ಇತ್ತೀಚಿನ ಸುದ್ದಿ
ಪುತ್ತೂರು: ಮನೆಗಳ್ಳತನಕ್ಕೆ ಯತ್ನ; ಆರೋಪಿ ದಂಪತಿಯ ಬಂಧನ; ಬೈಕ್ ವಶ
31/12/2025, 23:02
ಪುತ್ತೂರು(reporterkarnataka.com): ಇಲ್ಲಿನ ಕಸಬಾ ಬಳಿ ಮನೆಯೊಂದರಿಂದ ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇಲೆ ದಂಪತಿಯ ಬಂಧಿಸಲಾಗಿದ್ದು, ಅವರು ಬಳಸಿದ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ಕಸಬಾ ನಿವಾಸಿ ಎ.ವಿ ನಾರಾಯಣ (84) ಎಂಬವರ ಮನೆಗೆ ಡಿ. 17ರಂದು ಮಧ್ಯರಾತ್ರಿ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಲ್ಮೆಟ್ ಧರಿಸಿಕೊಂಡು, ಮುಖಚಹರೆಯನ್ನು ಮರೆಮಾಚಿ ಮನೆಯಿಂದ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಮನೆಯ ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಿದ್ದರು. ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದು, ಈ ವೇಳೆ ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿದ್ದು, ಜೋರಾಗಿ ಕಿರುಚಿದ್ದಾರೆ. ಇದರಿಂದ ಹೆದರಿದ ಆರೋಪಿಗಳು ಮನೆಯ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿರುತ್ತಾರೆ. ನಾರಾಯಣ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 127/2025, ಕಲಂ: 307 ಜೊತೆಗೆ 3(5) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪುತ್ತೂರು, ಮುಡೂರು ನಿವಾಸಿ (ಪ್ರಸ್ತುತ ಬಾಡಿಗೆ ಮನೆ ವಾಸ:ಪಂಜ) ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25)ಎಂಬವರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.













