ಇತ್ತೀಚಿನ ಸುದ್ದಿ
100 ವರ್ಷ ಪೂರೈಸಿದ ಸರಕಾರಿ ಶಾಲೆಗಳಿಗೆ ವಿಶೇಷ ಅನುದಾನ ನೀಡಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
15/03/2025, 18:04

ಹಾವೇರಿ (reporterkarnataka.com): ನೂರು ವರ್ಷ ಪೂರೈಸಿರುವ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿ ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನೆ ಮತ್ತು ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಬ್ಬ ವ್ಯಕ್ತಿಗೆ ನೂರು ವರ್ಷ ಆಗುವುದು ಮುಖ್ಯವಲ್ಲ. ಒಂದು ಶಿಕ್ಷಣ ಸಂಸ್ಥೆಗೆ ನೂರು ವರ್ಷ ಆಗುವುದು ಇತಿಹಾಸ ನಿರ್ಮಾಣ ಮಾಡಿದಂತೆ, ವ್ಯಕ್ತಿ ತನ್ನ ಆರೋಗ್ಯ ಕಾಪಾಡಿಕೊಂಡರೆ ನೂರು ವರ್ಷ ಪೂರೈಸಬಹುದು. ಒಂದು ಸಂಸ್ಥೆಗೆ ನೂರಾ ಐದು ವರ್ಷಕ್ಕೆ ನೂರಾರು ಕಥೆಗಳಿರುತ್ತವೆ. ಈ ಸಂಸ್ಥೆಗೆ ರುದ್ರಪ್ಪ ಮಲ್ಲಾಡ್ ಅವರು ಜಮೀನು ದಾನ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡಿ ಅಭಿನಂದಿಸುತ್ತೇನೆ. ಇಲ್ಲಿನ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಯಶಸ್ಸು ಕಂಡಿದ್ದಾರೆ. ಅವರಿಗೂ ಅಭಿನಂದನೆಗಳು ಎಂದು ಹೇಳಿದರು.
*10 ಲಕ್ಷ ದೇಣಿಗೆ:*
ನೂರು ವರ್ಷ ಅಂದರೆ ಏನಾದರೂ ಗುರುತು ಇಡುವ ಕೆಲಸ ಆಗಬೇಕು.ಇದು ಹೈಸ್ಕೂಲ್ ಆಗಿ ಮುಂದುವರೆಯುವ ಈ ಸಂದರ್ಭದಲ್ಲಿ ಮಾದರಿ ಶಾಲೆಯಾಗಿ ಪಿಯುಸಿ ಕಾಲೇಜು ಆಗಬೇಕು. ಅದಕ್ಕಾಗಿ ಎಲ್ಲರೂ ಸಂಕಲ್ಪ ಮಾಡಬೇಕು.
ಶಿಕ್ಷಣ ಬದುಕಿಗೆ ಬಹಳ ಮುಖ್ಯ ಶಿಕ್ಷಣ ಮನುಷ್ಯನನ್ನು ಮಾನವನನ್ನಾಗಿ ಮಾಡುತ್ತದೆ. ಇಲ್ಲಿನ ಮಕ್ಕಳು ಹೆಚ್ಚಿನ ವಿದ್ಯೆ ಪಡೆದು ಬದುಕಿನ ಎಲ್ಲ ರಂಗದಲ್ಲಿ ಯಶಸ್ಸಿಯಾಗಲಿ. ಇಲ್ಲಿನ ಯುವಕರು ಆದರ್ಶ ಶಾಲೆಯನ್ನಾಗಿ ಮುಂದುವರೆಸಲಿ ನನ್ನ ಸಂಸದರ ನಿಧಿಯಿಂದ 10 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದರು.
ಮಕ್ಕಳು ಯಾಕೆ, ಎಲ್ಲಿ, ಏನು, ಎಷ್ಟು, ಎನ್ನುವ ಫ್ರಶ್ನೆ ಮಾಡುವುದು ಯಶಸ್ಸಿನ ಮಂತ್ರ. ಪ್ರಶ್ನೆ ಮಾಡುವ ಮೂಲಕ ಬುದ್ದಿ ಶಕ್ತಿಯನ್ನು ತಾರ್ಕಿಕವಾಗಿ ಚಿಂತನೆಗೆ ಹಚ್ಚುತ್ತದೆ. ಒಮ್ಮೆ ವಿದ್ಯಾರ್ಥಿ ಆದರೆ ಸಾಯುವವರೆಗೂ ವಿದ್ಯಾರ್ಥಿ. ವ್ಯಾತ್ಯಾಸ ಏನೆಂದರೆ ಶಾಲೆಯಲ್ಲಿ ಪಠ್ಯ ಗುರುಗಳು ಇರುತ್ತಾರೆ. ಆದರೆ ಬದುಕಿನಲ್ಲಿ ಪ್ರತಿದಿನ ಪರೀಕ್ಷೆಯನ್ನು ಎದುರಿಸುತ್ತೇವೆ. ಯಾರ ಬುದ್ದಿಶಕ್ತಿಯ ಬಾಗಿಲು ತೆರೆದಿರುತ್ತದೊ ಅವರು ನಿರಂತರ ಕಲಿಯುತ್ತಾರೆ ಎಂದರು.
ಒಬ್ಬ ಶ್ರೀಮಂತನಿಗೆ ಒಂದು ಆಸೆಯಿತ್ತು. ತನ್ನ ಮಗ ಶ್ರೇಷ್ಠ ಬುದ್ದಿವಂತನಾಗಬೇಕು ಮೆಧಾವಿ ಆಗಬೇಕೆಂದು ಗುರುಕುಲಕ್ಕೆ ಕಳುಹಿಸಿದರು. ಆತ ಎಂಟು ವರ್ಷ ವಿದ್ಯೆ ಕಲಿತು ನಂಬರ್ ಒನ್ ಆಗಿ ಊರಿಗೆ ಬಂದ. ಆತನನ್ನು ಆನೆಯ ಮೇಲೆ ಮೆರವಣಿಗೆ ಮಾಡಿದರು. ಆತ ಬಂದು ತನ್ನ ತಂದೆಯನ್ನು ತಬ್ಬಿಕೊಂಡು ಖುಷಿಪಟ್ಟ ಆದರೆ, ಆತನ ತಂದೆ ಖುಷಿಯಾಗಿರಲಿಲ್ಲ. ಮಾರ್ಮಿಕವಾಗಿ ಒಂದು ಮಾತು ಹೇಳಿದ ಯಾವುದನ್ನು ಗುರುಗಳು ಕಲಿಸಲು ಆಗಿಲ್ಲ, ನೀನು ಕಲಿಯಲು ಆಗಿಲ್ಲ, ಅದನ್ನು ಗುರು ನಿನಗೆ ಕಲಿಸಿಲ್ಲ, ಅದನ್ನು ನಿಮ್ಮ ಗುರುವಿಗೆ ಕೇಳು ಎಂದು ಹೇಳಿದ, ಆತ ತಮ್ಮ ಗುರುಗಳ ಬಳಿ ಹೋಗಿ ಕೇಳಿದಾ, ಅವರು ಹೌದು ಎಂದು ನೂರು ಹಸುಗಳನ್ನು ಕೊಟ್ಟು ಇವುಗಳನ್ನು ಇನ್ನೂರು ಮಾಡಿಕೊಂಡು ಬಾ ಎಂದು ಕಳುಹಿಸಿದರು. ಆತ ಅವುಗಳನ್ನು ತೆಗೆದುಕೊಂಡು ಕಾಡಿಗೆ ಹೋಗಿ ವರ್ಷಗಟ್ಟಲೆ ತಪಸ್ಸಿಗೆ ಕುಂತು ಧ್ಯಾನ ಮಾಡಿದ ಅಷ್ಟರಲ್ಲಿ ಅವು ಇನ್ನೂರು ಆಗಿದ್ದವು, ಆಗ ಆತ ವಾಪಸ್ ಗುರುಗಳ ಬಳಿ ಬಂದು ಗುರುಗಳೆ ನೀವು ವಿದ್ಯೆ ಕಲಿಸಿದ್ದಿರಿ ಅದರ ಜೊತೆಗೆ ನನಗೆ ಅಹಂಕಾರ ಇತ್ತು. ನಾನು ವಿದ್ಯೆಯ ಜೊತೆಗೆ ವಿನಯ ಕಲಿತು ಬಂದೆ ಎಂದು ಹೇಳಿದ. ಲಕ್ಷ್ಮಿ ಇದ್ದಾಗ ಸೊಕ್ಕು ಬರುತ್ತದೆ. ಸರಸ್ವತಿ ಇದ್ದಾಗ ಸೊಕ್ಕು ಬರಬಾರದು, ಸರಸ್ವತಿ ವ್ಯಾಪ್ತಿ ಬಹಳ ದೊಡ್ಡದು, ಈ ಶಾಲೆ ಸರಸ್ವತಿ ವಾಹನ, ಸರಸ್ವತಿ ವಾಹನ ಪರಮ ಹಂಸ, ಪರಮಹಂಸದ ವಿಶೇಷ ಏನು ಎಂದರೆ ಹದ್ದಿಗಿಂತ ಎತ್ತರಕ್ಕೆ ಹಾರುತ್ತದೆ. ಅತಿ ಹೆಚ್ಚು ತೂಕ ಇರುವ ಪಕ್ಷಿ, ಅದು ಅತಿ ಎತ್ತರಕ್ಕೆ ಹಾರುತ್ತದೆ. ಜ್ಞಾನದ ತೂಕಇಟ್ಟುಕೊಂಡು ಅದು ಇದ್ದರು ಕೂಡ ಅರಿವಿನ ಗುಣ ಬೆಳೆಸುಕೊಂಡರೆ ಅತ್ಯಂತ ಎತ್ತರಕ್ಕೆ ಹಾರಬಹುದು, ಆ ಭಾವನೆಯಿಂದ ನಾವು ಇರಬೇಕು. ಈ ಶಾಲೆಗೆ ನೂರು ವರ್ಷ ಆಗಿದೆ ನೂರಾರು ಮಕ್ಕಳು ಕಲಿತು ಹೋಗಿದ್ದಾರೆ. ಇಲ್ಲಿ ಕಲಿತು ಹೋದ ಹಳೆಯ ವಿದ್ಯಾರ್ಥಿಗಳು ಈ ಶಾಲೆಗೆ ನಿಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಹೇಳಿದರು.
*ವಿವೇಕ ಯೋಜನೆ:*
ನೂರು ವರ್ಷ ಪೂರೈಸಿರುವ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿ ಅನುದಾನ ನೀಡಬೇಕು. ನಾನು ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಈ ಯೋಜನೆ ಘೊಷಣೆ ಮಾಡಿದ್ದೆ, ವಿವೇಕ ಯೋಜನೆ ಮಾಡಿದ್ದೆ ರಾಜ್ಯದಲ್ಲಿ 30 ಸಾವಿರ ಶಾಲಾ ಕೊಠಡಿ ಕೊರತೆ ಇದೆ. ಪ್ರತಿ ವರ್ಷ 9 ಸಾವಿರ ಶಾಲಾಕೊಠಡಿ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದೆ, 2022-23 ರಲ್ಲಿ ನಾಲ್ಕೂವರೆ ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಿದ್ದೇವು, ಆ ಯೋಜನೆ ಮುಂದುವರೆಯಬೇಕಿತ್ತು. ನಮ್ಮ ಜಿಲ್ಲೆಯಲ್ಲಿ 150 ಶಾಲಾ ಕೊಠಡಿ ನಿರ್ಮಾಣ ಆಗಿವೆ. ಶಿಕ್ಷಕರ ನೇಮಕ ಹಾಗೂ ಶಾಲಾ ಕೊಠಡಿ ನಿರ್ಮಾಣ ಆಗಬೇಕು. ನಾವು ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ 14% ರಷ್ಟು ಅನುದಾನ ಮೀಸಲಿಟ್ಟಿದ್ದೇವು. ಅದು ಈಗ 11% ಕ್ಕೆ ಇಳಿದಿದೆ. ಶಿಕ್ಷಣವಿಲ್ಲದ ಸಮಾಜದಿಂದ ಅರಾಜಕತೆ ಉಂಟಾಗುತ್ತದೆ. ಅಂಬೇಡ್ಕರ್ ಅವರ ಮೂಲ ಉದ್ದೇಶ ಶಿಕ್ಷಣ ಆಗಿತ್ತು. ಶಿಕ್ಷಣ, ಸಂಘಟನೆ ಹೋರಾಟ ಅಂತ ಹೇಳಿದ್ದರು. ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ ಇಲ್ಲದಿದ್ದರೆ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಕನ್ನಡ ಶಾಲೆಗಳು ಉಳಿಬೇಕು ಎಂದು ಹೋರಾಟ ನಡೆಯುತ್ತದೆ. ಮತ್ತೊಂದೆಡೆ ಕಾನ್ವೆಂಟ್ ಶಾಲೆಗಳು ಹಳ್ಳಿ ಹಳ್ಳಿಗೆ ಆಗುತ್ತಿವೆ. ಕನ್ನಡ ಶಾಲೆಳಗಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಕನ್ನಡ ಶಾಲೆಗಳನ್ನು ಉಳಿಸಬೇಕು ಎಂದು ಹೇಳಿದರು.
ಶಿಕ್ಷಕರು ಒಂದು ಸರ್ಕಾರಿ ನೌಕರಿಗೆ ಬಂದಿದ್ದೇನೆ ಎಂದು ಭಾವಿಸಬಾರದು, ಒಬ್ಬ ವೈದ್ಯ ಹೇಗಿದ್ದಾರೆ ಎಂದು ತಿಳಿಯಲು ಒಂದು ವಾರ ಸಾಕು, ಒಬ್ಬ ಶಿಕ್ಷಕರು ಹೇಗಿದ್ದಾರೆ ಎಂದು ತಿಳಿಯಲು ಇಪ್ಪತ್ತು ಇಪ್ಪತೈದು ವರ್ಷ ಬೇಕು, ನಿಮ್ಮ ಬೋಧನೆ ಮಕ್ಕಳ ಯಶಸ್ಸಿನಲ್ಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಸಚಿವರಾದ ಮಧು ಬಂಗಾರಪ್ಪ, ಶಾಸಕರಾದ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಎಸ್. ಆರ್. ಪಾಟೀಲ್, ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜ್ಜಂಪೀರ ಖಾದ್ರಿ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹೇಮಪ್ಪ, ಬ್ಯಾಡಗಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಶಿವಯೋಗಿ ಶಿರೂರ ಸೇರಿದಂತೆ ಎಸ್.ಡಿ.ಎಂ.ಸಿ ಯ ಸರ್ವ ಸದಸ್ಯರು, ಶಾಲೆಯ ಸರ್ವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.