ಇತ್ತೀಚಿನ ಸುದ್ದಿ
ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು
06/01/2026, 17:21
- ಮಲೇಷ್ಯಾದ 'ಪೆನಾಂಗ್' ರಾಜ್ಯದ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ಜೊತೆ ಮಹತ್ವದ ಸಭೆ
- ಸೆಮಿಕಂಡಕ್ಟರ್ ಯಶಸ್ಸಿನಲ್ಲಿ 'ಪೆನಾಂಗ್ ವಿವಿ' ಪಾತ್ರದ ಬಗ್ಗೆ ಮೆಚ್ಚುಗೆ; ಉದ್ಯಮ-ಸಂಶೋಧನಾ ಮಾದರಿ ಅಳವಡಿಕೆಗೆ ಚರ್ಚೆ
- ರಾಜ್ಯದ 'ತ್ಯಾಜ್ಯದಿಂದ ಸಂಪತ್ತು' (ಕೆ.ಸಿ ಮತ್ತು ಎಚ್.ಎನ್ ವ್ಯಾಲಿ) ಯೋಜನೆಗಳ ಯಶಸ್ಸನ್ನು ವಿವರಿಸಿದ ಸಚಿವ ಭೋಸರಾಜು
- ಸಂಶೋಧನಾ ಕೇಂದ್ರಗಳ ವೀಕ್ಷಣೆಗಾಗಿ ಮಲೇಷ್ಯಾ ಭೇಟಿ ನೀಡಲು ಸಚಿವರಿಗೆ ಆಹ್ವಾನ
ಬೆಂಗಳೂರು(reporterkarnataka.com): ಮಲೇಷ್ಯಾದ ಪ್ರಮುಖ ಸೆಮಿಕಂಡಕ್ಟರ್ ಹಬ್ ಆಗಿರುವ ಪೆನಾಂಗ್ ರಾಜ್ಯದ ಉನ್ನತ ಮಟ್ಟದ ನಿಯೋಗವು, ಕರ್ನಾಟಕದೊಂದಿಗೆ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಇಂದು ವಿಕಾಸಸೌಧದಲ್ಲಿ ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿಗಳಾದ ಜಗದೀಪ್ ಸಿಂಗ್ ದಿಯೋ ನೇತೃತ್ವದ ನಿಯೋಗದೊಂದಿಗೆ ಸಭೆ ನಡೆಸಿದ ನಂತರ ಸಚಿವರು ಈ ವಿಷಯ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಪೆನಾಂಗ್ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ, ತಮ್ಮ ರಾಜ್ಯದ ಯಶಸ್ಸಿನ ಮಾದರಿಯನ್ನು ವಿವರಿಸಿದರು. “ಪೆನಾಂಗ್ ಭೌಗೋಳಿಕವಾಗಿ ಸಣ್ಣ ರಾಜ್ಯವಾಗಿದ್ದರೂ, ಇಂದು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಬಲವಾದ ‘ಉದ್ಯಮ ಮತ್ತು ಸಂಶೋಧನಾ ಸಹಭಾಗಿತ್ವ’ (Industry-Research Collaboration). ಇದರಲ್ಲಿ ಪೆನಾಂಗ್ ವಿಶ್ವವಿದ್ಯಾಲಯವು (Penang University) ನಿರ್ಣಾಯಕ ಪಾತ್ರ ವಹಿಸಿದೆ. ಉದ್ಯಮಗಳಿಗೆ ನೇರವಾಗಿ ಬೆಂಬಲ ನೀಡುವಂತಹ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ವಿವಿ ನಿರ್ಮಿಸಿದೆ,” ಎಂದು ಅವರು ತಿಳಿಸಿದರು.
ಇದೇ ಮಾದರಿಯನ್ನು ಕರ್ನಾಟಕ ಮತ್ತು ಪೆನಾಂಗ್ ನಡುವೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚರ್ಚೆಯ ವೇಳೆ ಸಚಿವ ಎನ್.ಎಸ್. ಭೋಸರಾಜು ಅವರು ಸಣ್ಣ ನೀರಾವರಿ ಕ್ಷೇತ್ರದಲ್ಲಿ ಕರ್ನಾಟಕ ಸಾಧಿಸಿರುವ ಮೈಲಿಗಲ್ಲುಗಳನ್ನು ಪರಿಚಯಿಸಿದರು. ವಿಶೇಷವಾಗಿ ರಾಜ್ಯದ ‘ತ್ಯಾಜ್ಯದಿಂದ ಸಂಪತ್ತು’ (Waste to Wealth) ಪರಿಕಲ್ಪನೆಯಡಿ ಜಾರಿಗೆ ತಂದಿರುವ ಕೆ.ಸಿ. ವ್ಯಾಲಿ (ಕೋರಮಂಗಲ-ಚಲ್ಲಘಟ್ಟ) ಮತ್ತು ಎಚ್.ಎನ್. ವ್ಯಾಲಿ (ಹೆಬ್ಬಾಳ-ನಾಗವಾರ) ಯೋಜನೆಗಳ ಬಗ್ಗೆ ಗಮನ ಸೆಳೆದರು.




“ನಗರದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅದನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಯಶಸ್ವಿಯಾಗಿ ಹೆಚ್ಚಿಸಿದ್ದೇವೆ. ಕೃಷಿ ಚಟುವಟಿಕೆಗಳಿಗೆ ಇದು ಜೀವ ತುಂಬಿದೆ,” ಎಂದು ಸಚಿವರು ನಿಯೋಗಕ್ಕೆ ವಿವರಿಸಿದರು. ಈ ಸುಸ್ಥಿರ ಅಭಿವೃದ್ಧಿ ಮಾದರಿಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
ಕರ್ನಾಟಕ ಸರ್ಕಾರ ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ರೂಪಿಸಿರುವ ಮಹತ್ವಾಕಾಂಕ್ಷೆಯ ‘ಕ್ವಾಂಟಮ್ ಆಕ್ಷನ್ ಪ್ಲಾನ್’ ನಲ್ಲಿ ಭಾಗಿಯಾಗಲು ಪೆನಾಂಗ್ ನಿಯೋಗ ಉತ್ಸುಕತೆ ತೋರಿತು. “ಪೂರ್ವದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಪೆನಾಂಗ್ ಜೊತೆಗಿನ ಸಹಭಾಗಿತ್ವಕ್ಕೆ ನಮ್ಮ ಸರ್ಕಾರ ಮುಕ್ತವಾಗಿದೆ,” ಎಂದು ಸಚಿವರು ಸ್ವಾಗತಿಸಿದರು. ಬೆಂಗಳೂರು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಾಗೂ ಪೆನಾಂಗ್ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯ ಸಮ್ಮಿಲನದಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಉಭಯ ನಾಯಕರು ಅಭಿಪ್ರಾಯವ್ಯಕ್ತಪಡಿಸಿದರು.
ಸಭೆಯ ಅಂತ್ಯದಲ್ಲಿ, ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ಅವರು ಸಚಿವ ಭೋಸರಾಜು ಅವರಿಗೆ ಮಲೇಷ್ಯಾ ಮತ್ತು ಪೆನಾಂಗ್‌ಗೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದರು. ವಿಶೇಷವಾಗಿ ಪೆನಾಂಗ್‌ನ ವಿಶ್ವವಿದ್ಯಾಲಯದ ಸಂಶೋಧನಾ ಸೌಲಭ್ಯಗಳು ಮತ್ತು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿ, ಮಾನವ ಸಂಪನ್ಮೂಲ ಅಭಿವೃದ್ಧಿ ಒಪ್ಪಂದವನ್ನು (MoU) ಅಂತಿಮಗೊಳಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ, ಕೆ-ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು ಸೇರಿದಂತೆ ಪೆನಾಂಗ್ ರಾಜ್ಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.













