ಇತ್ತೀಚಿನ ಸುದ್ದಿ
ಪೋಲೀಸರ ಮೃದು ಧೋರಣೆಯೇ ಗೂಂಡಾಗಿರಿಗೆ ಪ್ರೇರಣೆ: ಪ್ರತಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಕ್ರೋಶ
19/12/2022, 10:36

ಮಂಗಳೂರು(reporterkarnataka.com): ರಾಜಕೀಯ ಪ್ರಭಾವದಿಂದಾಗಿ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೋಲೀಸರು ಅನುಸರಿಸುತ್ತಿರುವ ಮೃದು ಧೋರಣೆಯೇ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅನೈತಿಕ ಗೂಂಡಾಗಿರಿಗೆ ಪ್ರೇರಣೆಯಾಗಿದೆ ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅಕ್ರಮ ಚಟುವಟಿಕೆಗಳು ಅಥವಾ ತಪ್ಪು ಘಟನೆಗಳು ಸಂಭವಿಸಿದಾಗ ಕಾನೂನಿನ ಮೂಲಕ ಬಗೆ ಹರಿಸಬೇಕೇ ಹೊರತು ತಾವೇ ಕಾನೂನು ಕೈಗೊತ್ತುವ ಮೂಲಕ ಹಲ್ಲೆಗಳಿಗೆ ಮುಂದಾಗುವುದು ಒಳ್ಳೆಯ ನಾಗರಿಕತೆಗೆ ಶೋಭೆ ತರುವುದಿಲ್ಲ.ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ಹದ್ದು ಮೀರುತ್ತಿದ್ದು ಇದರ ಸಂಪೂರ್ಣ ವೈಫಲ್ಯವನ್ನು ಪೋಲೀಸ್ ಇಲಾಖೆ ಹೊತ್ತುಕೊಳ್ಳಬೇಕು ಎಂದು ಖಾದರ್ ಗೃಹ ಇಲಾಖೆಗೆ ಚಾಟಿ ಬೀಸಿದರು.
ಇಂಥಹ ಘಟನೆಗಳು ಸಂಭವಿಸಿದಾಗ ಕಾನೂನಾತ್ಮಕ ರೀತಿಯಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಬದಲು ರಾಜಕೀಯ ವ್ಯವಸ್ಥೆಯ ಒತ್ತಡಕ್ಕೆ ಮಣಿದು ಅಂಥಹ ಗೂಂಡಾ ಪ್ರವೃತ್ತಿ ಹೊಂದಿದವರ ವಿರುದ್ಧ ಮೃದು ಧೋರಣೆ ತಾಳುವುದೇ ಇದಕ್ಕೆಲ್ಲಾ ಪ್ರಮುಖ ಕಾರಣ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ಪೋಲೀಸರು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ತಪ್ಪಿತಸ್ಥರನ್ನು ಬಂಧಿಸಿ ಜಾಮೀನಿನ ಮೇಲೆ ಹೊರ ಬರುವಂತಹ ಸಣ್ಣ ಮಟ್ಟದ ಪ್ರಕರಣ ದಾಖಲಿಸುವ ಬದಲು ಕಠಿಣ ಪ್ರಕರಣಗಳನ್ನು ಹಾಕಿ ಇಂಥವರನ್ನು ಜೈಲಿಗಟ್ಟಿದರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ಇಂಥಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಅನೈತಿಕ ಗೂಂಡಾಗಿರಿ ನಡೆಸುವರರ ವಿರುದ್ಧ ಜಾಮೀನು ರಹಿತ ಕಠಿಣ ಕ್ರಮ ಕೈಗೊಂಡು ಜೈಲಿಗೆ ಅಟ್ಟಿದ್ದರಿಂದಲೇ ಇಂಥಹ ಪ್ರಕರಣಗಳಿಗೆ ಕಡಿವಾಣ ಹಾಕಿತ್ತು.
ಗೃಹ ಇಲಾಖೆ ಇನ್ನು ಮುಂದಕ್ಕಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಪೋಲೀಸ್ ವರಿಷ್ಠಾಧಿಕಾರಿ ಜತೆ ಮಾತುಕತೆ ನಡೆಸಿರುವ
ಖಾದರ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಪೋಲೀಸ್ ವರಿಷ್ಠಾಧಿಕಾರಿ ನೀಡಿದ್ದಾರೆ.