ಇತ್ತೀಚಿನ ಸುದ್ದಿ
ಫುಲ್ ಗಾಸ್ಪೆಲ್ ಪಾಸ್ಟರ್ಸ್ ಫೆಲೋಶಿಪ್’ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವಿಗಾಗಿ ವಿಶೇಷ ಪ್ರಾರ್ಥನೆ
11/04/2024, 16:12
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಸಾಮರಸ್ಯದ ಜೀವನವನ್ನು ಎದುರು ನೋಡುತ್ತಿದೆ. ಇದರಿಂದ ನಮ್ಮ ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿ ಸಾಧ್ಯ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಬಲ್ಮಠದ ದಕ್ಷಿಣ ಕನ್ನಡ ಫುಲ್ ಗಾಸ್ಪೆಲ್ ಪಾಸ್ಟರ್ಸ್ ಫೆಲೋಶಿಪ್ ನಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡದಲ್ಲಿ ಪ್ರೀತಿ ಹಂಚುವ ಕಾಯಕ ಕಡಿಮೆಯಾಗಿದೆ. ದ್ವೇಷಮಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಇದರಿಂದ ಜಿಲ್ಲೆಗೆ ಕೋಮುವಾದಿ ಹಣೆಪಟ್ಟಿ ಬಂದಿದೆ. ಇದನ್ನು ತೊಡೆದು ಹಾಕದೇ, ಉದ್ಯೋಗ ಸೃಷ್ಟಿ ಅಸಾಧ್ಯ. ಆದರೆ ಇಲ್ಲೇ ಉದ್ಯೋಗ ಸೃಷ್ಟಿಯಾಗಬೇಕು ಎನ್ನುವುದು ಎಷ್ಟೋ ಹೆತ್ತವರ, ಪೋಷಕರ ಕನಸು. ನಮ್ಮ ಮನೆಯ ಮಕ್ಕಳು ಉದ್ಯೋಗವನ್ನರಸಿ, ಬೇರೆ ಊರುಗಳಿಗೆ ಹೋಗುವಂತಾಗಬಾರದು. ತಮ್ಮ ತಂದೆ – ತಾಯಿಯ ಜೊತೆ ನಮ್ಮ ಊರಿನಲ್ಲೇ ಉಳಿಯಬೇಕು ಎಂದರು.
ಇದೇ ಸಂದರ್ಭ ಪದ್ಮರಾಜ್ ಆರ್. ಪೂಜಾರಿ ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ಐವನ್ ಮೊಂತೆರೋ ಪ್ರಾರ್ಥಿಸಿದರು.
ಸಂಸ್ಥೆಯ ಅಧ್ಯಕ್ಷ ಡೊನಾಲ್ಡ್ ಪಿ. ಮಿನೇಜಸ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಗಿರೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.