ಇತ್ತೀಚಿನ ಸುದ್ದಿ
ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಆಗಮಿಸಲಿರುವ ಮೋದಿ
27/11/2025, 18:44
ಗಿರಿಧರ್ ಕೊಂಪುಳಿರ ಉಡುಪಿ
info.reporterkarnataka@gmail.com
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಹಿನ್ನೆಲೆಯಲ್ಲಿ ನ.28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು,ಸಂಪೂರ್ಣ ಕಾರ್ಯಕ್ರಮ 40 ನಿಮಿಷ ಮುಂಚಿತವಾಗಿ ಆರಂಭವಾಗಲಿದೆ.


ರೋಡ್ ಶೋ ಕೂಡ ನಿಗದಿತ ಸಮಯಕ್ಕೆ ಮುಂಚಿತವಾಗಿ ಬೆಳಗ್ಗೆ 11ರಿಂದ 11.30ರ ವರೆಗೆ ನಡೆಯಲಿದೆ. ಕೃಷ್ಣ ದರ್ಶನದ ಬಳಿಕ ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಭಾಗಿಯಾಗಿ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಮೋದಿ ನಿರ್ಗಮಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಅನಂತರ ಗೀತಾಮಂದಿರಕ್ಕೆ ಭೇಟಿ ನೀಡಿ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದ ರೊಂದಿಗೆ ಮಾತುಕತೆ ನಡೆಸಿ ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿಉಡುಪಿ ಹೆಲಿಪ್ಯಾಡ್‌ಗೆ 11.35ಕ್ಕೆ ಬರುವುದು ನಿಗದಿಯಾಗಿತ್ತು.
*3 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ:*
ಎಸ್‌ಪಿಜಿ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ವಿಭಾಗ ಹೊರತುಪಡಿಸಿ ಸುಮಾರು 3 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಗುರುವಾರ ಬೆಳಗ್ಗೆ ಮಾಕ್ ಡ್ರಿಲ್ ನಡೆಸಲಾಗಿದೆ. ಉಡುಪಿ ನಗರದ ಹೃದಯ ಭಾಗದಲ್ಲಿ ಎಲ್ಲೆಲ್ಲೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ.












