇನೆಯಲ್ಲಿ ಮರಾಠ ಪದಾತಿ ದಳದ ಸೈನಿಕನಾಗಿದ್ದ. ಬಂದವನೇ ಎರಡು ದಿನದ ಹಿಂದೆ ಸೌಮ್ಯಳ ತಂದೆ ಪುರೋಹಿತ ಗಣಪತಿ ಭಟ್ ಅವರಲ್ಲಿ ಸೌಮ್ಯಳ ಬಗ್ಗೆ ವಿಚಾರಿಸಿದ್ದ. ಸೌಮ್ಯಳ ಕ್ಲಾಸ್ ಮೇಟ್ ಇರಬಹುದು ಎಂದು ಕೊಂಡು ಸೌಮ್ಯಳ ತಂದೆ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಆಗಸ್ಟ್ 7 ರಂದು ಸಂಜೆ ಆಶ್ರಫ್ ಕಬಕ ಬಸ್ ಸ್ಟ್ಯಾಂಡ್ ನಲ್ಲೇ ನಿಂತು ಹೊಂಚು ಹಾಕಿ ಕಾಯುತ್ತಿದ್ದ . ಬಸ್ಸಿಂದ ಇಳಿದು ಸೌಮ್ಯ ಮನೆ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಅವಳನ್ನು ಹಿಂಬಾಲಿಸಿದ್ದ.ಮೊದಲೇ ನಿಗದಿಪಡಿಸಿದ್ದ ನಿರ್ಜನ ಪ್ರದೇಶದಲ್ಲಿ ಆ್ಯಟೆಕ್ ಮಾಡಿದ್ದ. ತಪ್ಪಿಸಿಕೊಂಡು ಓಡಲು ಯತ್ನಿಸಿದ ಸೌಮ್ಯಳ ಬೆನ್ನಿಗೆ ಮೊದಲೇ ಸಿದ್ಧಪಡಿಸಿದ್ದ ಚಾಕುವಿನಿಂದ ಹಲವು ಬಾರಿ ಇರಿಸಿದ್ದ. ಕ್ಷಣಾರ್ಧದಲ್ಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು. ದೇಹದಿಂದ ಸುರಿದು ಧಾರಾಕಾರ ರಕ್ತ ಮಳೆ ನೀರಿನೊಂದಿಗೆ ಸೇರಿತ್ತು.
ಈ ಪ್ರಕರಣದ ಬಳಿಕ ಪುತ್ತೂರಿನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಅಮಾಯಕರ ಅಂಗಡಿ, ಮನೆ ಮೇಲೆ ದಾಳಿ ನಡೆದಿತ್ತು.
ತಕ್ಷಣ ಸ್ಥಳಕ್ಕೆ ಅಂದಿನ ಡಿವೈಎಸ್ಪಿ ಗಣಪತಿ,ಪುತ್ತೂರು ನಗರ ಸ್ಟೇಷನ್ ಇನ್ಸ್ ಪೆಕ್ಟರ್ ಜೆ. ಪಾಪಯ್ಯ , ಎಸ್ಐ. ರವೀಶ್ ಮತ್ತಿತರರು ಭೇಟಿ ನೀಡಿದರು. ಕೊಲೆ ನಡೆದು 3 ತಾಸಿನೊಳಗೆ ಆರೋಪಿ ಅಶ್ರಫ್ ನನ್ನು ಬಂಧಿಸಲಾಯಿತು.
ಈ ನಡುವೆ ಆತ ಮಾನಸಿಕ ಅಸ್ವಸ್ಥ ,ಹುಚ್ಚಾ, ಸೈಕೋ ಎಂದು ಬಿಂಬಿಸುವ ಪ್ರಯತ್ನಗಳು ನಡೆದವು. ಆ ಮೂಲಕ ಘಟನೆಯನ್ನು
ರಾಜಕೀಯಗೊಳಿಸುವ ಪ್ರಯತ್ನ ನಡೆಯಿತು.
ಅದಾದ ಎರಡು ತಿಂಗಳಲ್ಲಿ ಆರೋಪಿ ಮಂಗಳೂರಿನಿಂದ ತಪ್ಪಿಸಿ ಕೊಳ್ಳುತ್ತಾನೆ. ಕೆಲವೇ ದಿನದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ಅವನನ್ನು ಬಂಧಿಸಲಾಗುತ್ತದೆ. ಅದಾದ ಎರಡೂ ವರ್ಷದಲ್ಲಿ ಆಶ್ರಫ್ ಮತ್ತೆ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾನೆ . ಹೀಗೆ ತಪ್ಪಿಸಿಕೊಂಡ ಅಶ್ರಫ್ ಇದುವರೆಗೆ ಮತ್ತೆ ಸೆರೆಯಾಗುವುದೇ ಇಲ್ಲ. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಮೈತ್ರಿಕೂಟ ಸರಕಾರ, ಮತ್ತೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತದೆ. ಸೌಮ್ಯ ಕೊಲೆಯನ್ನು ರಾಜಕೀಯ ಲಾಭಕ್ಕೆ ಉಪಯೋಗಿಸಿದವರು ಚುನಾವಣೆಯಲ್ಲಿ ಭರ್ಜರಿ ಲಾಭ ಪಡೆದರು. ಆದರೆ ಅವರು ಯಾರಿಗೂ ಈಗ ಸೌಮ್ಯ ಬೇಡ. ಆಗ ಇಲ್ಲಿ ಶಾಸಕರಾಗಿದ್ದ ಡಿ.ವಿ. ಸದಾನಂದ ಗೌಡ ಅವರು ರಾಜ್ಯದ ಮುಖ್ಯ ಮಂತ್ರಿಯೂ ಆದರು. ಶಕುಂತಳಾ ಶೆಟ್ಟಿ ಶಾಸಕಿಯಾದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯೂ ಆದರು .ಇವರೆಲ್ಲ ದೊಡ್ಡ ಮನಸ್ಸು ಮಾಡುತ್ತಿದ್ದರೆ ಆರೋಪಿ ಆಶ್ರಫನ್ನು ಎಂದೋ ಬಂಧಿಸಬಹುದಿತ್ತು. ಆದರೆ ಇವರಿಗೆ ಇದೆಲ್ಲ ಬೇಕಾಗಿಲ್ಲ.
ಚುನಾವಣೆ ಬಂದಾಗಲೆಲ್ಲ ಈ ಘಟನೆಯನ್ನು ಮತ್ತೆ ಮತ್ತೆ ನೆನಪಿಸಿ ಓಟು ಪಡೆಯುವವರು ಈಗಲೂ ನಮ್ಮಲ್ಲಿ ಇದ್ದಾರೆ.