ಇತ್ತೀಚಿನ ಸುದ್ದಿ
ಮೆಟ್ರೋ ಹಳದಿ ಮಾರ್ಗ ಆಗಸ್ಟ್ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ ತೇಜಸ್ವೀ ಸೂರ್ಯ ಎಚ್ಚರಿಕೆ
05/07/2025, 16:55

ಬೆಂಗಳೂರು(reporterkarnataka.com): ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರು ಶನಿವಾರ ಮೆಟ್ರೋ ಹಳದಿ ಮಾರ್ಗದ ಪ್ರಾರಂಭದಲ್ಲಿ ಪದೇ ಪದೇ ಆಗುತ್ತಿರುವ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಆಗಸ್ಟ್ ತಿಂಗಳ ಗಡುವನ್ನು ಬಿಎಂಆರ್‌ಸಿಎಲ್ ಮತ್ತೊಮ್ಮೆ ಮೀರಿದರೆ ಮೆಟ್ರೋ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಶೀಘ್ರ ಕಾರ್ಯಾಚರಣೆಗೆ ಒತ್ತಾಯಿಸಿ, ನಾಗರಿಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಂದ ಬಂದ ಕರೆಗಳಿಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್, ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ಆಗಸ್ಟ್ ಮಧ್ಯದ ವೇಳೆಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಸೂರ್ಯ, ಹಳದಿ ಮಾರ್ಗ ಆರಂಭದ ಕುರಿತಾಗಿ ಬಿಎಂಆರ್‌ಸಿಎಲ್ 10ಕ್ಕೂ ಹೆಚ್ಚು ಬಾರಿ ತನ್ನದೇ ಗಡುವನ್ನು ಮುರಿದಿರುವುದನ್ನು ಖಂಡಿಸಿದ್ದು, ಮೆಟ್ರೋ ಸಂಸ್ಥೆಯು ಈ ಅಂತಿಮ ಭರವಸೆಯನ್ನು ಮತ್ತೊಮ್ಮೆ ಉಲ್ಲಂಘಿಸಿದರೆ, ಮಾರ್ಗದಲ್ಲಿರುವ ಮೆಟ್ರೋ ನಿಲ್ದಾಣಗಳ ಹೊರಗೆ ಪ್ರತಿಭಟನೆ ನಡೆಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಬೆಂಗಳೂರಿನ ಸಂಚಾರ ಬಿಕ್ಕಟ್ಟನ್ನು ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಿದರೆ ಮಾತ್ರ ಪರಿಹರಿಸಬಹುದು ಎಂದು ಲಾಲ್‌ಬಾಗ್ ಹೊರಗೆ ಜನಸಮೂಹವನ್ನು ಉದ್ದೇಶಿಸಿ ಸಂಸದ ಸೂರ್ಯ ರವರು ತಿಳಿಸಿದ್ದು. “ಯೆಲ್ಲೋ ಲೈನ್ ತೆರೆಯಲು ವಿಳಂಬವಾಗುತ್ತಿರುವುದರಿಂದ, ಪ್ರಯಾಣಿಕರು ಸಿಲ್ಕ್ ಬೋರ್ಡ್ ಮತ್ತು ಇತರ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ದಿನನಿತ್ಯ ಸಿಲುಕುತ್ತಿದ್ದಾರೆ. ಬಿಎಂಆರ್‌ಸಿಎಲ್ ತನ್ನದೇ ಗಡುವನ್ನು ಹಲವು ಬಾರಿ ಮುರಿದಿದೆ. ಆಗಸ್ಟ್ ವೇಳೆಗೆ ಮಾರ್ಗ ತೆರೆಯುವ ಈ ಬದ್ಧತೆಯೂ ಉಲ್ಲಂಘನೆಯಾದರೆ, ಹಳದಿ ಮಾರ್ಗದ ಪ್ರತಿಯೊಂದು ಮೆಟ್ರೋ ನಿಲ್ದಾಣದ ಹೊರಗೆ ಪ್ರತಿಭಟಿಸುವುದನ್ನು ಹೊರತುಪಡಿಸಿ ಜನರಿಗೆ ಬೇರೆ ದಾರಿಯಿಲ್ಲ.” ಎಂದು ತಿಳಿಸಿದ್ದಾರೆ.
ಶನಿವಾರ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಂ. ಕೃಷ್ಣಪ್ಪ (ಬೆಂಗಳೂರು ದಕ್ಷಿಣ), ರವಿ ಸುಬ್ರಹ್ಮಣ್ಯ (ಬಸವನಗುಡಿ), ಉದಯ್ ಗರುಡಾಚಾರ್ (ಚಿಕ್ಕಪೇಟೆ), ಸಿ.ಕೆ. ರಾಮಮೂರ್ತಿ (ಜಯನಗರ), ಎಂಎಲ್‌ಸಿ ಗೋಪಿನಾಥ್ ರೆಡ್ಡಿ, ಮತ್ತು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆಯ ನಾಗರಿಕರ ನಿಯೋಗವು ಲಾಲ್‌ಬಾಗ್ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿತು. ನಿಯೋಗವು ಬಿಎಂಆರ್‌ಸಿಎಲ್ ಎಂಡಿ ಅವರಿಗೆ ಸ್ಥಳದಲ್ಲೇ ಮನವಿ ಸಲ್ಲಿಸಿತು.
ತಮ್ಮ ಮನವಿಯಲ್ಲಿ, ಮೆಟ್ರೋ ಹಳದಿ ಮಾರ್ಗ ಆರಂಭದ ಕುರಿತಾಗಿ ನಡೆಯುತ್ತಿರುವ ನಿರಂತರ ವಿಳಂಬದಿಂದಾಗಿ ಬೆಂಗಳೂರಿಗರಿಗೆ ದೈನಂದಿನ ಪ್ರಯಾಣದಲ್ಲಿ ತೀವ್ರ ತೊಂದರೆಯಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅನ್ನು ಟೀಕಿಸಿ, ಯೆಲ್ಲೋ ಲೈನ್ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ ದೂರದಲ್ಲಿ 16 ನಿಲ್ದಾಣಗಳನ್ನು ಒಳಗೊಂಡಿದೆ. ಕಾರ್ಯಾಚರಣೆ ಪ್ರಾರಂಭವಾದ ನಂತರ, ಈ ಮಾರ್ಗವು ಪ್ರತಿದಿನ 2.5 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ, ಇದು ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಲ್ಕ್ ಬೋರ್ಡ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದನ್ನು ಆರಂಭದಲ್ಲಿ 2021 ರಲ್ಲಿ ತೆರೆಯಲು ನಿರ್ಧರಿಸಲಾಗಿತ್ತು, ಆದರೆ ಕಳೆದ ವರ್ಷಗಳಲ್ಲಿನ ಹಲವಾರು ವಿಳಂಬಗಳು ಅದರ ಆರಂಭ ಮತ್ತು ಕಾರ್ಯಾಚರಣೆಯ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಿವೆ ಎಂದು ವಿವರಿಸಿದರು.
ಮೊದಲಿಗೆ 2021ಕ್ಕೆ ನಿಗದಿಯಾಗಿದ್ದ ಉದ್ಘಾಟನೆಯನ್ನು 2023ರ ಅಂತ್ಯಕ್ಕೆ ಮುಂದೂಡಲಾಗಿತ್ತು, ನಂತರ 2024ರ ಸಾರ್ವತ್ರಿಕ ಚುನಾವಣೆಗಳಿಗೂ ಮುನ್ನ ಎಂದು ಹೇಳಲಾಗಿತ್ತು. ಆ ನಂತರ, ಜನವರಿ 2025 ರ ಹೊಸ ಗಡುವನ್ನು ಘೋಷಿಸಲಾಯಿತು, ಅದನ್ನು ಈಗ ಜುಲೈ 2025ಕ್ಕೆ ವಿಸ್ತರಿಸಲಾಗಿದೆ. ಈಗಲೂ ಸಹ, ಆಗಸ್ಟ್ 2025 ರ ವೇಳೆಗೆ ಮಾರ್ಗವು ಕಾರ್ಯಾಚರಣೆಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಕೇವಲ ‘ಆಶಾದಾಯಕವಾಗಿ’ ಹೇಳುತ್ತಿದ್ದಾರೆ.
ಸದರಿ ಮಾರ್ಗದ ನಾಗರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ಸಂಸದ ಸೂರ್ಯ ಅವರು ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸಿದ್ದು, ಈ ಅವಧಿಯಲ್ಲಿ ಅವರು ಹಲವಾರು ಅಡೆತಡೆಗಳನ್ನು ಸಹ ನಿವಾರಿಸಿದ್ದಾರೆ. ಹಲವು ಸಭೆಗಳು ಮತ್ತು ಸಚಿವರ ಮಧ್ಯಸ್ಥಿಕೆ ಮೂಲಕ, ಸೂರ್ಯ ಅವರು ಮೆಟ್ರೋ ರೈಲುಗಳಿಗೆ ಕಾರ್ ಬಾಡಿಗಳ ಆರಂಭಿಕ ಪೂರೈಕೆಗೆ ಅನುವು ಮತ್ತು ಮೆಟ್ರೋ ರೇಕ್‌ಗಳ ಮೇಲೆ ಕೆಲಸ ಮಾಡುತ್ತಿರುವ ಚೀನೀ ಇಂಜಿನಿಯರ್‌ಗಳಿಗೆ ಅಗತ್ಯ ವೀಸಾ ಅನುಮತಿಗಳನ್ನು ಸಹ ಪಡೆದಿದ್ದು ಗಮನಾರ್ಹ. ಸಿಆರ್‌ಆರ್‌ಸಿ ಮತ್ತು ಸಾಫ್ಟ್‌ವೇರ್ ಪೂರೈಕೆದಾರ ಮೆಲ್ಕೋ ನಡುವೆ ಸಹ ಸಮನ್ವಯ ಸಾಧಿಸಿ, ಟಿಸಿಎಂಎಸ್ (ರೈಲು ನಿಯಂತ್ರಣ ನಿರ್ವಹಣಾ ಸಾಫ್ಟ್‌ವೇರ್) ನ ಬೀಟಾ ಆವೃತ್ತಿಯನ್ನು ಜನವರಿ 2024 ರೊಳಗೆ ತಲುಪಿಸಲು ಸಹಾಯ ಮಾಡಿದ್ದು, ಇದು ಹಿಂದಿನ ಜೂನ್ 2024 ರ ಗಡುವಿಗಿಂತ ಮುಂಚಿತವಾಗಿ ಎಂಬುದು ವಿಶೇ಼ಷ.
ನಂತರ ಮಾತನಾಡಿದ ಸೂರ್ಯ ರವರು, “ಬಿಎಂಆರ್‌ಸಿಎಲ್ ನಮ್ಮ ಮತ್ತು ಪ್ರಯಾಣಿಕರ ನಿರಂತರ ವಿನಂತಿಗಳ ಹೊರತಾಗಿಯೂ ದರ ನಿಗದಿ ಸಮಿತಿ ವರದಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಮೆಟ್ರೋ ಪ್ರಯಾಣದ ಹೆಚ್ಚಿದ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಈ ವರದಿಯು ಸಾರ್ವಜನಿಕರಿಗೆ ಬಹಳ ಮುಖ್ಯವಾಗಿದೆ. ಪ್ರಸ್ತುತ, ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ, ಆದರೂ ಕಳಪೆ ಪ್ರಯಾಣಿಕರ ಅನುಭವವನ್ನು ನೀಡುತ್ತಿದೆ. ದರ ನಿಗದಿ ಸಮಿತಿ ವರದಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಾವು ಬಿಎಂಆರ್‌ಸಿಎಲ್ ಅನ್ನು ಒತ್ತಾಯಿಸುತ್ತೇವೆ.”
“ಇತರ ಮೆಟ್ರೋ ಮಾರ್ಗಗಳ ಕಾರ್ಯಾಚರಣೆ ಮತ್ತು ನಿರ್ಮಾಣದಲ್ಲಿಯೂ ಪ್ರಗತಿಯ ಕೊರತೆಯಿದೆ. ವರ್ಷಗಳಿಂದ ಬಿಎಂಆರ್‌ಸಿಎಲ್‌ನ ನಿರಂತರ ವಿಳಂಬಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಸ್ಪಷ್ಟತೆಯನ್ನು ಪಡೆಯಲು ಇಲ್ಲಿಗೆ ಬಂದಿದ್ದು, ನಮ್ಮ ಮನವಿಗಳಿಗೆ ಬಿ.ಎಂ.ಆರ್.ಸಿ.ಎಲ್ ತುರ್ತು ಸ್ಪಂದನೆಯ ಮೂಲಕ ಸಾರ್ವಜನಿಕರು ದಿನನಿತ್ಯ ಎದುರಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಗೊಳಿಸಿವಂತೆ ವಿನಂತಿಸುತ್ತೇನೆ ” ಎಂದು ವಿವರಿಸಿದರು.