ಇತ್ತೀಚಿನ ಸುದ್ದಿ
ಪಿಎಚ್‌ಡಿ ಪ್ರಬಂಧ ಅನುಮೋದನೆಗೆ ಲಂಚ ಬೇಡಿಕೆ : ಮಂಗಳೂರು ವಿ ವಿ ಸಹಾಯಕ ಪ್ರಾಧ್ಯಾಪಕಿಗೆ 5 ವರ್ಷ ಶಿಕ್ಷೆ
09/07/2021, 18:44
ಮಂಗಳೂರು(Repoterkarnatakanews): ವಿದ್ಯಾರ್ಥಿನಿಯೊಬ್ಬರ ಪ್ರಬಂಧ ಅಂಗೀಕಾರಕ್ಕಾಗಿ ಲಂಚ ಕೇಳಿದ ಆರೋಪದಲ್ಲಿ ಲೋಕಾಯುಕ್ತದಿಂದ ಬಂಧಿನಕ್ಕೊಳಗಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಅನಿತಾ ರವಿಶಂಕರ್ ಗೆ ಲೋಕಾಯುಕ್ತ ನ್ಯಾಯಾಲಯ ಐದು ವರ್ಷ ಸಜೆ ವಿಧಿಸಿದೆ.
ಪಿಹೆಚ್‌ಡಿ ವಿದ್ಯಾರ್ಥಿನಿ ಪ್ರೇಮಾ ಡಿ’ಸೋಜ ಎಂಬವರಿಂದ ಮೈಸೂರಿನಿಂದ ಆಗಮಿಸುವ ಮೌಲ್ಯ ಮಾಪಕರ ಖರ್ಚು ಸೇರಿ ರೂ. 16,800 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, 2012ರ ಡಿಸೆಂಬರ್ 4 ರಂದು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭ ರೂ. 5,000 ಮುಂಗಡ ಹಣ ಸ್ವೀಕರಿಸುತ್ತಿದ್ದಾಗಲೇ ಪ್ರೊಫೆಸರ್ ಅನಿತಾ ರವಿಶಂಕರ್ ಅವರನ್ನು ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ಉಮೇಶ್ ಜಿ. ಶೇಟ್ ಮತ್ತು ಸಿಬ್ಬಂದಿ ಬಂಧಿಸಿದ್ದರು.
ಸದ್ರಿ ಆರೋಪಿ ಮೊದಲು ರೂ. 10,000, ನಂತರ ರೂ.4,000, ಮತ್ತು ಬಳಿಕ ರೂ. 16,800 ನೀಡುವಂತೆ ವಿದ್ಯಾರ್ಥಿನಿ ಬಳಿ ಬೇಡಿಕೆ ಇಟ್ಟಿದ್ದರು. ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ಸಂಸ್ಥೆಯ ಪರವಾಗಿ ಒಟ್ಟು 9 ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳ ಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಅವರ ವಾದವನ್ನು ಪುರಸ್ಕರಿಸಿ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದ್ದು ಆರೋಪಿಗೆ ಶಿಕ್ಷೆ ವಿಧಿಸಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಕಲಂ 7ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 2 ವರ್ಷ ಸಾದಾ ಸಜೆ ಮತ್ತು ರೂ. 15,000/- ದಂಡ, ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 3 ವರ್ಷ ಸಾದಾ ಸಜೆ ಮತ್ತು ರೂ. 15,000/- ದಂಡ, ಆರೋಪಿ ದಂಡ ತೆರಲು ತಪ್ಪಿದಲ್ಲಿ ತಲಾ ಒಂದು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.